ಭೂಮಿಯ ವಿಕಸನಕ್ಕೆ ಸೂರ್ಯನೇ ಶಕ್ತಿ – ಬೆಂಕಿಯ ಉಂಡೆಯಂತಿದ್ದ ಭೂಮಿ ಅಸ್ತಿತ್ವ ಶುರುವಾಗಿದ್ದು ಎಲ್ಲಿಂದ?

ಭೂಮಿಯ ವಿಕಸನಕ್ಕೆ ಸೂರ್ಯನೇ ಶಕ್ತಿ – ಬೆಂಕಿಯ ಉಂಡೆಯಂತಿದ್ದ ಭೂಮಿ ಅಸ್ತಿತ್ವ ಶುರುವಾಗಿದ್ದು ಎಲ್ಲಿಂದ?

ಅದೂ 4.5 ಶತ ಕೋಟಿ ವರುಷಗಳ ಹಿಂದಿನ ಕಥೆ, ಬೆಂಕಿಯ ಉಂಡೆಯಂತಿದ್ದ ಭೂಮಿ ಮುಂದೆ ಹೇಗೆ ತಣ್ಣಗಾಯ್ತು.. ಅಲ್ಲಿ ಹೇಗೆ ಜೀವಿಗಳ ಸೃಷ್ಟಿಯಾಯಿತು. ಜೀವಿಯ ಸೃಷ್ಟಿಯ ಮೊದಲು ಅಲ್ಲಿ ನೀರು ಉತ್ಪತ್ತಿಯಾದದ್ದು ಹೇಗೆ.. ಭೂಮಿಯಲ್ಲೇ ನೀರು ಉಗಮ ವಾಯ್ತಾ ಅಥವಾ ಆಕಾಶದಿಂದ ಹರಿದು ಬಂತಾ? ಹೀಗೆ ಭೂಮಿಯಲ್ಲಿ ನೀರಿನ ಸೃಷ್ಟಿಯ ಬಗ್ಗೆ ಹಲವಾರು ಕುತೂಹಲಗಳಿವೆ. ಭೂಮಿಯ ಹುಟ್ಟು ಇವತ್ತಿಗೂ ಮನುಷ್ಯನ ಊಹೆಗೂ ನಿಲುಕದ ವಿಷಯ. ಮನುಷ್ಯ, ಪ್ರಾಣಿ, ಪಕ್ಷಿ, ಬೆಟ್ಟ ಪರ್ವತ, ಸಾಗರ ಹೀಗೆ ಎಲ್ಲಾ ಗ್ರಹಗಳಿಂದ ಭಿನ್ನವಾಗಿ ತನ್ನದೇ ವೈಶಿಷ್ಟ ರೂಪದಲ್ಲಿರುವ ಭೂಮಿಯಲ್ಲಿ 4.5 ಶತ ಕೋಟಿ ವರುಷಗಳ ಹಿಂದೆ ಇವುಗಳು ಯಾವುದೂ ಇರಲಿಲ್ಲವಾಗಿತ್ತು. ಬದಲಿಗೆ ಭೂಮಿಯೂ ಬೆಂಕಿಯ ಉಂಡೆಯಂತಿತ್ತು. ಲಾವಾರಸ ದಂತೆ ಕುದಿಯುತ್ತಿತ್ತು. ಹಾಗಾದರೆ ಭೂಮಿಯ ಅಸ್ತಿತ್ವ ಶುರುವಾಗಿದ್ದೇ ಎಲ್ಲಿಂದ? ಜಗತ್ತಿನ ಆರಂಭ ಹೇಗಿತ್ತು ಅನ್ನೋ ಇಂಟ್ರೆಸ್ಟಿಂಗ್‌ ವಿಚಾರ ತಿಳಿದುಕೊಳ್ಳೋಣ..

ಇದನ್ನೂ ಓದಿ: ಭೂಮಿಯಾಳದಲ್ಲಿ ರಂಧ್ರ ಕೊರೆಯುತ್ತಿರುವುದೇಕೆ ಚೀನಾ ? – ಆಳವಾದ ಬೋರ್‌ಹೋಲ್‌ಗೆ ಕಾರಣಗಳೇನು?

ಅದೂ 13.8 ಬಿಲಿಯನ್ ವರುಷಗಳ ಹಿಂದಿನ ಮಾತು. ಆರಂಭದಲ್ಲಿ ಏನೂ ಅಲ್ಲದ.. ಏನೆಂದೂ ವಿವರಿಸಲು ಇಲ್ಲದಂತಿದ್ದ ಒಂದು ಕಣ, ಮುಂದೆ ಮಹಾ ಸ್ಫೋಟ ಗೊಂಡು ಕ್ಷಣಾರ್ಧದಲ್ಲೇ ಒಂದು ಬ್ರಹ್ಮಾಂಡವೇ ಸೃಷ್ಟಿಯಾಗಿತ್ತು. ಶತ ಕೋಟಿ ಮೈಲಿಗಳ ದೂರಕ್ಕೆ ಈ ಬ್ರಹ್ಮಾಂಡವೂ ಚಾಚಿಕೊಂಡಿತ್ತು. ಮಹಾ ಸ್ಫೋಟದ ರಭಸಕ್ಕೆ ಕಲ್ಲು ಬಂಡೆ ಗಳಂತೆ ಕಾಣುವ ಕಣಗಳು ಅಲ್ಲಲ್ಲಿ ಸಿಡಿಯ ತೊಡಗಿದವು. ಅಪರಿಮಿತ ಶಾಖ. ಅದೂ ಪರಮಾಣು ಶಕ್ತಿಯನ್ನ ಸೃಷ್ಟಿಸುವ ಶಾಖ ಅಲ್ಲಿ ಉತ್ಪತಿಯಾಗಿದ್ದವು. ಇದನ್ನ  ಬಿಗ್ ಬ್ಯಾಂಗ್ ಮಹಾ ಸ್ಫೋಟ ಅಂತಾ ಹೇಳುತ್ತಾರೆ ಖಗೋಳ ಶಾಸ್ತ್ರಜ್ಞರು. ಹೀಗೆ ಸೃಷ್ಟಿಯಾದ  ಜಗತ್ತಿನಲ್ಲಿ ಭೂಮಿಯೇನೋ ತಕ್ಷಣವೇ ಪ್ರತ್ಯಕ್ಷವಾಗಿರಲಿಲ್ಲ. ಆದರೆ ಹೀಗೆ ಉದಯಿಸಿದ ಜಗತ್ತು ಮುಂದೆ ಹಿಗ್ಗುತ್ತಾ ಹೋಗುತ್ತದೆ. ಬ್ರಹ್ಮಾಂಡ ದ ಒಳಗೆ ಹಲವಾರು ರಾಸಾಯನಿಕ ಕ್ರಿಯೆಗಳು ನಡೆಯುತ್ತವೆ. ಅಂದರೇ ಜಗತ್ತು ರೂಪಾಂತರವಾಗುತ್ತಾ ಹೋಗುತ್ತದೆ. ಮುಂದೆ ಸುಮಾರು 5 ಬಿಲಿಯನ್ ವರುಷಗಳ ಹಿಂದೆ ಗ್ಯಾಲಕ್ಸಿ ಎಂಬ ಕ್ಷೀರ ಪಥದಲ್ಲಿ ಉಂಟಾದ ಸ್ಫೋಟದಿಂದ ಸೂರ್ಯ ಮತ್ತು ಭೂಮಿ ಸೇರಿದಂತೆ ಉಳಿದ ಗ್ರಹಗಳೂ ಹುಟ್ಟಿಕೊಳ್ಳುತ್ತವೆ. ಆದರೆ ಈ ರೂಪಾಂತರಕ್ಕೆ ನೂರಾರು ಕೋಟಿ ವರುಷಗಳೇ ಬೇಕಾಗಿತ್ತು. ಅಷ್ಟೇ ಅಲ್ಲದೇ ಜಗತ್ತು ಈಗಲೂ ವಿಸ್ತರಿಸುತ್ತಾ ಹೋಗುತ್ತಿದೆ ಅನ್ನೋ ಸಿದ್ದಾಂತ ಕೂಡಾ ಇದೆ.

ಭೂಮಿಯಲ್ಲಿನ ನೀರಿನ ಹುಟ್ಟಿನ ಹಿಂದಿದೆ ಉಲ್ಕೆಗಳ ಮಳೆ!

ಜಗತ್ತಿನ ಉಗಮದ ಬಗ್ಗೆ ಸರಳವಾಗಿ ಹೇಳಿ ಮುಗಿಸುವ  ಸಂಗತಿಯಲ್ಲ. ಅಲ್ಲಿ ಕಲ್ಪನಾತೀತವಾದ ವಿಸ್ಮಯಗಳಿವೆ. ಇಂದಿಗೂ ವಿಜ್ಞಾನಿಗಳಿಗೆ ಕಂಡುಹಿಡಿಯಲಾರದ ಅದೆಷ್ಟೋ ರಹಸ್ಯಗಳೂ ಇವೆ. ಆದರೆ  ಭೂಮಿಯಲ್ಲಿ ನೀರಿನ ಮೂಲ ಹೇಗೆ ಸೃಷ್ಟಿಯಾಯಿತು ಅನ್ನೋ ಬಗ್ಗೆ ಇತ್ತೀಚೆಗೆ  ವಿಜ್ಞಾನಿಗಳು ಬಿಚ್ಚಿಟ್ಟ ಕೆಲವೊಂದು ಕುತೂಹಲದ ವಿಷಯಗಳು ಇಲ್ಲಿವೆ. ಅಂದ ಹಾಗೇ ಭೂಮಿಯಲ್ಲಿ ನೀರಿನ ಉಗಮ ಹೇಗೆ ಆಯ್ತು ಅನ್ನೋ ಬಗ್ಗೆ ಬಾಹ್ಯಾಕಾಶ ವಿಜ್ಞಾನಿಗಳ ಬಳಿ ಒಂದು ಥಿಯರಿ ಇತ್ತು. 4.5 ಬಿಲಿಯನ್ ವರುಷಗಳ ಹಿಂದೆ ಮಹಾ ಸ್ಫೋಟ ಕ್ಕೆ ಸೃಷ್ಟಿಯಾದ ಸೌರ ಮಂಡಲ ದಲ್ಲಿ ಒಂದಾದ ಭೂಮಿ, ಅಂದು ಅಗ್ನಿಯ ಚೆಂಡಾಗಿತ್ತು. ಮುಂದೆ ಭೂಮಿ ಹಿಗ್ಗುತ್ತಾ ಹೋಗುತ್ತಿದ್ದಂತೆ ಭೂಮಿಯಲ್ಲಿ ಉಲ್ಕೆಗಳ ಮಳೆ ಸುರಿಯತೊಡಗಿತು. ಇದೂ ಸುಮಾರು ಕೋಟಿ ವರುಷಗಳ ಕಾಲ ನಡೆದಿತ್ತು. ಈ ಸಂದರ್ಭದಲ್ಲಿ ಕುದಿಯುತ್ತಿದ್ದ ಭೂಮಿ ತಣ್ಣಗಾಗುತ್ತಾ ಬಂದಿತ್ತು. ಮುಂದೆ ಭೂಮಿಯಲ್ಲಿ ನೀರು ಸೃಷ್ಟಿಯಾಯಿತು. ಸಾಗರಗಳೂ ಕೂಡಾ ಹುಟ್ಟಿಕೊಂಡವು. ಯಾಕೆಂದರೆ ಉಲ್ಕೆಗಳಿಂದ ಬಂದ ಮಂಜು ಇದಕ್ಕೆ ಕಾರಣ ಅನ್ನೋ ಥಿಯರಿ ಅಲ್ಲಿ ಹುಟ್ಟಿಕೊಂಡಿತ್ತು. ಆದರೆ ಈಗ ಮತ್ತೊಮ್ಮೆ ವಿಜ್ಞಾನಿಗಳೂ ಈ ಥಿಯರಿ ಗೆ ಸಾಥ್ ಕೊಡುವಂತ ಮತ್ತೊಂದು ಹೊಸ ಸಿದ್ದಾಂತವನ್ನ ಕಂಡು ಕೊಂಡಿದ್ದಾರೆ. ಈ ಮೂಲಕ ಭೂಮಿಯ ನೀರಿನ ಉಗಮಕ್ಕೆ ಕೇವಲ ಉಲ್ಕೆಗಳೂ ಮಾತ್ರ ಕಾರಣವಲ್ಲ. ಅದರಾಚೆಗೆ ಇನ್ನೊಂದು  ಮೂಲವಿದೆ ಅನ್ನೋ ಸತ್ಯವನ್ನ ತೆರೆದಿಟ್ಟಿದ್ದಾರೆ.

ಇದು ಬರೀ ಉಲ್ಕೆಯ ಮಳೆಯಲ್ಲಾ.. ಅದರಾಚೆಗೆ ಇದೇ ಮತ್ತೊಂದು ಕಾರಣ!

ಭೂಮಿಯ ನೀರಿನ ಉಗಮದ ಇನ್ನೊಂದು ಮೂಲ ಯಾವುದು ಗೊತ್ತಾ..ಸೂರ್ಯ. ಹೌದೂ..ಜಪಾನ್ ದೇಶದ 2010 ರ ಹಾಯಾಬೂಸಾ ( Hayabusa ) ಮಿಷನ್ ನಿಂದ ಪಡೆದ ಪ್ರಾಚೀನ ಕ್ಷುದ್ರ ಗ್ರಹದ ಮಾದರಿಯನ್ನ ವಿಶ್ಲೇಷಿಸಿದಾಗ ಭೂಮಿಯ ಮೇಲಿನ ನೀರು ಬಾಹ್ಯಾಕಾಶದ ಧೂಳಿನ ಕಣಗಳಿಂದ ಬಂದಿದೆ ಅನ್ನೋ ವಿಷಯವು ಹೊರ ಬಂದಿದೆ. ಸೂರ್ಯ ನಲ್ಲಿ ಎದ್ದ ಸೌರ ಮಾರುತದಿಂದ ರಚನೆಗೊಂಡ ಚಾರ್ಜಡ್ (charged) ಕಣಗಳು ಬಾಹ್ಯಕಾಶದ ಧೂಳಿನ ಕಣಗಳೊಂದಿಗೆ ಸಂಯೋಜನೆಗೊಂಡು ಅದೂ ನೀರಾಗಿ ರೂಪುಗೊಂಡಿತು. ಅಂದರೆ ಸೂರ್ಯ ನ ಮೇಲೆ ಎದ್ದ ಸೌರ ಮಾರುತಗಳಿಂದ ಹೊರ ಸೂಸಿದ ಹೈಡ್ರೋಜನ್ ಅಯಾನ್ ಗಳೂ ಕ್ಷುದ್ರಗ್ರಹ ಅಥವಾ ಬಾಹ್ಯಕಾಶ ದಲ್ಲಿ ಇದ್ದ ಧೂಳಿನ ಕಣಗಳ ಮೇಲೆ ಡಿಕ್ಕಿ ಹೊಡೆದು ಅವುಗಳ ಜೊತೆ ಸಂಯೋಜನೆ ಹೊಂದುತ್ತವೆ. ಮುಂದೆ ಅವುಗಳು ಅಂದರೆ ಕ್ಷುದ್ರ ಗ್ರಹಗಳೂ, ಉಲ್ಕೆಗಳು ಮತ್ತೂ ಸೌರ ಮಾರುತಗಳೂ ಭೂಮಿಗೆ ಅಪ್ಪಳಿಸಿದಾಗ ಅಲ್ಲಿದ್ದ ಆಮ್ಲಜನಕ ಕಣಗಳೊಂದಿಗೆ  ಸಂಯೋಜನೆಗೊಂಡು ಬಂಡೆ ಮತ್ತು ಧೂಳಿನೊಳಗೆ ನೀರಿನ ಅಣುಗಳನ್ನ ಸೃಷ್ಟಿಸುತ್ತವೆ. ಮುಂದೆ ಭೂಮಿಯಲ್ಲಿ ಸಾಗರಗಳೂ ಸೃಷ್ಟಿಯಾಗುತ್ತವೆ. ಜೀವ ಸಂಕುಲ ಉದ್ಭವವಾಗುತ್ತದೆ. ಇಂತದೊಂದು ಸಂಶೋಧನೆಗೆ ಕಾರಣ ಈ ಹಿಂದೆ ಪ್ರಾಚೀನ ಕ್ಷುದ್ರ ಗ್ರಹವಾದ ಇಟೋಕವ  ( Itokawa )  ದಲ್ಲಿ ನೀರಿನ ಅಂಶವಿರೋದನ್ನ ವಿಜ್ಞಾನಿಗಳನ್ನ ಕಂಡು ಹಿಡಿದಿದ್ದರು. ಹಾಗಾಗಿ ಈ ಬಗ್ಗೆ ಕುತೂಹಲಗೊಂಡ ವಿಜ್ಞಾನಿಗಳು ಇಟೊಕವಾ ಕ್ಷುದ್ರ ಗ್ರಹ ದ ಮೇಲಿನ ಕಣಗಳನ್ನ, hayabusa ಮಿಷನ್ ಮೂಲಕ ಸಂಗ್ರಹಿಸಿ ಇದರ ಮೇಲೆ ಹೆಚ್ಚಿನ ಅಧ್ಯಯನ ಮಾಡಿದಾಗ ಈ ನೀರಿನ ಅಂಶ ಬಾಹ್ಯಾಕಾಶ ದಲ್ಲಿ ಇದ್ದ ಧೂಳಿನ ಕಣಗಳಿಂದ ಬಂದಿದೆ ಅನ್ನೋ ಹೊಸ ಸತ್ಯವನ್ನ ಮುಂದಿಟ್ಟಿದ್ದಾರೆ.

ಈ ಮೂಲಕ ಭೂಮಿಯ ಮೇಲಿನ ನೀರಿನ ಉದ್ಭವಕ್ಕೆ ಕೇವಲ ಉಲ್ಕೆಗಳು ಕಾರಣವಲ್ಲ. ಬದಲಿಗೆ ಉಲ್ಕೆಗಳ ಜೊತೆಗೆ ಕ್ಷುದ್ರ ಗ್ರಹಗಳು ಕೂಡಾ ಇದ್ದಾವೆ. ಆದರೆ ಎಲ್ಲದಕ್ಕಿಂತ ಮುಖ್ಯವಾಗಿ ಈ ಉಲ್ಕೆ ಮತ್ತು ಕ್ಷುದ್ರ ಗ್ರಹಗಳಲ್ಲಿದ್ದ ನೀರಿನ ಅಂಶದ ಹಿಂದೆ ಸೂರ್ಯ ನ ಮೇಲೆ ನಡೆದ ಸೌರ ಮಾರುತಗಳೇ ಕಾರಣ ಅನ್ನೋ ಹೊಸ ವಿಸ್ಮಯವನ್ನ ವಿಜ್ಞಾನಿಗಳು ಕಂಡು ಕೊಂಡಿದ್ದಾರೆ. ಒಟ್ಟಿನಲ್ಲಿ  ಭೂಮಿಯ ವಿಕಸನಕ್ಕೆ ಸೂರ್ಯನೇ ದೊಡ್ಡ ಶಕ್ತಿ ಅನ್ನೋ ಸತ್ಯಕ್ಕೆ ಇಂತ ಸಂಶೋಧನೆಗಳೂ ಹೆಚ್ಚಿನ ಬೆಳಕು ಚೆಲ್ಲುತ್ತಿವೆ. ಜೊತೆಗೆ ಇದು ಜಗತ್ತಿನ ಸೃಷ್ಟಿಯ ಬಗ್ಗೆ ತಿಳಿದುಕೊಳ್ಳುವ ಹೊಸ ಹೊಸ ಸಂಶೋಧನೆಗಳಿಗೆ  ಹೆಚ್ಚಿನ ಸಹಕಾರಿಯಾಗುತ್ತದೆ.

suddiyaana