ಇನ್ನೂ ಬಾರದ ಮಳೆ – ಮತ್ತೆ ಬೇಸಿಗೆ ರಜೆ ವಿಸ್ತರಿಸಿದ ಶಿಕ್ಷಣ ಇಲಾಖೆ

ಇನ್ನೂ ಬಾರದ ಮಳೆ – ಮತ್ತೆ ಬೇಸಿಗೆ ರಜೆ ವಿಸ್ತರಿಸಿದ ಶಿಕ್ಷಣ ಇಲಾಖೆ

ಉತ್ತರಪ್ರದೇಶ: ದೇಶದ ಹಲವೆಡೆ ಉತ್ತಮ ಮಳೆಯಾಗುತ್ತಿದ್ದರೆ, ಇನ್ನೂ ಕೆಲವೆಡೆ ಮಳೆಯ ಸುಳಿವೇ ಇಲ್ಲ. ಇದರಿಂದಾಗಿ ಕೆಲ ರಾಜ್ಯಗಳಲ್ಲಿ ಬಿಸಿಲಿನ ಝಳ ಹೆಚ್ಚಾಗುತ್ತಿದೆ. ಕುಡಿಯುವ ನೀರಿನ ಅಭಾವ ಉಂಟಾಗಿದೆ. ಉತ್ತರಪ್ರದೇಶ ಕೂಡ ಇದಕ್ಕೆ ಹೊರತಾಗಿಲ್ಲ. ಉತ್ತರ ಭಾರತದಲ್ಲಿ ಮಳೆ ವಿಳಂಬವಾದ ಹಿನ್ನೆಲೆ ಮತ್ತೆ ಬೇಸಿಗೆ ರಜೆ ವಿಸ್ತರಿಸಲಾಗಿದೆ.

ಇದನ್ನೂ ಓದಿ:ಟೆಲಿಗ್ರಾಮ್‌ ನಲ್ಲಿ ಹೊಸ ಫೀಚರ್‌! – ಜುಲೈನಿಂದ ʼಸ್ಟೋರಿಸ್‌ʼ ವೈಶಿಷ್ಟ್ಯ ಆರಂಭ 

ಮಳೆ ವಿಳಂಬವಾದ ಹಿನ್ನೆಲೆ ಉತ್ತರಪ್ರದೇಶ ರಾಜ್ಯ ಶಿಕ್ಷಣ ಇಲಾಖೆ ಬೇಸಿಗೆ ರಜೆಯನ್ನು ವಿಸ್ತರಿಸಿದೆ. ಜೂನ್ 27 ರಂದು ಶಾಲೆಗಳು ಪುನರಾರಂಭವಾಗಬೇಕಿತ್ತು. ಆದರೆ ಬಿಸಿಲಿನ ತಾಪ ಹೆಚ್ಚಾದ ಹಿನ್ನೆಲೆ  ಈಗ ಎಲ್ಲಾ ಸಂಯೋಜಿತ ಶಾಲೆಗಳಲ್ಲಿ ಬೇಸಿಗೆ ರಜೆಯನ್ನು ಜುಲೈ 02 ರವರೆಗೆ ವಿಸ್ತರಿಸಿದೆ. ಬಿಸಿಲಿನ ಬೇಗೆಯನ್ನು ಗಮನದಲ್ಲಿಟ್ಟುಕೊಂಡು, ಉತ್ತರ ಪ್ರದೇಶ ಸರ್ಕಾರವು ಶಾಲೆಗಳನ್ನು ಸದ್ಯಕ್ಕೆ ಮುಚ್ಚಲು ನಿರ್ಧರಿಸಿದೆ.

ಉತ್ತರ ಪ್ರದೇಶ ಮತ್ತು ದೇಶದ ಇತರ ಹಲವು ಪ್ರದೇಶಗಳಲ್ಲಿ ತೀವ್ರ ಶಾಖದ ಅಲೆ ಇದೆ. ಆದ್ದರಿಂದ ಮಕ್ಕಳಿಗೆ ಈ ಶಾಖದ ಹೊಡೆತದಿಂದ ರಕ್ಷಿಸಲು, ಯುಪಿ ಸರ್ಕಾರವು ಬೇಸಿಗೆ ರಜೆ ವಿಸ್ತರಿಸಿದೆ. ಉತ್ತರ ಪ್ರದೇಶ ಬೇಸಿಗೆ ರಜೆಯನ್ನು ವಿಸ್ತರಿಸುತ್ತಿರುವುದು ಇದು ಎರಡನೇ ಬಾರಿ. ಶಾಲೆಗಳು ಜೂನ್ 15 ರಂದು ಪುನರಾರಂಭವಾಗಬೇಕಿತ್ತು. ಆದರೆ ಅದರ ದಿನಾಂಕವನ್ನು ಮೊದಲು ಜೂನ್ 25ಕ್ಕೆ ಮತ್ತು ಈಗ ಜುಲೈ 02 ಕ್ಕೆ ವಿಸ್ತರಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶಾಲೆ ತೆರೆಯುವ ಮುನ್ನ ಶೌಚಾಲಯಗಳ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಿದ್ಯಾರ್ಥಿಗಳಿಗೆ ಸೂಕ್ತ ಆಸನ ವ್ಯವಸ್ಥೆ ಕಲ್ಪಿಸಬೇಕು ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ. ಇದಲ್ಲದೆ, ಕೌನ್ಸಿಲ್ ಅಡಿಯಲ್ಲಿ ನಡೆಯುವ ಮಾನ್ಯತೆ ಪಡೆದ ಶಾಲೆಗಳಲ್ಲಿ ಬೇಸಿಗೆ ರಜೆಯ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಶಾಲಾ ಆಡಳಿತ ಸಮಿತಿಗೆ ಅಧಿಕಾರ ನೀಡಲಾಗುವುದು ಎಂದು ಯುಪಿ ಸರ್ಕಾರದ ಅಧಿಕೃತ ಆದೇಶದಲ್ಲಿ ಹೇಳಲಾಗಿದೆ.

suddiyaana