‘ಟೈಟಾನಿಕ್’ ಹಡಗಿನ ಅವಶೇಷಗಳನ್ನು ನೋಡಲು ಹೋದಾಗ ದುರಂತ – ಪ್ರವಾಸಿಗರಿದ್ದ ಜಲಾಂತರ್ಗಾಮಿ ನಾಪತ್ತೆ..!
‘ಮುಳುಗಲಾರದ ಹಡಗು’ ಎಂದು ಜಗತ್ತಿಗೆ ಸಂದೇಶ ರವಾನೆ ಮಾಡಿದ ಟೈಟಾನಿಕ್ ಹಡಗು ಮುಳುಗುವುದೇ ಇಲ್ಲ ಅಂತಾ ಎಲ್ಲರೂ ಅಂದುಕೊಂಡಿದ್ದರು. ಆದರೆ ಟೈಟಾನಿಕ್ ಹಡಗು ತನ್ನ ಮೊದಲ ಯಾನದಲ್ಲೇ ಅಪಘಾತಕ್ಕೀಡಾಗಿತ್ತು. ಮುಳುಗಲಾರದ ಹಡಗು ಎಂದು ಸಂಭ್ರಮದಲ್ಲಿ ಪ್ರಯಾಣಿಕರನ್ನು ಹೊತ್ತೊಯ್ದಿದ್ದ ಟೈಟಾನಿಕ್ ಅಂದು ಮುಳುಗಿಹೋಗಿತ್ತು. ಟೈಟಾನಿಕ್ ನಮ್ಮ ಜೊತೆ ಇದ್ದದ್ದು ಅಲ್ಪಾವಧಿಯಾದರೂ, ಅದು ಈಗಲೂ ಅಚ್ಚಳಿಯದ ನೆನಾಪಾಗಿ ಉಳಿದಿದೆ. ಇದೀಗ ಅದೇ ಟೈಟಾನಿಕ್ ಹಡಗು ಮುಳುಗಿದ ಸ್ಥಳ ಅಟ್ಲಾಂಟಿಕ್ ಸಾಗರದಿಂದ ಮತ್ತೊಂದು ಆಘಾತಕಾರಿ ಸುದ್ದಿ ಕೇಳಿಬಂದಿದೆ. ಟೈಟಾನಿಕ್ ಹಡಗಿನ ಅವಶೇಷಗಳಿರುವ ಕಡೆಗೆ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಜಲಾಂತರ್ಗಾಮಿ ಅಟ್ಲಾಂಟಿಕ್ ಸಾಗರದಲ್ಲಿ ನಾಪತ್ತೆಯಾಗಿದೆ.
ಇದನ್ನೂ ಓದಿ: ಮೆಗಾ ಸ್ಟಾರ್ ಕುಟುಂಬಕ್ಕೆ ರಾಜಕುಮಾರಿ ಆಗಮನ – ರಾಮ್ ಚರಣ್, ಉಪಾಸನಾ ದಂಪತಿಗೆ ಹೆಣ್ಣು ಮಗು
ಅಮೆರಿಕದ ಕರಾವಳಿ ಕಾವಲು ಪಡೆ ಈ ಬಗ್ಗೆ ಮಾಹಿತಿ ನೀಡಿದೆ. ಈ ಜಲಾಂತರ್ಗಾಮಿ ಒಂದು ಬಾರಿ 5 ಜನರನ್ನು ಹೊತ್ತೊಯ್ಯಬಹುದು ಎನ್ನಲಾಗಿದೆ. ಟೈಟಾನಿಕ್ ಹಡಗು ದುರಂತದ ಅವಶೇಷಗಳನ್ನು ವೀಕ್ಷಿಸಲು ಪ್ರವಾಸಿಗರನ್ನು ಈ ಜಲಾಂರ್ಗಾಮಿ ಹೊತ್ತೊಯ್ದಿತ್ತು. ಸಿಬ್ಬಂದಿ ಸೇರಿ ಅದರಲ್ಲಿದ್ದ ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ರೀತಿಯಲ್ಲೂ ಪ್ರಯತ್ನಿಸಲಾಗುತ್ತಿದೆ ಎಂದು ವರದಿಯೊಂದು ತಿಳಿಸಿದೆ.
ಏಪ್ರಿಲ್ 14, 1912 ರಂದು ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ದೊಡ್ಡ ಮಂಜುಗಡ್ಡೆಗೆ (ಐಸ್ ರಾಕ್) ಡಿಕ್ಕಿ ಹೊಡೆದ ನಂತರ ಟೈಟಾನಿಕ್ ಹಡಗು ಎರಡು ತುಂಡಾಗಿ ಸಮುದ್ರದಲ್ಲಿ ಮುಳುಗಿತ್ತು. 1,500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಏಪ್ರಿಲ್ 10 ರಂದು, ಟೈಟಾನಿಕ್ ಹಡಗು ಬ್ರಿಟನ್‌ನ ಸೌತಾಂಪ್ಟನ್ ಬಂದರಿನಿಂದ ನ್ಯೂಯಾರ್ಕ್‌ಗೆ ಪ್ರಯಾಣ ಬೆಳೆಸಿತ್ತು. ಹಾಲಿವುಡ್‌ನ ಖ್ಯಾತ ಚಲನಚಿತ್ರ ನಿರ್ಮಾಪಕ ಜೇಮ್ಸ್ ಕ್ಯಾಮರೂನ್ ಕೂಡಾ ಟೈಟಾನಿಕ್ ಹಡಗು ದುರಂತದ ಬಗ್ಗೆ ಅದೇ ಹೆಸರಿನಲ್ಲಿ ಚಲನಚಿತ್ರವನ್ನು ನಿರ್ಮಿಸಿದ್ದಾರೆ. ಇದರಲ್ಲಿ ಟೈಟಾನಿಕ್ ಅಪಘಾತವನ್ನು ಬಹಳ ಹತ್ತಿರದಿಂದ ತೋರಿಸಲಾಗಿದೆ. ಈ ಚಿತ್ರ ವಿಶ್ವಾದ್ಯಂತ ಪ್ರಶಂಸೆಗೆ ಪಾತ್ರವಾಯಿತು.