ಕಳುವಾಗಿದ್ದ ಕ್ರಿಕೆಟ್ ಕಿಟ್‌ಗಳು ಕೊನೆಗೂ ಪತ್ತೆ – ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿರಾಳ..!
ಕಬ್ಬನ್ ಪಾರ್ಕ್ ಪೊಲೀಸರ ಕಾರ್ಯಾಚರಣೆ - ಇಬ್ಬರ ಬಂಧನ

ಕಳುವಾಗಿದ್ದ ಕ್ರಿಕೆಟ್ ಕಿಟ್‌ಗಳು ಕೊನೆಗೂ ಪತ್ತೆ – ಡೆಲ್ಲಿ ಕ್ಯಾಪಿಟಲ್ಸ್ ತಂಡ ನಿರಾಳ..!ಕಬ್ಬನ್ ಪಾರ್ಕ್ ಪೊಲೀಸರ ಕಾರ್ಯಾಚರಣೆ - ಇಬ್ಬರ ಬಂಧನ

ಡೆಲ್ಲಿ ಕ್ಯಾಪಿಟಲ್ಸ್ ತಂಡ ಕೊನೆಗೂ ಕಳೆದುಕೊಂಡಿರುವ ಕ್ರಿಕೆಟ್ ಕಿಟ್ ನ್ನು ಮರಳಿ ಪಡೆದುಕೊಂಡಿದೆ. ಕಳುವಾಗಿದ್ದ ಬ್ಯಾಟ್‌ಗಳು ಮತ್ತು ಕಿಟ್‌ಗಳನ್ನು ಪತ್ತೆ ಮಾಡುವಲ್ಲಿ ಕಬ್ಬನ್ ಪಾರ್ಕ್ ಪೊಲೀಸರು ಯಶಸ್ವಿಯಾಗಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಕಿಟ್ ಪತ್ತೆಯಾದ ಬಗ್ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕ ಡೇವಿಡ್ ವಾರ್ನರ್ ಅಧಿಕೃತ ಮಾಹಿತಿಯನ್ನು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ‘ಧೋನಿ’ಯಂಥಾ ನಾಯಕನನ್ನು ಕ್ರಿಕೆಟ್ ಜಗತ್ತು ಈ ಹಿಂದೆಂದೂ ಕಂಡಿಲ್ಲ – ಗವಾಸ್ಕರ್ ಮನಗೆದ್ದ ಕೂಲ್ ಕ್ಯಾಪ್ಟನ್

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏ.15 ರಂದು ನಡೆದ ಪಂದ್ಯದಲ್ಲಿ 23 ರನ್‌ಗಳ ಸೋಲುಂಡಿದ್ದ ಡೆಲ್ಲಿ ಕ್ಯಾಪಿಟಲ್ಸ್ ಬಳಿಕತ ತವರಿಗೆ ಮರಳಿತ್ತು. ಈ ಸಂದರ್ಭದಲ್ಲಿ ಡೆಲ್ಲಿ ವಿಮಾನ ನಿಲ್ದಾಣದಲ್ಲಿ ಡೆಲ್ಲಿ ತಂಡದ 17 ಕಿಟ್‌ಗಳು ಇಲ್ಲದಿರುವುದು ಗಮನಕ್ಕೆ ಬಂದಿತ್ತು. ಪ್ರತಿ ಕಿಟ್ ಕನಿಷ್ಠ 1 ಲಕ್ಷ ರೂ. ಬೆಲೆ ಬಾಳುತ್ತವೆ ಎಂದು ಅಂದಾಜಿಸಲಾಗಿತ್ತು. ಅದರಲ್ಲೂ ವಿದೇಶಿ ಆಟಗಾರರು ಬಳಕೆ ಮಾಡುವ ಒಂದು ಬ್ಯಾಟ್‌ ಕನಿಷ್ಠ 1 ಲಕ್ಷ ರೂ. ಮೌಲ್ಯದ್ದು ಎಂದು ಹೇಳಲಾಗಿತ್ತು. ಇದೀಗ ಪೊಲೀಸರ ಚುರುಕು ಕಾರ್ಯಾಚರಣೆಯಿಂದಾಗಿ ಕಳುವಾಗಿದ್ದ ಕಿಟ್‌ಗಳು ಪತ್ತೆಯಾಗಿವೆ. ಒಟ್ಟಾರೆ 17 ಬ್ಯಾಟ್‌ಗಳು, ಜೊತೆಗೆ ಗ್ಲೌಸ್, ಹೆಲ್ಮೆಟ್ ಸೇರಿ ಹಲವು ವಸ್ತುಗಳನ್ನು ಪತ್ತೆ ಮಾಡುವಲ್ಲಿಯೂ ಪೊಲೀಸರು ಯಶಸ್ವಿಯಾಗಿದ್ದಾರೆ.

ಇನ್ನು ಹಳೆಯ ಕಿಟ್ ಕಳುವಾಗಿ, ಹೊಸ ಕಿಟ್‌ನೊಂದಿಗೆ ಅಂಗಳಕ್ಕಿಳಿದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಏ.20ರ ಪಂದ್ಯದಲ್ಲಿ ಕೋಲ್ಕತಾ ವಿರುದ್ಧ ತನ್ನ ಮೊದಲ ಗೆಲುವನ್ನು ಸಂಭ್ರಮಿಸಿತ್ತು. ಕಿಟ್‌ಗಳು ಕಳುವಾಗಿರುವ ವಿಚಾರ ಒಂದು ದಿನದ ಬಳಿಕ ಗಮನಕ್ಕೆ ಬಂದಿದೆ. ನಾಯಕ ಡೇವಿಡ್ ವಾರ್ನರ್ ಮತ್ತು ಸ್ಟಾರ್ ಬ್ಯಾಟರ್ ಮಿಚೆಲ್ ಸ್ಟಾರ್ಕ್ ತಲಾ 2 ಬ್ಯಾಟ್ ಕಳೆದುಕೊಂಡರೆ ಇಂಗ್ಲೆಂಡ್ ಆಟಗಾರ ಫಿಲ್ ಸಾಲ್ಟ್ ಮೂರು ಬ್ಯಾಟ್ ಕಳೆದುಕೊಂಡಿದ್ದರು. ಯುವ ಬ್ಯಾಟ್ಸ್‌ಮನ್ ಯಶ್ ಧುಲ್ 5 ಬ್ಯಾಟ್‌ಗಳನ್ನು ಕಳೆದುಕೊಂಡಿದ್ದರು. ಸರಕು ನಿರ್ವಹಣೆಯ ಸಂಸ್ಥೆಯು ಒಂದು ದಿನ ತಡವಾಗಿ ಕಳ್ಳತನದ ಸಂಗತಿಯನ್ನು ಡೆಲ್ಲಿ ಫ್ರಾಂಚೈಸಿಗೆ ತಿಳಿಸಿತ್ತು. ನಂತರ ಎಚ್ಚೆತ್ತುಕೊಂಡ ಡೆಲ್ಲಿ ಫ್ರಾಂಚೈಸಿ ಪೊಲೀಸರಿಗೆ ದೂರು ನೀಡಿತ್ತು. ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಕಿಟ್ ಕಳುವಾಗಿರುವ ವಿಚಾರ ಮುಟ್ಟಿಸಿದ್ದರು. ಅಲ್ಲದೆ ಬೆಂಗಳೂರಿನಲ್ಲಿ ಕಿಟ್ ಕಳುವಾದ ಶಂಕೆಯಿಂದ ಇಲ್ಲಿನ ಪೊಲೀಸರಿಗೆ ತಂಡ ಮಾಹಿತಿ ರವಾನಿಸಿತ್ತು.

suddiyaana