ಬಿ.ಸರೋಜಾದೇವಿ ಹೆಸರಿನಲ್ಲಿ ಅಭಿನಯ ಸರಸ್ವತಿ ಪ್ರಶಸ್ತಿ ಘೋಷಿಸಿದ ರಾಜ್ಯ ಸರ್ಕಾರ!

ಹಿರಿಯ ನಟಿ, ಪಂಚಭಾಷಾ ತಾರೆ ಬಿ ಸರೋಜಾದೇವಿ ಇತ್ತೀಚೆಗೆ ನಿಧನರಾಗಿದ್ದರು. ಕನ್ನಡ, ತಮಿಳು, ತೆಲುಗು, ಮತ್ತು ಹಿಂದಿ ಚಿತ್ರರಂಗದಲ್ಲಿ ಸುಮಾರು 200 ಚಿತ್ರಗಳಲ್ಲಿ ನಟಿಸಿರುವ ಸರೋಜಾದೇವಿ, ‘ಅಭಿನಯ ಸರಸ್ವತಿ’ ಮತ್ತು ‘ಕನ್ನಡದ ಗಿಳಿ’ ಎಂಬ ಬಿರುದುಗಳಿಂದ ಖ್ಯಾತರಾಗಿದ್ದಾರೆ. ಇತ್ತೀಚೆಗೆ ರಾಜ್ಯಸರ್ಕಾರ ನಟಿ ಬಿ ಸರೋಜಾದೇವಿ ಅವರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಘೋಷಿಸಿತ್ತು. ಇದೀಗ ಕರ್ನಾಟಕ ಸರ್ಕಾರ ಬಿ.ಸರೋಜಾದೇವಿ ಅವರ ಹೆಸರಿನಲ್ಲಿ ಅಭಿನಯ ಸರಸ್ವತಿ ಪ್ರಶಸ್ತಿ ನೀಡುವುದಾಗಿ ಘೋಷಿಸಿದೆ.
ಇದನ್ನೂ ಓದಿ: ನ್ಯಾನೋ ಬನಾನಾ ಟ್ರೆಂಡ್ ಡೇಂಜರ್.. ಬಯೋಡೇಟಾ ಲೀಕ್.. ಅಕೌಂಟ್ ಖಾಲಿ! – ಯುವತಿ ಮಚ್ಚೆ ಗುಟ್ಟು ರಟ್ಟಾಗಿದ್ದು ಹೇಗೆ?
ಪದ್ಮಶ್ರೀ ಹಾಗೂ ಪದ್ಮಭೂಷಣ ವಿಜೇತೆ ದಿವಂಗತ ಬಿ.ಸರೋಜಾದೇವಿ ಭಾರತೀಯ ಹಾಗೂ ಕನ್ನಡ ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಅಪಾರವಾಗಿದೆ. ಅದನ್ನು ಪರಿಗಣಿಸಿ ಅವರು ಪಡೆದಿದ್ದ ಅಭಿನಯ ಸರಸ್ವತಿ ಬಿರುದಿನ ಹೆಸರಿನಲ್ಲಿ ಕನ್ನಡ ಚಿತ್ರರಂಗಕ್ಕೆ ಕನಿಷ್ಠ 25 ವರ್ಷಗಳ ಅವಿಸ್ಮರಣೀಯ ಸೇವೆ ಸಲ್ಲಿಸಿರುವ ಮಹಿಳೆಯರಿಗೆ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗುವುದು ಎಂದು ರಾಜ್ಯ ಸರ್ಕಾರ ಘೋಷಿಸಿದೆ.
ಪ್ರಸ್ತುತ ಜಾರಿಯಲ್ಲಿರುವ ಕನ್ನಡ ಚಲನಚಿತ್ರ ನೀತಿ-2011ರಲ್ಲಿನ ವಾರ್ಷಿಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿ ಅನುಬಂಧ-1ರಡಿ ಜಾರಿಗೆ ತರಲಾಗಿದೆ. ಈ ಪ್ರಶಸ್ತಿಯಡಿಯಲ್ಲಿ 1 ಲಕ್ಷ ರೂ. ನಗದು ಹಾಗೂ 100 ಗ್ರಾಂ ಬೆಳ್ಳಿ ಪದಕ ನೀಡಲಾಗುವುದು ಎಂದು ರಾಜ್ಯ ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ನೋಡಿರಿ

