ಆಡಳಿತ ಮಂಡಳಿ ಮಾಡಿದ ಸಾಲಕ್ಕೆ ಶಾಲೆಯೇ ಸೀಜ್! – ಏನೂ ತಪ್ಪು ಮಾಡದ ಮಕ್ಕಳಿಗೆ ಯಾಕೆ ಈ ಶಿಕ್ಷೆ?

ಬಳ್ಳಾರಿ: ರಾಜ್ಯದಾದ್ಯಂತ ಈಗಾಗಲೇ ಶಾಲೆಗಳು ಪ್ರಾರಂಭವಾಗಿದೆ. ಆದರೆ ಬಳ್ಳಾರಿ ಜಿಲ್ಲೆಯ ಶಾಲೆಯೊಂದರಲ್ಲಿ ಮಾತ್ರ ತರಗತಿಗಳು ಪ್ರಾರಂಭವಾದ ಎರಡನೇ ದಿನಕ್ಕೆ ಮಕ್ಕಳಿಗೆ ಹಾಗೂ ಶಿಕ್ಷಕರಿಗೆ ಶಾಕ್ ಎದುರಾಗಿದೆ. ಶಾಲಾ ಆಡಳಿತ ಮಂಡಳಿಯವರು ಮಾಡಿದ ಸಾಲಕ್ಕೆ ಬ್ಯಾಂಕ್ ಸಿಬ್ಬಂದಿ ಶಾಲೆಯನ್ನೇ ಸೀಜ್ ಮಾಡಿದ್ದಾರೆ.
ಈ ಘಟನೆ ನಡೆದಿದ್ದು, ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿರುವ ರಾಜೀವ್ ಗಾಂಧಿ ಸ್ಮಾರಕ ವಿದ್ಯಾ ಸಂಸ್ಥೆಯಲ್ಲಿ. ಶಾಲಾ ಆಡಳಿತ ಮಂಡಳಿ ಮಾಡಿರುವ ಸಾಲದಿಂದಾಗಿ ಬ್ಯಾಂಕ್ ಸಿಬ್ಬಂದಿ ಶಾಲೆಯನ್ನು ಸೀಜ್ ಮಾಡಿದ್ದಾರೆ. ಇದರಿಂದಾಗಿ ಮಕ್ಕಳು ಶಾಲೆಯ ಹೊರಗಡೆ ಮರದ ಕೆಳಗೆ ಕುಳಿತು ಪಾಠ ಕೇಳುವ ಸ್ಥಿತಿ ಬಂದಿದೆ.
ಇದನ್ನೂ ಓದಿ: ರೈತರಿಗೆ ಶಾಕ್ ನೀಡಿದ ಹಾಲು ಒಕ್ಕೂಟ! – ಹಾಲಿನ ಪ್ರೋತ್ಸಾಹ ಧನ 1.50 ರೂ. ಕಡಿತ
ಎಂ. ಸವಿತಾ, ಎಂ ಕೃಷ್ಣಕಿಶೋರ್ ರೆಡ್ಡಿ, ಎಂ.ಸತ್ಯನಾರಾಣ ಸೇರಿದಂತೆ ಆಡಳಿತ ಮಂಡಳಿಯವರು ಶಾಲೆಯ ಮೇಲೆ ಆಂಧ್ರ ಮೂಲದ ಇನ್‍ಕ್ರೆಡ್ ಫೈನಾನ್ಸಿಯಲ್ ಸರ್ವೀಸ್ ಲಿಮಿಟೆಡ್‍ನಿಂದ ಒಂದು ಕೋಟಿಗೂ ಅಧಿಕ ಮೊತ್ತದ ಸಾಲವನ್ನು ಪಡೆದುಕೊಂಡಿದ್ದಾರೆ. ಆ ಬಳಿಕ ಸರಿಯಾಗಿ ಮರು ಪಾವತಿ ಮಾಡದ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿ ನ್ಯಾಯಲಯದಿಂದ ಆದೇಶ ತಂದು ಸೀಜ್ ಮಾಡಿದ್ದಾರೆ. ಆಡಳಿತ ಮಂಡಳಿ ಹಾಗೂ ಬ್ಯಾಂಕ್ ನವರ ವ್ಯವಹಾರದಿಂದಾಗಿ ಇಂದು ಮಕ್ಕಳು ಪರದಾಡುವಂತಾಗಿದೆ.
ಮಕ್ಕಳನ್ನು ಹೊರಗಡೆ ಕೂರಿಸದೇ ಬೇರೆಡೆ ವ್ಯವಸ್ಥೆ ಮಾಡಿಕೊಳ್ಳುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿದೆ. ಒಂದು ವೇಳೆ ವ್ಯವಸ್ಥೆ ಮಾಡದಿದ್ದರೆ ಕ್ರಮದ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ. ಇತ್ತ ಶಾಲಾ ಆಡಳಿತ ಮಂಡಳಿ ವಿರುದ್ಧ ಪೋಷಕರು ಹಿಡಿ ಶಾಪ ಹಾಕುತ್ತಿದ್ದಾರೆ.