ಸೀರೆ ಉಡಲು ಬರೋದಿಲ್ವಾ? – ಇಂತಹ ಸೀರೆ ಖರೀದಿಸಿದ್ರೆ ಕೇವಲ 5 ನಿಮಿಷದಲ್ಲಿ ರೆಡಿಯಾಗಬಹುದು
ವಿಶೇಷ ಸಂದರ್ಭದಲ್ಲಿ ಅಥವಾ ವಿವಾಹ ಸಮಾರಂಭದಲ್ಲಿ ಸೀರೆಯನ್ನು ಧರಿಸುವುದು ಭಾರತೀಯ ಮಹಿಳೆಯರಿಗೆ ಒಂದು ಸಂಭ್ರಮ. ಸೆಲ್ವಾರ್ ಕಮೀಜ್, ಘಾಗ್ರ ಇವೆಲ್ಲವನ್ನೂ ಮೀರಿಸುವ ಅಂದ ಸೀರೆಗಿದೆ. ಬಳಕುವ ಬಳ್ಳಿಯಂತಿರಲಿ ಅಥವಾ ದುಂಡು ಮಲ್ಲಿಗೆಯಂತಿರಲಿ ಎಲ್ಲರೂ ಸೀರೆಯಲ್ಲಿ ತುಂಬಾನೇ ಆಕರ್ಷಕವಾಗಿ ಕಾಣುತ್ತಾರೆ. ಇನ್ನು ಅಂದವಾಗಿ ಕಾಣ ಬಯಸುವವರಿಗೆ ಸೀರೆಯಷ್ಟು ಉತ್ತಮ ಡ್ರೆಸ್ ಮತ್ತೊಂದಿಲ್ಲ. ಸಾಂಪ್ರದಾಯಿಕವಾಗಿಯೂ-ಮಾಡರ್ನ್ ಆಗಿಯೂ ಧರಿಸಲು ಈ ಸೀರೆ ಸೈ.
ಇದನ್ನೂ ಓದಿ: ಮದುವೆಗೆ ರೆಡಿಯಾಗುತ್ತಿದ್ದೀರಾ? ಕೂದಲಿನ ಆರೈಕೆ ಹೀಗಿದ್ದರೆ ಉತ್ತಮ
ಆದರೆ ಆ ಸೀರೆಯ ನೆರಿಗೆ ಹಿಡಿಯುವುದು ಕಷ್ಟಕರವಾದ ಕೆಲಸ. ಎಷ್ಟೋ ಜನರಿಗೆ ಸೀರೆಯ ನೆರಿಗೆ ಹಿಡಿಯುವಾಗ ಇನ್ನೊಬ್ಬರ ಸಹಾಯ ಪಡೆದುಕೊಳ್ಳಬೇಕಾಗುತ್ತದೆ. ಇದರಿಂದಾಗಿ ಅದೆಷ್ಟೋ ಮಹಿಳೆಯರು ಸೀರೆ ಉಡಲು ಹಿಂಜರಿಯುತ್ತಾರೆ. ಅಂಥವರಿಗೆಂದೇ ಮಾರುಕಟ್ಟೆಯಲ್ಲಿ ವಿವಿಧ ವಿನ್ಯಾಸದ ಸೀರೆಗಳು ಲಭ್ಯವಿದೆ. ಈ ಸೀರೆಯನ್ನು ಕೇವಲ 5 ನಿಮಿಷಗಳಲ್ಲಿ ತೊಡಬಹುದು.
ಈ ಕಾರಣಕ್ಕೆ ರೆಡಿಮೆಡ್ ಸೀರೆ ನಿಮ್ಮ ಬಳಿ ಇದ್ರೆ ಉತ್ತಮ
ಸಾಮಾನ್ಯವಾಗಿ ಸೀರೆಗಳನ್ನು ಉಡಲು ಅಧಿಕ ಸಮಯ ತೆಗೆದುಕೊಳ್ಳುತ್ತೆ. ಅದರ ನೆರಿಗೆ ಹಿಡಿಯುವಷ್ಟರಲ್ಲಿ ಮಹಿಳೆಯರು ಸುಸ್ತಾಗಿ ಹೋಗುತ್ತಾರೆ. ಆದರೆ ರೆಡಿ ಟು ವೇರ್ ಸೀರೆಯಲ್ಲಿ ನೆರಿಗೆ ಹಿಡಿಯುವ ಕೆಲಸ ಇರಲ್ಲ. ಹೆಚ್ಚೆಂದರೆ 5 ನಿಮಿಷದೊಳಗೆ ಈ ಸೀರೆ ಧರಿಸಬಹುದು.
ರೆಡಿಮೆಡ್ ಸೀರೆಯಿಂದ ಆಕರ್ಷಕವಾಗಿ ಕಾಣಬಹುದು
ಮಹಿಳೆಯರಿಗೆ ಕಷ್ಟಕರವಾದ ಕೆಲಸವೆಂದರೆ ಸೀರೆಯ ನೆರಿಗೆ ಹಿಡಿಯುವುದು. ಸೀರೆ ಉಟ್ಟಾಗ ಆಕರ್ಷಕವಾಗಿ ಕಾಣಲು ನೆರಿಗೆ ಸರಿಯಾಗಿ ಸೆಟ್ ಮಾಡಿರಬೇಕು. ಇಲ್ಲದಿದ್ದರೆ ಸೀರೆ ನಮಗೆ ಸುತ್ತಿದಂತೆ ಕಾಣಬಹುದು. ಆದ್ದರಿಂದ ಮಾನಿನಿಯರು ತಾವು ಆಕರ್ಷಣೀಯವಾಗಿ ಕಾಣಲು ಹೆಚ್ಚಾಗಿ ರೆಡಿಮೆಡ್ ಸೀರೆಗಳನ್ನು ಖರೀದಿಸಿ ಧರಿಸುತ್ತಾರೆ.
ರೆಡಿಮೆಡ್ ಸೀರೆಗಳು ಉಡಲು ತುಂಬಾ ಕಂಫರ್ಟ್
ಸಾಮಾನ್ಯವಾಗಿ ಹೆಂಗೆಳೆಯರು ಮೊದಲ ಬಾರಿಗೆ ಸೀರೆ ಉಡುತ್ತಿದ್ದರೆ ಅವರಿಗೆ ಸೀರೆ ಅಷ್ಟು ಕಂಫರ್ಟ್ ಅನ್ನಿಸುವುದಿಲ್ಲ. ಅಂಥವರು ರೆಡಿಮೆಡ್ ಸೀರೆ ಧರಿಸಿದರೆ ಸೆಲ್ವಾರ್ ಧರಿಸಿದಷ್ಟೇ ಕಂಫರ್ಟ್ ಅನ್ನಿಸುತ್ತದೆ.
ಸೀರೆ ಖರೀದಿಸುವಾಗ ಗಮನಿಸಬೇಕಾದ ಅಂಶಗಳು
ರೆಡಿಮೆಡ್ ಸೀರೆ ತೆಗೆದುಕೊಳ್ಳುವಾಗ ಕೆಲವೊಂದು ಅಂಶಗಳನ್ನು ನಾವು ಗಮನಿಸಬೇಕಾಗುತ್ತದೆ. ಈ ಸೀರೆಗಳನ್ನು ತೆಗೆದುಕೊಳ್ಳುವಾಗ ನಮ್ಮ ಅಳತೆಗೆ ತಕ್ಕಂತೆ ಸೀರೆ ಖರೀದಿಸಬೇಕು. ತೆಳ್ಳಗಿದ್ದರೆ ಸಮಸ್ಯೆಯಿಲ್ಲ. ದಪ್ಪವಿದ್ದರೆ ಅಳತೆ ತುಂಬಾನೆ ಮುಖ್ಯವಾಗಿರುತ್ತದೆ.
ಇರುವ ಸೀರೆಯನ್ನು ರೆಡಿಮೆಡ್ ಮಾಡಬಹುದೇ?
ಸಾಮಾನ್ಯವಾಗಿ ಇರುವ ಸೀರೆಯನ್ನು ರೆಡಿಮೆಡ್ ಸೀರೆ ಮಾಡಬಹುದೇ ಎಂಬ ಪ್ರಶ್ನೆಗಳು ಮಹಿಳೆಯರಲ್ಲಿ ಕಾಡುತ್ತಿರುತ್ತೆ. ಆದರೆ ಅದು ಹೇಗೆ ಎಂಬ ಪ್ರಶ್ನೆಯೂ ಮೂಡುತ್ತದೆ. ಮನೆಯಲ್ಲೇ ಇದ್ದ ನಾವು ಸೀರೆಯನ್ನು ರೆಡಿಮೆಡ್ ಮಾಡಬಹುದು. ನಿಮ್ಮ ಅಳತೆಗೆ ತಕ್ಕಂತೆ ನೆರಿಗೆ ಹಿಡಿದು ಸೀರೆ ಸ್ಟಿಚ್ ಹಾಕಿಸಬಹುದು. ಇದು ರೆಡಿಮೆಡ್ ಸೀರೆಯಂತೆ ಕಾಣಿಸುತ್ತದೆ.