ಬೇಡಿಕೆ ಕಳೆದುಕೊಂಡ ಎಮ್ಮೆ ಹಾಲು – ರಾಜ್ಯದಲ್ಲಿ ಇನ್ನುಮುಂದೆ ಕೆಎಂಎಫ್ ಎಮ್ಮೆ ಹಾಲು ಮಾರಾಟ ಸ್ಥಗಿತ!

ಕಳೆದ ಮೂರು ತಿಂಗಳ ಹಿಂದಷ್ಟೇ ಕರ್ನಾಟಕ ಹಾಲು ಒಕ್ಕೂಟ ರಾಜ್ಯದಾದ್ಯಂತ ಎಮ್ಮೆ ಹಾಲು ಮಾರಾಟಕ್ಕೆ ಚಾಲನೆ ನೀಡಿತ್ತು. ಆದರೆ ಇದೀಗ ಎಮ್ಮೆ ಹಾಲು ಮಾರಾಟ ಸ್ಥಗಿತ ಮಾಡಲು ಮುಂದಾಗಿದೆ ಎಂದು ಹೇಳಲಾಗುತ್ತಿದೆ.
ಹೌದು, ಕಳೆದ ವರ್ಷ ಡಿಸೆಂಬರ್ ತಿಂಗಳಿಂದ ಎಮ್ಮೆ ಹಾಲು ಮಾರುಕಟ್ಟೆಗೆ ಕೆಎಂಎಫ್ ಬಿಡುಗಡೆ ಮಾಡಿತ್ತು. ಆದರೆ ಸದ್ಯ ಎಮ್ಮೆ ಹಾಲು ಮಾರಾಟ ಮತ್ತೆ ಸ್ಥಗಿತ ಮಾಡಲು ಕೆಎಂಎಫ್ ಗಂಭೀರ ಚಿಂತನೆ ನಡೆಸಿದೆಯಂತೆ. ಎಮ್ಮೆ ಹಾಲಿಗೆ ಗ್ರಾಹಕರಿಂದ ಬೇಡಿಕೆ ಕುಸಿತ ಆಗಿರುವುದು ಕೆಎಂಎಫ್ ಚಿಂತನೆಗೆ ಕಾರಣ ಎನ್ನಲಾಗಿದೆ.
ಇದನ್ನೂ ಓದಿ: 60% ಕನ್ನಡ ಫಲಕ ಇಲ್ಲವೆಂದು ಮಳಿಗೆ ಮುಚ್ಚಬೇಡಿ – ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ
ಈ ಬಗ್ಗೆ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಜಗದೀಶ್ ಮಾಹಿತಿ ನೀಡಿದ್ದಾರೆ. ರಾಜ್ಯದಲ್ಲಿ ನಿತ್ಯ 2000 ಲೀಟರ್ ಮಾತ್ರ ಎಮ್ಮೆ ಹಾಲು ಮಾರಾಟ ಆಗುತ್ತಿದೆ. ಬೆಂಗಳೂರು, ಗೋವಾ, ಮಹಾರಾಷ್ಟ್ರ ಭಾಗಕ್ಕೆ ಎಮ್ಮೆ ಹಾಲು ಪೂರೈಕೆಯಾಗುತ್ತಿತ್ತು. ಕೆಎಂಎಫ್ ಪ್ರತಿ ಲೀಟರ್ ಗೆ 60 ರೂಪಾಯಿಯಂತೆ ಮಾರಾಟ ಮಾಡುತ್ತಿತ್ತು. ಆದರೆ ಇನ್ಮೇಲೆ ಎಮ್ಮೆ ಹಾಲು ಮಾರಾಟ ಮಾಡದಿರಲು ಕೆಎಂಎಫ್ ನಿರ್ಧಾರ ಮಾಡಿದೆ ಎಂದು ಹೇಳಿದ್ದಾರೆ.
ಡಿಸೆಂಬರ್ನಲ್ಲಿ ಎಮ್ಮೆ ಹಾಲು ಮಾರಾಟಕ್ಕೆ ಮುಂದಾಗಿದ್ದ ಕೆಎಂಎಫ್ ಆರಂಭದಲ್ಲಿ ಅರ್ಧ ಲೀಟರ್ ಹಾಲಿನ ಪ್ಯಾಕೆಟ್ಗಳನ್ನು ಬಿಡುಗಡೆ ಮಾಡಿತ್ತು. ಇದಕ್ಕೂ ಮುನ್ನ ಕೆಎಂಎಫ್ ಸುಮಾರು 4-5 ಸಾವಿರ ಲೀಟರ್ ಹಾಲನ್ನು ನಿತ್ಯ ಕೆಎಂಎಫ್ ಮಾರಾಟ ಮಾಡುತ್ತಿತ್ತು. ರಾಜ್ಯದ ಎಲ್ಲಾ ಒಕ್ಕೂಟಗಳಲ್ಲಿ ಹಾಲು ಪೂರೈಸಲು ಸಾಕಷ್ಟು ಎಮ್ಮೆಗಳು ಇಲ್ಲದ ಕಾರಣ ವಿಜಯಪುರ ಹಾಗೂ ಬೆಳಗಾವಿ ರೈತರಿಂದ ಹಾಲು ಖರೀದಿ ಮಾಡಿ ರಾಜ್ಯದಾದ್ಯಂತ ಪೂರೈಕೆ ಮಾಡುತ್ತಿತ್ತು. ಆದರೆ ಇದೀಗ ಎಮ್ಮೆ ಹಾಲು ಖರೀದಿಗೆ ಗ್ರಾಹಕರು ಹಿಂದೇಟು ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ಎಮ್ಮೆ ಹಾಲು ಮಾರಾಟ ಸ್ಥಗಿತ ಮಾಡಲು ನಿರ್ಧರಿಸಿದೆ.