ಮರವಂತೆ ಬೀಚ್‌ನಲ್ಲಿ ಪ್ರವಾಸಿಗರ ಹುಚ್ಚಾಟ – ಎಚ್ಚರಿಕೆ ನೀಡಿದರೂ ಕಡಲಿಗೆ ಇಳಿದು ಅಪಾಯಕ್ಕೆ ಆಹ್ವಾನ..!

ಮರವಂತೆ ಬೀಚ್‌ನಲ್ಲಿ ಪ್ರವಾಸಿಗರ ಹುಚ್ಚಾಟ – ಎಚ್ಚರಿಕೆ ನೀಡಿದರೂ ಕಡಲಿಗೆ ಇಳಿದು ಅಪಾಯಕ್ಕೆ ಆಹ್ವಾನ..!

ಉಡುಪಿ ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಮಳೆಯ ಆರ್ಭಟ ಜೋರಾಗಿತ್ತು. ಈಗಲೂ ಕೂಡಾ ನಿರಂತರವಾಗಿ ಮಳೆ ಆಗುತ್ತಲೇ ಇದೆ. ಇದರ ಪರಿಣಾಮ ಸಮುದ್ರ ತೀರಗಳಲ್ಲಿ ಅಲೆಯ ಅಬ್ಬರವೂ ಜೋರಾಗಿದೆ. ಹೀಗಾಗಿ ಕಡಲತೀರದ ಭಾಗದಲ್ಲಿ ಕೊರೆತವೂ ಜೋರಾಗಿದೆ. ಹೀಗಾಗಿ ಕಡಲತೀರಗಳ ಹತ್ತಿರ ಬರುವ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಪ್ರವಾಸಿಗರು ಕೂಡಾ ನೀರನ್ನು ಕಂಡಲ್ಲಿ ಹುಚ್ಚಾಟ ತೋರುವುದು ಕೂಡಾ ಅತಿಯಾಗುತ್ತಿದೆ. ಇದಕ್ಕೆ ಸಾಕ್ಷಿ ಬೈಂದೂರು ತಾಲೂಕಿನಲ್ಲಿರುವ ಪ್ರಸಿದ್ಧ ಮರವಂತೆ ಬೀಚ್‌ನಲ್ಲಿ ಕೆಲವರು ತೋರುತ್ತಿರುವ ನಿರ್ಲಕ್ಷ್ಯ. ಮರವಂತೆ ಬೀಚ್‌ಗೆ ಬರುವ ಪ್ರವಾಸಿಗರಿಗೆ ಎಚ್ಚರಿಕೆ ನೀಡಿದರೂ ಲೆಕ್ಕಕ್ಕೆ ತೆಗೆದುಕೊಳ್ಳದೆ ನೀರಿಗೆ ಇಳಿಯುವ ಮೂಲಕ ಭಂಡಧೈರ್ಯ ತೋರುತ್ತಿದ್ದಾರೆ.

ಇದನ್ನೂ ಓದಿ: ಮಲ್ಪೆ ಬೀಚ್‌ನಲ್ಲಿ ವಿಸ್ಮಯ ದೃಶ್ಯ – ಕಡಲ ಕಿನಾರೆಯಲ್ಲಿ ರಾಶಿ ರಾಶಿ ಗಂಗಾದೇವಿ ಕೂದಲು?

ಮರವಂತೆ ಬೀಚ್‌ಗೆ ಪ್ರವಾಸಿಗರು ಬರುತ್ತಲೇ ಇರುತ್ತಾರೆ. ಆದರೆ, ನಿರಂತರವಾಗಿ ಮಳೆ ಸುರಿಯುವ ಸಮಯದಲ್ಲಿ ಅಲೆಗಳ ಆರ್ಭಟವೂ ಜೋರಾಗಿಯೇ ಇರುತ್ತದೆ. ಅಲೆಗಳ ಆರ್ಭಟದ ನರ್ತನ ನೋಡಲು ಬರುವ ಪ್ರವಾಸಿಗರು ಎಂಜಾಯ್ ಮಾಡುತ್ತಿದ್ದಾರೆ. ಆದರೆ, ಬೀಚ್ ಸೆಕ್ಯೂರಿಟಿ ಮಾತಿಗೂ ಬೆಲೆ ಕೊಡದೆ ಸಮುದ್ರಕ್ಕೆ ಇಳಿಯುತ್ತಿದ್ದಾರೆ. ಹೀಗಾಗಿ ಅನಾಹುತಕ್ಕೆ ತಾವಾಗಿಯೇ ಆಹ್ವಾನ ನೀಡುತ್ತಿದ್ದಾರೆ. ಇನ್ನು ಮಳೆಗಾಲವಾಗಿದ್ದರಿಂದ ಉಡುಪಿ ಜಿಲ್ಲೆಯ ಎಲ್ಲಾ ಬೀಚ್‌ಗಳಿಗೂ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಮಳೆಗಾಲದಲ್ಲಿ ಕಡಲಬ್ಬರ ಜಾಸ್ತಿ ಆಗಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಜೂನ್ ತಿಂಗಳಿನಿಂದ ಸೆಪ್ಟೆಂಬರ್ ತಿಂಗಳಿನವರೆಗೆ ಜಿಲ್ಲೆಯಲ್ಲಿ ಬೀಚ್ ಪ್ರವೇಶ ನಿಷೇಧ ಮಾಡಲಾಗಿದೆ. ಈಗಾಗಲೇ ಮಲ್ಪೆ ಬೀಚ್‌ಗೂ ಬಲೆ ಅಳವಡಿಕೆ ಮಾಡಲಾಗಿದೆ. ಆದರೂ ಕೂಡಾ ಮೂರು ಕಿಲೋಮೀಟರ್ ಉದ್ದದ ಬೀಚ್‌ಗೆ ಪ್ರವಾಸಿಗರು ನಿತ್ಯ ಆಗಮಿಸುತ್ತಿದ್ದಾರೆ. ದಿನವೂ ಸಾವಿರಾರು ಪ್ರವಾಸಿಗರು ಮರವಂತೆ ಬೀಚ್‌ಗೆ ಭೇಟಿ ನೀಡುತ್ತಿದ್ದು ಬೀಚ್‌ಗೆ ಫೆನ್ಸಿಂಗ್ ಅಳವಡಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ. ಪ್ರತಿ ವರ್ಷವೂ ಕೂಡ ಒಂದಲ್ಲ ಒಂದು ಅವಘಡಗಳು ಇಲ್ಲಿ ನಡೆಯುತ್ತವೆ. ಹೀಗಾಗಿ ಮಲ್ಪೆ ಬೀಚಿನಷ್ಟೇ ಪ್ರಾಮುಖ್ಯತೆಯನ್ನು ಮರವಂತೆ ಬೀಚ್ ಗೆ ನೀಡುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

suddiyaana