ಟೋಲ್ ಸಂಗ್ರಹ ಶುರುವಾದ ಮರುದಿನವೇ ಕಿತ್ತೋಯ್ತು ರಸ್ತೆ – ಬೆಂಗಳೂರು ಮೈಸೂರು ಹೆದ್ದಾರಿ ಬಣ್ಣ ಬಯಲು..!
ನಾಯಕರ ನಡುವೆ ಪ್ರತಿಷ್ಠೆಯಾಗಿದ್ದ ಹೆದ್ದಾರಿ ಉದ್ಘಾಟನೆಯಾದ ಮರುದಿನವೇ ಅದರ ಬಣ್ಣ ಬಯಲಾಗಿದೆ. ಪ್ರಧಾನಿ ಮೋದಿ ಲೋಕಾರ್ಪಣೆಗೊಳಿಸಿದ್ದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಕಿತ್ತುಕೊಂಡು ಬಂದಿದೆ. ಡಾಂಬರ್ ಕಿತ್ತು ಜಲ್ಲಿಕಲ್ಲುಗಳು ಕಾಣುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಂಗಳವಾರದಿಂದ (ಮಾರ್ಚ್ 14) ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಎರಡು ಕಡೆ ಟೋಲ್ ಸಂಗ್ರಹ ಆರಂಭವಾಗಿದೆ. ಕಾಮಗಾರಿ ಪೂರ್ಣ ಮಾಡದೇ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಸರ್ವಿಸ್ ರಸ್ತೆಯನ್ನು ಸಹ ಬಿಟ್ಟಿಲ್ಲ ಎಂದು ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಟೋಲ್ ಸಂಗ್ರಹ ಆರಂಭವಾದ ಬೆನ್ನಲ್ಲೇ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಸಂಚರಿಸುವ ಬಸ್ ಪ್ರಯಾಣ ದರವನ್ನು ಕೆಎಸ್ಆರ್ಟಿಸಿ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ. ರಾಮನಗರ ಕಡೆಯಿಂದ ಬಿಡದಿ ಬೈಪಾಸ್ ರಸ್ತೆ ಮುಕ್ತಾಯದ ಜಾಗದಲ್ಲಿ ಸೇತುವೆಯೊಂದು ನಿರ್ಮಾಣ ಮಾಡಲಾಗಿದೆ. ಸೇತುವೆ ಆರಂಭದಲ್ಲಿ ರಸ್ತೆ ಕಿತ್ತು ಬಂದಿದೆ. ರಸ್ತೆ ಕಿತ್ತು ಬಂದ ಹಿನ್ನೆಲೆ ದುರಸ್ತಿ ಕಾರ್ಯ ಆರಂಭಗೊಂಡಿದೆ. ರಸ್ತೆಯಲ್ಲಿ ಡಾಂಬರು ಕಿತ್ತು ಬಂದಿದ್ದು ಜಲ್ಲಿ ಕಲ್ಲುಗಳು ಹೊರ ಬಂದಿವೆ.
ರಸ್ತೆಯ ಬದಿಗೆ ಬ್ಯಾರಿಕೇಡ್ ಹಾಕಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಸದ್ಯ ರಸ್ತೆಯ ಅರ್ಧಭಾಗದಲ್ಲಿ ವಾಹನಗಳು ಚಲಿಸುತ್ತಿವೆ. ಇದೇ ಸ್ಥಳದಲ್ಲಿ ಲಾರಿಯೊಂದು ಪಲ್ಟಿಯಾಗಿದ್ದು, ಅನೇಕ ವಾಹನಗಳು ಸ್ಕಿಡ್ ಆಗಿವೆ ಎಂದು ವರದಿಯಾಗಿದೆ. ಕೆಎಸ್ಆರ್ಟಿಸಿ ವೋಲ್ವೋ ಬಸ್ ಸಹ ಸೇರಿದಂತೆ ಹಲವು ವಾಹನಗಳು ಸ್ಕಿಡ್ ಆಗಿವೆ.
ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಯನ್ನು 12 ಮಾರ್ಚ್ 2023 ರಂದು ಉದ್ಘಾಟಿಸಿದರು. ₹8,480 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ 2 ಹಂತಗಳನ್ನು ಒಳಗೊಂಡಿದೆ.
ಈ ಎಕ್ಸ್‌ಪ್ರೆಸ್‌ವೇ ನಿರ್ಮಾಣವು ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು 3 ಗಂಟೆಗಳಿಂದ 75 ನಿಮಿಷಗಳವರೆಗೆ ಕಡಿಮೆ ಮಾಡುತ್ತದೆ. 19 ಸೇತುವೆಗಳು, 4 ರೈಲ್ವೆ ಮೇಲ್ಸೇತುವೆಗಳು, 44 ಸಣ್ಣ ಸೇತುವೆಗಳು ಮತ್ತು ಪಾದಚಾರಿಗಳು ಮತ್ತು ವಾಹನಗಳಿಗೆ 50 ಅಂಡರ್‌ಪಾಸ್‌ಗಳಿವೆ.
– ಕಾರು, ಜೀಪು, ವ್ಯಾನ್ಗಳಿಗೆ ಏಕಮುಖ ಸಂಚಾರಕ್ಕೆ 135 ರೂ., ಎರಡೂ ಕಡೆಗೆ 205 ರೂ.
– ಲಘು ವಾಣಿಜ್ಯ ವಾಹನಗಳು, ಲಘು ಸರಕು ವಾಹನ, ಮಿನಿ ಬಸ್ಗಳಿಗೆ ಏಕಮುಖ ಸಂಚಾರಕ್ಕೆ 220 ರೂ., ಅದೇ ದಿನ ಮರುಸಂಚಾರಕ್ಕೆ 330 ರೂಪಾಯಿ.
– ಬಸ್/ಟ್ರಕ್ಗಳಿಗೆ ಏಕಮುಖ ಸಂಚಾರಕ್ಕೆ 460 ರೂ, ಎರಡೂ ಕಡೆಗೆ 690 ರೂ.
ಟೋಲ್ ಶುಲ್ಕ ಸಂಗ್ರಹ ಮಾಡಲು ಮುಂದಾಗುತ್ತಿದ್ದಂತೆಯೇ ಹಲವು ಸಂಘಟನೆಗಳ ಮುಖಂಡರು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಂಗಳೂರು ದಕ್ಷಿಣದ ಕಣಿಮಿಣಿಕೆ ಮತ್ತು ರಾಮನಗರ ಬಳಿಯ ಶೇಷಗಿರಿಹಳ್ಳಿ ಪ್ಲಾಜಾ ಬಳಿ ಹಲವು ಸಂಘಟನೆಗಳು ಮತ್ತು ಕಾಂಗ್ರೆಸ್ ನಾಯಕರು ಸರ್ಕಾರ ಜನರಿಂದ ಹೆಚ್ಚಿನ ದರ ವಿಧಿಸಿ ಸುಲಿಗೆ ಮಾಡುತ್ತಿದೆ ಎಂದು ಪ್ರತಿಭಟನೆಯಲ್ಲಿ ಆಕ್ರೋಶ ಹೊರಹಾಕಿದ್ದಾರೆ.