ಕಲ್ಲಂಗಡಿ ಹಣ್ಣು ತಿಂದು ಸಾವನ್ನಪ್ಪಿದ ಕೇಸ್‌ನ ಅಸಲಿ ಸತ್ಯ ಬಯಲು – ಬೆಚ್ಚಿ ಬೀಳಿಸಿದ ಪೋಸ್ಟ್‌ಮಾರ್ಟಂ ವರದಿ

ಬಿರಿಯಾನಿ ತಿಂದರು, ಕಲ್ಲಂಗಡಿ ಹಣ್ಣು ತಿಂದರು. ಇದರಿಂದಾಗಿಯೇ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿದರು. ಇದೊಂದು ಸುದ್ದಿ ಅದೆಷ್ಟೋ ಜನರ ಮನಸಲ್ಲಿ ನೋವು ತಂದರೆ ಮತ್ತಷ್ಟು ಜನರಲ್ಲಿ ಆತಂಕ ಹುಟ್ಟಿಸಿತ್ತು. ರಾತ್ರಿ ಕಲ್ಲಂಗಡಿ ಹಣ್ಣು ತಿನ್ನಲು ಹೆದರುವಂತಾ ಸ್ಥಿತಿ ಎದುರಾಗಿತ್ತು. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಕಲ್ಲಂಗಡಿ ಹಣ್ಣು ವಿಷವಾಗುವುದು ಹೇಗೆ ಎಂಬ ದೊಡ್ಡ ಚರ್ಚೆಯೇ ಸೃಷ್ಟಿಯಾಗಿತ್ತು. ಇದೀಗ ಸಾವಿನ ರಹಸ್ಯ ಬಯಲಾಗಿದೆ.
ಇದನ್ನೂ ಓದಿ:ಪಶ್ಚಿಮ ಬಂಗಾಳದ ಆರ್ ಜಿ ಕರ್ ಸಂತ್ರಸ್ತೆ ತಾಯಿ ಮನೆ ಬಳಿ ಬಾಂಬ್ ದಾಳಿ! – 5 ಬಿಜೆಪಿ ಕಾರ್ಯಕರ್ತರಿಗೆ ಗಾಯ
ಮುಂಬೈನ ಪೈಧೋನಿ ಪ್ರದೇಶದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ನಿಗೂಢ ಸಾವಿನ ಪ್ರಕರಣದ ಸತ್ಯ ಕೊನೆಗೂ ಬಯಲಾಗಿದೆ. ಅಬ್ದುಲ್ಲಾ ಡೊಕಾಡಿಯಾ, ಅವರ ಪತ್ನಿ ನಸ್ರಿನ್ ಮತ್ತು ಇಬ್ಬರು ಪುತ್ರಿಯರಾದ ಆಯೇಷಾ ಹಾಗೂ ಜೈನೆಬ್ ಅವರ ಸಾವಿಗೆ ಕಲ್ಲಂಗಡಿ ಹಣ್ಣು ಕಾರಣವಲ್ಲ ಎಂಬುದು ವಿಧಿವಿಜ್ಞಾನ ವರದಿಯಲ್ಲಿ ದೃಢಪಟ್ಟಿದೆ. ಆರಂಭದಲ್ಲಿ ಕಲ್ಲಂಗಡಿ ತಿಂದಿದ್ದಕ್ಕೆ ಫುಡ್ ಪಾಯಿಸನ್ ಆಗಿರಬಹುದು ಎಂಬ ಅನುಮಾನವಿತ್ತು. ಮೃತ ದೇಹಗಳ ವಿಸ್ಸೆರಾ ಮಾದರಿಗಳನ್ನು ಪರೀಕ್ಷಿಸಿದ ವಿಧಿವಿಜ್ಞಾನ ತಜ್ಞರು ಅವರ ದೇಹದಲ್ಲಿ ಜಿಂಕ್ ಫಾಸ್ಫೈಡ್ ಎಂಬ ವಿಷಕಾರಿ ಅಂಶ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಇದು ಸಾಮಾನ್ಯವಾಗಿ ಇಲಿಗಳನ್ನು ಕೊಲ್ಲಲು ಬಳಸುವ ಅತ್ಯಂತ ಅಪಾಯಕಾರಿ ವಿಷವಾಗಿದೆ. ಈ ವಿಷ ದೇಹದೊಳಗೆ ಹೋದ ಕೆಲವೇ ಗಂಟೆಗಳಲ್ಲಿ ಪ್ರಾಣಕ್ಕೆ ಕುತ್ತು ತರುತ್ತದೆ. ಹಾಗಾಗಿ, ಇಡೀ ಕುಟುಂಬದ ಸಾವಿಗೆ ಈ ಇಲಿ ಪಾಷಾಣವೇ ಅಸಲಿ ಕಾರಣ ಎಂಬುದು ಈಗ ಬಹಿರಂಗವಾಗಿದೆ.
ಏಪ್ರಿಲ್ 25ರ ರಾತ್ರಿ ಇಸ್ಮಾಯಿಲ್ ಕುರ್ತೆ ರಸ್ತೆಯ ಘಾರಿ ಮೊಹಲ್ಲಾದಲ್ಲಿರುವ ಡೊಕಾಡಿಯಾ ಕುಟುಂಬವು ಒಂದು ಗೆಟ್-ಟು-ಗೆದರ್ ಆಯೋಜಿಸಿತ್ತು. ನೆಂಟರೆಲ್ಲಾ ಸೇರಿ ಬಿರಿಯಾನಿ ಊಟ ಮಾಡಿದ್ದರು. ಅತಿಥಿಗಳು ಹೋದ ನಂತರ, ಅಂದರೆ ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಕುಟುಂಬದ ಸದಸ್ಯರೆಲ್ಲಾ ಸೇರಿ ಕಲ್ಲಂಗಡಿ ಹಣ್ಣನ್ನು ತಿಂದಿದ್ದಾರೆ. ಹಣ್ಣು ತಿಂದ ಕೆಲವೇ ಗಂಟೆಗಳಲ್ಲಿ, ಅಂದರೆ ಏಪ್ರಿಲ್ 26ರ ಬೆಳಗಿನ ಜಾವ 5 ಗಂಟೆಯ ಸುಮಾರಿಗೆ ನಾಲ್ವರಿಗೂ ವಿಪರೀತ ವಾಂತಿ ಮತ್ತು ಭೇದಿ ಶುರುವಾಗಿದೆ. ಪರಿಸ್ಥಿತಿ ಕೈಮೀರುತ್ತಿರುವುದನ್ನು ಗಮನಿಸಿದ ಸಂಬಂಧಿಕರು ಕೂಡಲೇ ಅವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮುಂಬೈನ ಜೆಜೆ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ನಾಲ್ವರೂ ಸಾವನ್ನಪ್ಪಿದ್ದಾರೆ. ಇದೀಗ ಇವರ ಸಾವಿಗೆ ಇಲಿ ಪಾಷಾಣವೇ ಕಾರಣ ಎಂಬ ಸತ್ಯ ಗೊತ್ತಾಗಿದೆ. ಈ ಸುದ್ದಿಯಿಂದ ಕಲ್ಲಂಗಡಿ ಹಣ್ಣು ತಿನ್ನಲು ಹೆದರುತ್ತಿದ್ದ ಜನರಿಗೆ ಸ್ವಲ್ಪ ಸಮಾಧಾನ ಸಿಕ್ಕಂತಾಗಿದೆ. ಕಲ್ಲಂಗಡಿ ಹಣ್ಣಿನಲ್ಲಿ ವಿಷ ಇರುವುದಿಲ್ಲ, ಬದಲಾಗಿ ಬೇರೆ ಮೂಲಗಳಿಂದ ಇಲಿ ಪಾಷಾಣವು ಕುಟುಂಬದ ಸದಸ್ಯರ ಹೊಟ್ಟೆ ಸೇರಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ನೋಡಿರಿ

