ಮಾರ್ಚ್‌ ಆರಂಭದಲ್ಲೇ ಬಿಸಿಲಿನ ತಾಪ ಹೆಚ್ಚಳ – ಮುಂದಿನ 3 ತಿಂಗಳು ಜನರಿಗೆ ಕಾಟ ಕೊಡಲಿದೆ ರಣ ಬಿಸಿಲು

ಮಾರ್ಚ್‌ ಆರಂಭದಲ್ಲೇ ಬಿಸಿಲಿನ ತಾಪ ಹೆಚ್ಚಳ – ಮುಂದಿನ 3 ತಿಂಗಳು ಜನರಿಗೆ ಕಾಟ ಕೊಡಲಿದೆ ರಣ ಬಿಸಿಲು

ಬೇಸಿಗೆಗಾಲ ಆರಂಭವಾಗುತ್ತಿದ್ದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಬಿಸಿಲ ಝಳ ಹೆಚ್ಚಾಗುತ್ತಿದೆ. ಬಿಸಿಲಿನ ತೀವ್ರತೆಯಿಂದ ಉಂಟಾಗುತ್ತಿರುವ ತಾಪಮಾನಕ್ಕೆ ಜನತೆ ಅಕ್ಷರಶಃ ಬೆಂಡಾಗಿದ್ದಾರೆ. ಬಿಸಿಲ ಝಳದಿಂದ ರಕ್ಷಿಸಿಕೊಳ್ಳಲು ಜನತೆ ಇನ್ನಿಲ್ಲದಂತೆ ಪರದಾಡುವಂತಾಗಿದೆ. ಶ್ರಮಿಕ ಜೀವಿಗಳು, ಅದರಲ್ಲೂ ಕಾರ್ಮಿಕರು ಬಿಸಿಲ ಬೇಗೆಗೆ ಹೈರಾಣಾಗಿದ್ದಾರೆ. ಕಳೆದ ಒಂದು ವಾರದಿಂದ ತಾಪ ಇನ್ನು ಹೆಚ್ಚಾಗಿದೆ. ಈ ಬೆನ್ನಲ್ಲೇ ಹವಮಾನ ಇಲಾಖೆ ಜನರಿಗೆ ಶಾಕಿಂಗ್‌ ನ್ಯೂಸ್‌ವೊಂದನ್ನು ಕೊಟ್ಟಿದೆ. ಮುಂದಿನ 3 ತಿಂಗಳು ರಣ ಬಿಸಿಲು ಜನರನ್ನು ಕಾಡಲಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಚಂದ್ರಯಾನಕ್ಕಾಗಿ ಜೀವ ಪಣಕ್ಕಿಟ್ರಾ ಇಸ್ರೋ ಅಧ್ಯಕ್ಷ –  ಎಸ್.ಸೋಮನಾಥ್ ಅವರ ಈ ಸಂಗತಿ ಗೊತ್ತಾದ್ರೆ ಸೆಲ್ಯೂಟ್ ಹೊಡೀತೀರಾ!

ಕಳೆದ ವರ್ಷದ ಮಳೆಯ ಅಭಾವದ ಎಫೆಕ್ಟ್ ಇನ್ನೂ ಅನುಭವಿಸುತ್ತಿದ್ದೇವೆ. ನೀರಿಲ್ಲದೇ ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿ ಬರದ ಪರಿಸ್ಥಿತಿ ಎದುರಾಗಿದೆ. ಇನ್ನೂ ಫೆಬ್ರವರಿ ತಿಂಗಳಲ್ಲೇ 34.2 ದಾಖಲೆ ಪ್ರಮಾಣದ ಉಷ್ಣಾಂಶ ರಾಜ್ಯದಲ್ಲಿ ದಾಖಲಾಗಿತ್ತು. ಮಾರ್ಚ್‌ ಆರಂಭದಲ್ಲೇ ಬಿಸಿಲಿನ ಝಳಕ್ಕೆ ಜನರು ಬಳಲಿ ಬೆಂಡಾಗಿದ್ದಾರೆ. ಮಾರ್ಚ್ 1ರಿಂದ ಬೇಸಿಗೆ  ಶುರುವಾಗಿದ್ದು, ಮೇ ಅಂತ್ಯದವರೆಗೆ ಬಿಸಿಲು ಜನರಿಗೆ ಕಾಟ ಕೊಡಲಿದೆ ಎಂದು ಐಎಂಡಿ ಎಚ್ಚರಿಕೆ ನೀಡಿದೆ.

ಪೂರ್ವ ಭಾಗದ ಸಮುದ್ರದ ನೀರಿನ ಉಷ್ಣಾಂಶ 1.5 ಗಿಂತ ಹೆಚ್ಚಾಗುವ ಸಾಧ್ಯತೆ ಇದ್ದು, ಇದನ್ನು ಏಲಿನೋ ಎಂದು ಕರೆಯುತ್ತಾರೆ. ಇದರ ಪರಿಣಾಮವಾಗಿ ರಾಜ್ಯದಲ್ಲಿ ಮೂರು ತಿಂಗಳು ವಾಡಿಕೆಗಿಂತ 70% ಹೆಚ್ಚು ಉಷ್ಣತೆ ದಾಖಲಾಗುವ ಸಾಧ್ಯತೆ ಇದೆ. ಇಡೀ ರಾಜ್ಯದಲ್ಲೇ ವಾಡಿಕೆಗಿಂತ ಹೆಚ್ಚಿನ ತಾಪಮಾನ ಮುಂದಿನ ಮೂರು ತಿಂಗಳಲ್ಲಿ ಕಾಣಬಹುದಾಗಿದೆ. ಅದೇ ರೀತಿ ಮಾರ್ಚ್‌ನಿಂದ ಮೇ ವೇಳೆಯಲ್ಲಿ ವಾಡಿಕೆಗಿಂತ 70% ರಷ್ಟು ಮಳೆಯಾಗುವ ಸಾಧ್ಯತೆ ಕೂಡ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.

ರಾಜ್ಯ ರಾಜಧಾನಿ ಸಿಲಿಕಾನ್ ಸಿಟಿಯಲ್ಲಿ ಈ ಬೇಸಿಗೆಯಲ್ಲಿ ವಾಡಿಕೆಗಿಂತ 2 ರಿಂದ 3 ಡಿಗ್ರಿಯವರೆಗೆ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದೆ. ಕರಾವಳಿ ಭಾಗದಲ್ಲಿ ಗರಿಷ್ಠ ತಾಪಮಾನ ಸರಾಸರಿ 37 ಡಿಗ್ರಿ ಇದ್ದರೇ ಉತ್ತರ ಒಳನಾಡಿನಲ್ಲಿ 39 ಡಿಗ್ರಿ ಇರಲಿದೆ. ಜೊತೆಗೆ ಉತ್ತರ ಒಳನಾಡಿನಲ್ಲಿ ಬಿಸಿಗಾಳಿಯ ಆತಂಕ ಕೂಡ ಎದುರಾಗಲಿದೆ. 4.5ಕ್ಕಿಂತ ಹೆಚ್ಚು ಉಷ್ಣಾಂಶ ಏರಿಕೆಯಾಗುವ ಸಾಧ್ಯತೆ ಹೆಚ್ಚಾಗಿದ್ದು, ಬಿಸಿಗಾಳಿಯ ವಾತಾವರಣ ಇರಲಿದೆ.

ಒಟ್ಟಾರೆ ಫೆಬ್ರವರಿಯಲ್ಲೇ ದಾಖಲೆ ಬರೆದಿರುವ ಸುಡು ಬಿಸಿಲು ಮೇ ಅಂತ್ಯದೊಳಗೆ ವಾಡಿಕೆಗಿಂತ ಹೆಚ್ಚಾಗೇ ಇರಲಿದ್ದು, ಸನ್ ಸ್ಟ್ರೋಕ್ ಕೊಡುವ ಸೂಚನೆ ಇದೆ. ಈ ಮೂರು ತಿಂಗಳಲ್ಲಿ ಆಗಾಗ ಗುಡುಗು ಸಹಿತ ಭಾರೀ ಮಳೆ ಕೂಡ ಆಗುವ ಸಾಧ್ಯತೆ ಸಹ ಇದ್ದು, ಜನ ಆರೋಗ್ಯದ ಕಡೆ ಗಮನವಹಿಸುವುದು ಉತ್ತಮ.

Shwetha M