ಮಕ್ಕಳ ಶವವನ್ನು 15 ಕಿಲೋ ಮೀಟರ್ ಹೊತ್ತುಕೊಂಡೇ ಬಂದ ಹೆತ್ತವರು – ಯಾವ ತಂದೆ ತಾಯಿಗೂ ಇಂಥಾ ಘೋರ ಸ್ಥಿತಿ ಕೊಡಬೇಡ ದೇವರೇ
ಮುದ್ದಾದ ಎರಡು ಮಕ್ಕಳು. ದಿಢೀರ್ ಅಂತಾ ಜ್ವರ ಬಂದು ಮಲಗಿಯೇ ಬಿಟ್ಟಿದ್ದರು. ವಿಪರ್ಯಾಸವೆಂದರೆ ಆ ಊರಲ್ಲಿ ಆರೋಗ್ಯಕ್ಕೆ ಬೇಕಾದ ಮೂಲ ಸೌಕರ್ಯಗಳೇ ಇರಲಿಲ್ಲ. ಹೀಗಾಗಿ ನಾಟಿ ಔಷಧಿ ಮಕ್ಕಳ ಜ್ವರ ಕಡಿಮೆ ಮಾಡಲೇ ಇಲ್ಲ. ಆಸ್ಪತ್ರೆಗೆ ಹೋಗೋಣ ಅಂದರೆ ವಾಹನಗಳು ಸಿಕ್ಕಿಲ್ಲ. ತಂದೆ ಹಾಗೂ ತಾಯಿ ಒಂದೊಂದು ಮಗುವನ್ನ ಹೊತ್ತುಕೊಂಡು 15 ಕಿಲೋ ಮೀಟರ್ ನಡೆದುಕೊಂಡು ಹೋಗುವಾಗ ಕಾಲವೇ ಮಿಂಚಿ ಹೋಗಿತ್ತು. ನಂತರ ಹೋದ ದಾರಿಯಲ್ಲೇ ಮಕ್ಕಳ ಶವವನ್ನು ಹೊತ್ತುಕೊಂಡು ಬಂದ ಆ ಪೋಷಕರ ಘೋರ ಹಣೆಬರಹ ನಮ್ಮ ಭಾರತ ಯಾವ ಅಭಿವೃದ್ಧಿ ಹೊಂದಿದೆ ಎಂಬುದಕ್ಕೆ ಸಾಕ್ಷಿ ತೋರಿಸುತ್ತಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ – ಜಾಮೀನಿಗೆ ಅರ್ಜಿ ಸಲ್ಲಿಸಲು ದರ್ಶನ್ ಸಿದ್ಧತೆ
ಇದೊಂದು ವರದಿ ನಮ್ಮ ಭಾರತದ ಹಳ್ಳಿಗಳ ದುಸ್ಥಿತಿಗೆ ಸಾಕ್ಷಿಯಾಗಿದೆ. ಇಲ್ಲಿ ಪೋಷಕರ ಘೋರ ಹಣೆಬರಹವೋ, ಮಕ್ಕಳ ಘೋರ ಸಾವೋ.. ಆದರೆ, ಈ ವರದಿ ನೋಡಿದವರು ಮಾತ್ರ ಒಂದು ಕ್ಷಣ ಬೆಚ್ಚಿ ಬೀಳ್ತಾರೆ. ಜೊತೆಗೆ ಯಾವ ತಂದೆ ತಾಯಿಗೂ ಇಂಥಾ ಕ್ರೂರ ಪರಿಸ್ಥಿತಿ ಬರೋದೇ ಬೇಡ ದೇವರೇ ಅಂತಾ ಬೇಡಿ ಕೊಳ್ತಾರೆ. ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಅನಾರೋಗ್ಯದಿಂದ ಮೃತಪಟ್ಟ ತಮ್ಮ ಇಬ್ಬರು ಮಕ್ಕಳ ಶವಗಳನ್ನು ಹೊತ್ತುಕೊಂಡು ಮಹಾರಾಷ್ಟ್ರದ ಗಡ್‌ಚಿರೋಲಿ ಜಿಲ್ಲೆಯಲ್ಲಿರುವ ತಮ್ಮ ಗ್ರಾಮವನ್ನು ತಲುಪಲು ದಂಪತಿ ಬರೋಬ್ಬರಿ 15 ಕಿ.ಮೀ. ನಡೆದು ಸಾಗಿದ್ದಾರೆ. ತಮ್ಮ ಹೆಗಲ ಮೇಲೆ ಇಬ್ಬರು ಪುಟ್ಟ ಗಂಡು ಮಕ್ಕಳ ಶವಗಳನ್ನು ಹೊತ್ತುಕೊಂಡು ನಡೆಯುತ್ತಿರುವ ಗಂಡ-ಹೆಂಡತಿಯ ವಿಡಿಯೋ ಎಂಥವರ ಮನಸನ್ನೂ ಕರಗಿಸುವಂತಿದೆ. ಮಹಾರಾಷ್ಟ್ರದ ಪಟ್ಟಿಗಾಂವ್ ಗ್ರಾಮದಲ್ಲಿ ಸೆಪ್ಟೆಂಬರ್ 4ರಂದು ಈ ಘಟನೆ ಸಂಭವಿಸಿದೆ. 6 ಮತ್ತು 3 ವರ್ಷ ವಯಸ್ಸಿನ ಇಬ್ಬರು ಅಣ್ಣ-ತಮ್ಮ ಸೆಪ್ಟೆಂಬರ್ 4ರಂದು ಜ್ವರದಿಂದ ಅಸ್ವಸ್ಥರಾಗಿದ್ದರು. ಗ್ರಾಮದಲ್ಲಿ ಸರಿಯಾದ ಆರೋಗ್ಯ ಸೌಲಭ್ಯಗಳ ಕೊರತೆಯಿಂದಾಗಿ ಅವರ ಪೋಷಕರು ತಮ್ಮ ಮಕ್ಕಳನ್ನು ಸಾಂಪ್ರದಾಯಿಕ ಚಿಕಿತ್ಸೆಗಾಗಿ ಸ್ಥಳೀಯ ಪಂಡಿತರ ಬಳಿಗೆ ಕರೆದೊಯ್ದರು. ಆ ಪಂಡಿತ ಕೆಲವು ಗಿಡಮೂಲಿಕೆ ಔಷಧಗಳನ್ನು ನೀಡಿದರು. ಆದರೆ ಎರಡೂ ಮಕ್ಕಳ ಸ್ಥಿತಿಯು ಇನ್ನಷ್ಟು ಹದಗೆಟ್ಟಿತು. ಕೆಲವೇ ಗಂಟೆಗಳಲ್ಲಿ, ಸಹೋದರರಿಬ್ಬರೂ ಉಸಿರಾಡಲು ತೊಂದರೆ ಅನುಭವಿಸಿದರು. ಪಟ್ಟಿಗಾಂವ್‌ನಿಂದ ಜಿಮ್ಲಗಟ್ಟಾದಲ್ಲಿನ ಆರೋಗ್ಯ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಸುಸಜ್ಜಿತ ರಸ್ತೆಯಿಲ್ಲದೆ ಮತ್ತು ಆ ಸಮಯದಲ್ಲಿ ಯಾವುದೇ ಆಂಬ್ಯುಲೆನ್ಸ್ ಸೇವೆ ಲಭ್ಯವಿಲ್ಲದೇ, ಪೋಷಕರಿಗೆ ತಮ್ಮ ಮಕ್ಕಳ ದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುವುದನ್ನು ಬಿಟ್ಟು ಬೇರೆ ದಾರಿ ಇರಲಿಲ್ಲ. ಅವರು ಜಿಮ್ಲಗಟ್ಟಾ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತಲುಪಲು 15 ಕಿಲೋಮೀಟರ್‌ಗಳವರೆಗೆ ನದಿಗಳು, ಕೆಸರಿನ ಹಾದಿಗಳ ಮೂಲಕ ಓಡಿದರು. ಆದರೆ, ಅಷ್ಟರಲ್ಲಾಗಲೇ ಆ ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಹೇಳಿದರು. 15 ಕಿ.ಮೀ. ಮಕ್ಕಳನ್ನು ಹೊತ್ತುಕೊಂಡು ಹೋಗಿದ್ದ ದಂಪತಿ ಆ ಶವಗಳನ್ನು ಮತ್ತೆ ಮನೆಗೆ ತರಲು 15 ಕಿ.ಮೀ. ವಾಪಾಸ್ ಊರಿಗೆ ಕಲ್ಲು ಮುಳ್ಳಿನ ಹಾದಿಯಲ್ಲಿ ನಡೆದಿದ್ದಾರೆ.
ಅಂತಿಮವಾಗಿ ಆಸ್ಪತ್ರೆಯವರು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುವುದಾಗಿ ಹೇಳಿದರೂ ದುಃಖಿತ ಪೋಷಕರು ಆ ಸಹಾಯವನ್ನು ನಿರಾಕರಿಸಿದರು. ಕಾಲ್ನಡಿಗೆಯಲ್ಲಿ ಮನೆಗೆ ಹಿಂದಿರುಗಿದರು. ಗಡ್ಚಿರೋಲಿ ಜಿಲ್ಲೆಯಲ್ಲಿ ಈ ರೀತಿಯ ಘಟನೆ ಹೊಸತೇನಲ್ಲ. ಭಮ್ರಗಡ್, ಎಟಪಲ್ಲಿ ಮತ್ತು ಅಹೇರಿ ತಹಸಿಲ್‌ಗಳ ಇತರ ದೂರದ ಹಳ್ಳಿಗಳಿಂದ ಇದೇ ರೀತಿಯ ದುರಂತಗಳು ಹಿಂದೆ ವರದಿಯಾಗಿವೆ. ಅನೇಕ ಗ್ರಾಮಗಳಿಗೆ ಸರಿಯಾದ ರಸ್ತೆಗಳು, ವೈದ್ಯಕೀಯ ತಜ್ಞರು ಮತ್ತು ಸಕಾಲಿಕ ಆಂಬ್ಯುಲೆನ್ಸ್ ಸೇವೆಗಳ ಕೊರತೆಯಿದೆ. ವೈದ್ಯಕೀಯ ತುರ್ತು ಸಂದರ್ಭಗಳಲ್ಲಿ ನಿವಾಸಿಗಳು ಅಸಹಾಯಕರಾಗುತ್ತಾರೆ.