ರೈಲ್ವೇ ಅಧಿಕಾರಿ ಮಗಳ ಶೂ ಮಿಸ್ಸಿಂಗ್ – ಒಂದು ತಿಂಗಳು ‘ಶೂ’ ತನಿಖೆಗಾಗಿ ಶ್ರಮಿಸಿದ ಪೊಲೀಸ್

ರೈಲ್ವೇ ಅಧಿಕಾರಿ ಮಗಳ ಶೂ ಮಿಸ್ಸಿಂಗ್ – ಒಂದು ತಿಂಗಳು ‘ಶೂ’ ತನಿಖೆಗಾಗಿ ಶ್ರಮಿಸಿದ ಪೊಲೀಸ್

ಕೆಲವೊಮ್ಮೆ ಸರ್ಕಾರಿ ಅಧಿಕಾರಿಗಳು ತಮ್ಮ ಅಧಿಕಾರವನ್ನು ಹೇಗೆಲ್ಲಾ ದುರುಪಯೋಗ ಪಡಿಸಿಕೊಳ್ತಾರೆ ಅನ್ನೋದಕ್ಕೆ ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ. ಒಡಿಶಾ ಮೂಲದ ರೈಲ್ವೆ ಅಧಿಕಾರಿಯ 20 ವರ್ಷದ ಮಗಳು ಎಸಿ ದರ್ಜೆ ರೈಲಿನಲ್ಲಿ ಉತ್ತರ ಪ್ರದೇಶಕ್ಕೆ ಪ್ರಯಾಣಿಸುತ್ತಿದ್ದಳು. ಆಕೆ 10 ಸಾವಿರ ರೂಪಾಯಿ ಮೌಲ್ಯದ ಶೂ ಅನ್ನು ಧರಿಸಿ ರೈಲಿನಲ್ಲಿ ಪ್ರಯಾಣ ಮಾಡಿದ್ದಳು. ನಂತರ ಪ್ರಯಾಣದ ಸಂದರ್ಭದಲ್ಲಿ ಬೆಲೆಬಾಳುವ ಶೂ ಅನ್ನು ಬಿಚ್ಚಿಟ್ಟಿದ್ದಳು. ಇಳಿಯುವ ಮುನ್ನ ನೋಡಿದಾಗ ಬೆಲೆ ಬಾಳುವ ಶೂಗಳು ಕಾಣಿಸುತ್ತಿರಲಿಲ್ಲ. ಬರೇಲಿಯಲ್ಲಿ ಇಳಿದ ಮಹಿಳೆಯೇ ಅವುಗಳನ್ನು ಕದ್ದುಕೊಂಡು ಹೋಗಿರಬೇಕು ಎಂದು ಆಕೆ ದೂರು ನೀಡಿದ್ದಳು. ಆ ಮಹಿಳೆ ತನ್ನ ಹಳೆಯ, ಗುಲಾಬಿ ಬಣ್ಣದ ಮಸುಕಾದ ಶೂಗಳನ್ನು ಅಲ್ಲಿಯೇ ಬಿಟ್ಟು ಹೋಗಿದ್ದಳು.

ಇದನ್ನೂ ಓದಿ:  ಪ್ರೇಯಸಿ ಕೊಂದು ಶವ ಫ್ರಿಡ್ಜ್ ನಲ್ಲಿಟ್ಟು ಮರುದಿನವೇ ಮತ್ತೊಬ್ಬಳ ಜತೆ ಮದುವೆ – ಪಾಪಿಯ ಕೃತ್ಯವೇ ಭಯಾನಕ..!

ಮಗಳ ಶೂ ಕಳ್ಳತನವಾಗಿದೆ ಎಂದು ಪೂರ್ವ ಕರಾವಳಿ ರೈಲ್ವೆ ವಲಯದ ವಿಭಾಗೀಯ ರೈಲ್ವೆ ವ್ಯವಸ್ಥಾಪಕ ವಿನೀತ್ ಸಿಂಗ್ ಅವರು ಜ. 5ರಂದು ಒಡಿಶಾದ ಸಂಬಾಲ್ಪುರದಲ್ಲಿ ಕಳ್ಳತನ ದೂರು ಸಲ್ಲಿಸಿದ್ದರು. ಲಖನೌ ಮೇಲ್ ರೈಲಿನ ಪ್ರಥಮ ದರ್ಜೆ ಎಸಿ ಕೋಚ್‌ನಿಂದ 10,000 ರೂ ಮೌಲ್ಯದ ಒಂದು ಜತೆ ಶೂಗಳನ್ನು ಕಳವು ಮಾಡಲಾಗಿದೆ ಎಂದು ಆರೋಪಿಸಿದ್ದರು. ಬರೇಲಿ ನಿಲ್ದಾಣದಲ್ಲಿ ಇಳಿದ ಮಹಿಳೆಯು ತನ್ನ ಹಳೆಯ ಗುಲಾಬಿ ಬಣ್ಣದ ಲೇಸ್‌ರಹಿತ ಶೂಗಳನ್ನು ಕ್ಯಾಬಿನ್‌ನಲ್ಲಿ ಬಿಟ್ಟು, ಈ ಹೊಸ ಶೂಗಳನ್ನು ಕದ್ದಿರುವ ಶಂಕೆ ಇದೆ ಎಂದು ಅವರು ದೂರಿನಲ್ಲಿ ಹೇಳಿದ್ದರು.

ರೈಲ್ವೇ ಅಧಿಕಾರಿಯ ಮಗಳ ಬೆಲೆ ಬಾಳುವ ಶೂ ಪತ್ತೆಗಾಗಿ ಸರ್ಕಾರಿ ರೈಲ್ವೆ ಪೊಲೀಸ್ , ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಮತ್ತು ಭಾರತೀಯ ರೈಲ್ವೆ ಕೆಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮ (ಐಆರ್‌ಸಿಟಿಸಿ) ಜಂಟಿಯಾಗಿ ಸುಮಾರು ಒಂದು ತಿಂಗಳು ತನಿಖೆ ನಡೆಸಿವೆ!. ಇಷ್ಟು ‘ಮಹತ್ವ’ದ ಪ್ರಕರಣದ ತನಿಖೆ ನಡೆಸಿದ ಅವರು ‘ಕಳುವಾದ’ ಶೂಗಳನ್ನು ಕೊನೆಗೂ ಪತ್ತೆ ಮಾಡಿದ್ದಾರೆ. ಈ ಘಟನೆ ನಡೆದಿದ್ದು ಜನವರಿ 4ರಂದು. ಉತ್ತರ ಪ್ರದೇಶದ ಬರೇಲಿ ನಿಲ್ದಾಣಕ್ಕೆ ನಸುಕಿನ 3 ಗಂಟೆ ಸುಮಾರಿಗೆ ರೈಲು ತಲುಪಿತ್ತು. ಬರೇಲಿಯಲ್ಲಿ ಇಳಿದ ಮಹಿಳಾ ಪ್ರಯಾಣಿಕರನ್ನು ಪತ್ತೆ ಮಾಡಲು ಅಧಿಕಾರಿಗಳು ಪ್ರಯತ್ನಿಸಿದ್ದರು. ಅವರ ಸುಳಿವು ಕಂಡುಕೊಳ್ಳಲು ಉತ್ತರ ಪ್ರದೇಶದಿಂದ ಒಡಿಶಾವರೆಗೂ ಹುಡುಕಾಟ ನಡೆಸಿದ್ದರು. ರೈಲಿನ ರಿಸರ್ವೇಷನ್ ಪಟ್ಟಿಯ ಮೂಲಕ ಮಹಿಳೆಯನ್ನು ಕೊನೆಗೂ ಅವರು ಪತ್ತೆ ಮಾಡಿದ್ದಾರೆ. ತಾವು ಹುಡುಕುತ್ತಿದ್ದ ಮಹಿಳೆ ಕಳ್ಳಿಯಲ್ಲ, ಆಕೆ 34 ವರ್ಷದ ವೈದ್ಯೆಯಾಗಿದ್ದರು. ಅವರು ಆ ಬೆಲೆ ಬಾಳುವ ಶೂ ಕಳ್ಳತನ ಮಾಡಿಲ್ಲ. ಇಳಿಯುವ ಆತುರದಲ್ಲಿ ಗೊತ್ತಾಗದೆ ಯುವತಿ ಶೂಗಳನ್ನು ಹಾಕಿಕೊಂಡು ಹೋಗಿದ್ದಾರೆ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ.

suddiyaana