ತಿಂಗಳಿಗೆ 70 ಮಕ್ಕಳನ್ನು ಅಬಾರ್ಷನ್ ಮಾಡುತ್ತಿದ್ದೆ ಎಂದ ನರ್ಸ್ – ಇವರೆಲ್ಲಾ ಮನುಷ್ಯರೋ.. ರಾಕ್ಷಸರೋ..?

ತಿಂಗಳಿಗೆ 70 ಮಕ್ಕಳನ್ನು ಅಬಾರ್ಷನ್ ಮಾಡುತ್ತಿದ್ದೆ ಎಂದ ನರ್ಸ್ – ಇವರೆಲ್ಲಾ ಮನುಷ್ಯರೋ.. ರಾಕ್ಷಸರೋ..?

ಭ್ರೂಣ ಹತ್ಯೆ ಪ್ರಕರಣ ಇಡೀ ರಾಜ್ಯವನ್ನೇ ನಡುಗಿಸಿತ್ತು. ಇನ್ನು ಇದರ ಹಿಂದಿರುವ ಕರಾಳ ಕಥೆ ಕೇಳಿದರೆ ಕರುಳೇ ಹಿಂಡುತ್ತಿದೆ. ಪ್ರಪಂಚ ನೋಡುವ ಮೊದಲೇ ಕಮರಿಹೋಗುತ್ತಿರುವ ಜೀವಗಳಿಗೆ ಲೆಕ್ಕವೇ ಇರಲಿಲ್ಲ. ಈ ಜೀವ ತೆಗೆಯುವವರಿಗೆ ಮನುಷ್ಯತ್ವವೇ ಇರಲಿಲ್ಲ. ಅದರಲ್ಲೂ ನರ್ಸ್ ವೊಬ್ಬರು ಬಾಯ್ಬಿಟ್ಟ ಸತ್ಯ ಕೇಳಿದರೆ, ಇವರೆಲ್ಲಾ ನಿಜಕ್ಕೂ ಮನುಷ್ಯರೋ.. ಇಲ್ಲ ರಾಕ್ಷಸರೇ ಎಂದು ನೀವು ಕೂಡಾ ಕೇಳದೇ ಇರುವುದಿಲ್ಲ.

ಇದನ್ನೂ ಓದಿ: ರಾಜ್ಯದಲ್ಲಿ ಭ್ರೂಣ ಹತ್ಯೆ ಪ್ರಕರಣ – ‌ಭ್ರೂಣ ಹತ್ಯೆ ಹೇಗೆ ನಡೆಯುತ್ತೆ ಎಂದು ಎಳೆಎಳೆಯಾಗಿ ಬಿಚ್ಚಿಟ್ಟ ಪುರಸಭೆ ಸದಸ್ಯ!

ಮೈಸೂರು ಭ್ರೂಣ ಹತ್ಯೆ ಪ್ರಕರಣದಲ್ಲಿ ಪೊಲೀಸರು ನರ್ಸ್ ಮಂಜುಳಾಳನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ ಭ್ರೂಣ ಹತ್ಯೆಯ ಕುರಿತು ಸ್ಫೋಟಕ ಮಾಹಿತಿಗಳನ್ನು ಪೊಲೀಸರ ಬಳಿ ಈಕೆ ಬಾಯ್ಬಿಟ್ಟಿದ್ದಾಳೆ. ತಿಂಗಳಿಗೆ 70 ಮಕ್ಕಳನ್ನು ಅಬಾರ್ಷನ್ ಮಾಡಿದ್ದೇನೆ. ಈ ಮೊದಲು ರೀಸ್ಮಾ ಅಬಾರ್ಷನ್ ಮಾಡುವ ಕೆಲಸವನ್ನು ಮಾಡುತ್ತಿದ್ದಳು. ಅವಳಾದ ಬಳಿಕ ನಾನು ಮಗುವನ್ನು ಅಬಾರ್ಷನ್ ಮಾಡುವುದಕ್ಕೆ ಸೇರಿಕೊಂಡಿದ್ದೆ. 6 ತಿಂಗಳ ಮಗುವನ್ನು ಕೂಡಾ ನಾನು ಅಬಾರ್ಷನ್ ಮಾಡಿದ್ದೇನೆ ಎಂದಿದ್ದಾಳೆ. ತಿಂಗಳಲ್ಲಿ ಕನಿಷ್ಠ 2 ಪ್ರಕರಣದಲ್ಲಿ 6 ತಿಂಗಳ ಮಕ್ಕಳನ್ನು ಹೊರತೆಗೆದಿದ್ದೇನೆ. ಆ ಮಕ್ಕಳಿಗೆ ಜೀವ ಇರುತ್ತಿತ್ತು. 6 ತಿಂಗಳ ಮಗುವಿಗೆ ಧ್ವನಿ ಇರುವುದಿಲ್ಲ. ಮಗು ಹೊರಗೆ ತೆಗೆದ 5ರಿಂದ 10 ನಿಮಿಷದಲ್ಲಿ ಸಾಯುತ್ತಿದ್ದವು. ಅದನ್ನು ಪೇಪರ್‌ಗೆ ಸುತ್ತಿ ನಿಸಾರ್‌ಗೆ ಕೊಡುತ್ತಿದ್ದೆ. ನಿಸಾರ್ ಆ ಮಗುವನ್ನು ತೆಗೆದುಕೊಂಡು ಹೋಗಿ ಕಾವೇರಿ ನದಿಗೆ ಬಿಸಾಕಿ ಬರುತ್ತಿದ್ದ. 12 ವಾರ ಕಳೆದ ಮಕ್ಕಳನ್ನು ಅಬಾರ್ಟ್ ಮಾಡಿ ಮೆಡಿಕಲ್ ವೇಸ್ಟ್‌ಗೆ ಹಾಕುತ್ತಿದ್ದೆವು. 4 ದಿನಕ್ಕೆ ಮೆಡಿಕಲ್ ವೇಸ್ಟ್ ಅಲ್ಲಿ ಮಗು ಕೊಳೆತು ಹೋಗುತ್ತಿತ್ತು ಎಂಬ ಭಯಾನಕ ವಿಚಾರವನ್ನು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾಳೆ. ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿರುವ ಮಂಜುಳಾ, ಕಳೆದೊಂದು ವರ್ಷದಿಂದ ನಾನು ಚಂದನ್ ಬಲ್ಲಾಳ್ ಬಳಿ ಕೆಲಸ ಮಾಡುತ್ತಿದ್ದೆ ಎಂದು ಹೇಳಿದ್ದಾಳೆ.

ಭ್ರೂಣ ಹತ್ಯೆ ಮಾಡಿದ ಬಳಿಕ ತೀರಾ ರಕ್ತಸ್ರಾವ ಆಗುತ್ತಿತ್ತು. ಆಗ ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಳ್ಳಲು ಆಗುತ್ತಿರಲಿಲ್ಲ. ಆರು ತಿಂಗಳ ಮಗುವನ್ನು ಅಬಾರ್ಷನ್ ಮಾಡುವುದಕ್ಕೆ ಬೇರೆಯೇ ಕಾರಣ ಇತ್ತು. ನಮ್ಮ ಬಳಿ ಅಡ್ವಾನ್ಸ್ ಸ್ಕ್ಯಾನಿಂಗ್ ಮೆಷಿನ್ ಇರಲಿಲ್ಲ. ಕೆಲವೊಮ್ಮೆ ಹೆಣ್ಣು ಭ್ರೂಣನಾ? ಗಂಡು ಭ್ರೂಣನಾ ಎಂದು ಗೊತ್ತಾಗುತ್ತಿರಲಿಲ್ಲ. ಲಿಂಗ ಪತ್ತೆಯಾಗದೇ ಇದ್ದಾಗ ತಿಂಗಳು ಬಿಟ್ಟು ಬರೋದಕ್ಕೆ ಹೇಳುತ್ತಿದ್ದೆವು. ಹೀಗಾಗಿ ಮಗುವನ್ನು ಕಂಡು ಹಿಡಿಯಲು ತಡ ಆದಾಗ 6 ತಿಂಗಳ ಮಗುವನ್ನು ಅಬಾರ್ಷನ್ ಮಾಡಲಾಗುತ್ತಿತ್ತು ಎಂದು ಹೇಳಿಕೆ ನೀಡಿದ್ದಾಳೆ. 6 ತಿಂಗಳ ಮಗು ಅಬಾರ್ಷನ್ ಮಾಡಲು ನಮ್ಮದೇ ಕಾರಣ ಇದೆ. 6 ತಿಂಗಳ ಮಗುವನ್ನು ಸಿಸೇರಿಯನ್ ಮೂಲಕ ಹೆರಿಗೆ ರೀತಿಯಲ್ಲಿ ಮಾಡುತ್ತಿದ್ದೆವು. ಸಿ ಸೆಕ್ಷನ್ ಮೂಲಕ ತೆಗೆದು ಟೇಬಲ್ ಮೇಲೆ ಇಡಲಾಗುತ್ತಿತ್ತು. 5 ರಿಂದ 10 ನಿಮಿಷಕ್ಕೆ ಆ ಮಗು ಸಾಯುತ್ತಿತ್ತು. ತಾಯಿಗೆ ಪ್ರಜ್ಞೆ ಇಲ್ಲದಂತೆ ಮಾಡಿ ಸಿ ಸೆಕ್ಷನ್ ಮಾಡಲಾಗುತ್ತಿತ್ತು ಎಂಬ ಸ್ಫೋಟಕ ಮಾಹಿತಿ ಪೊಲೀಸರಿಗೆ ನೀಡಿದ್ದಾಳೆ.

ಇಂಥಾ ಭಯಾನಕ ವಿಚಾರವನ್ನು ನರ್ಸ್ ಬಾಯಿಬಿಟ್ಟಿದ್ದಾಳೆ. ಇದನ್ನೆಲ್ಲಾ ನೋಡುತ್ತಿದ್ದರೆ ನಿಜಕ್ಕೂ ಇವರೆಲ್ಲಾ ಮನುಷ್ಯರೇ ಹೌದಾ ಅಂತಾ ಅನಿಸದೆ ಇರುವುದಿಲ್ಲ.

Sulekha