ಬರಪೀಡಿತ ತಾಲೂಕುಗಳ ಸಂಖ್ಯೆ 195ರಿಂದ 216ಕ್ಕೆ ಏರಿಕೆ – ರಾಜ್ಯ ಸರ್ಕಾರದಿಂದ ಅಧಿಕೃತ ಘೋಷಣೆ
ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಕೈಕೊಟ್ಟಿದೆ. ಮಳೆ ಅಭಾವದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಳೆ ಕೈಕೊಟ್ಟ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಿ ಆಗಸ್ಟ್ ತಿಂಗಳಾಂತ್ಯಕ್ಕೆ 195 ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಣೆ ಮಾಡಿತ್ತು. ಇದಾದ ನಂತರ ಸೆಪ್ಟಂಬರ್ ತಿಂಗಳಲ್ಲಿಯೂ ಮಳೆ ಕೊರತೆ ಉಂಟಾಗಿದ್ದರಿಂದ ಹೆಚ್ಚುವರಿ 21 ತಾಲೂಕುಗಳನ್ನು ಬರಪೀಡಿತವೆಂದು ಘೋಷಣೆ ಮಾಡಿ ಒಟ್ಟು 216 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಸರ್ಕಾರ ಘೋಷಣೆ ಮಾಡಿದೆ.
ಈ ಎಲ್ಲಾ ತಾಲೂಕುಗಳಲ್ಲಿ ಕೇಂದ್ರ ಸರ್ಕಾರದ ಬರ ನಿರ್ವಹಣೆ ಕೈಪಿಡಿ – 2020ರ ಬರ ಘೋಷಣೆ ಮಾರ್ಗಸೂಚಿಯಲ್ಲಿನ ಮಾನದಂಡಗಳನ್ವಯ ಜಿಲ್ಲಾಧಿಕಾರಿಗಳಿಂದ ಬೆಳೆಹಾನಿ ಸಮೀಕ್ಷೆ ನಡೆಸಿದ್ದಾರೆ. ಸಮೀಕ್ಷೆ ವರದಿಯನ್ನಾಧರಿಸಿ ಸರ್ಕಾರ 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ರಾಜ್ಯದ 31 ಜಿಲ್ಲೆಗಳ 236 ತಾಲ್ಲೂಕುಗಳ ಪೈಕಿ 195 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಘೋಷಣೆ ಮಾಡಿದೆ. ಈ ಪೈಕಿ ಸಾಧಾರಣ ಬರಪೀಡಿತ 34 ತಾಲ್ಲೂಕುಗಳಲ್ಲಿ ಮತ್ತೊಮ್ಮೆ 22 ತಾಲ್ಲೂಕುಗಳ ಬೆಳೆ ಸಮೀಕ್ಷೆ ದೃಢೀಕರಣ ವರದಿಯನ್ವಯ 11 ತೀವ್ರ ಬರ ಪೀಡಿತ ತಾಲ್ಲೂಕು ಹಾಗೂ 11 ಸಾಧಾರಣ ಬರ ಪೀಡಿತ ತಾಲೂಕು ಹಾಗೂ ಹೆಚ್ಚುವರಿಯಾಗಿ 21 ಬರ ಪೀಡಿತ ತಾಲ್ಲೂಕುಗಳ ಪೈಕಿ, 17 ತೀವು ಬರಪೀಡಿತ ತಾಲ್ಲೂಕು ಹಾಗೂ 04 ಸಾಧಾರಣಾ ಬರಪೀಡಿತ ತಾಲ್ಲೂಕುಗಳೆಂದು ರಾಜ್ಯ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಮೈಸೂರು ನಗರದಲ್ಲಿ 144 ಸೆಕ್ಷನ್ ಜಾರಿ – ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ
ಜಿಲ್ಲಾಧಿಕಾರಿಗಳಿಂದ ಬೆಳೆ ಸಮೀಕ್ಷೆ ಬಗ್ಗೆ ವರದಿಯನ್ನು ಪಡೆದು ಪರಿಶೀಲಿಸಿ, ಮೊದಲು ಸಾಧಾರಣ ಬರ ಪೀಡಿತವೆಂದು ಗುರುತಿಸಲಾದ 34 ತಾಲ್ಲೂಕುಗಳ ಪೈಕಿ 22 ತಾಲ್ಲೂಕುಗಳಲ್ಲಿ Ground Truthing ಕೈಗೊಂಡು ನೀಡಿರುವ ವರದಿಯನುಸಾರ 11 ತಾಲ್ಲೂಕುಗಳಲ್ಲಿ “ತೀವ್ರ” ಬರ ಹಾಗೂ 11 ತಾಲ್ಲೂಕುಗಳಲ್ಲಿ “ಸಾಧಾರಣ” ಬರ ಪೀಡಿತ ತಾಲ್ಲೂಕು ಎಂದು ಘೋಷಿಸುವ ಅರ್ಹತೆ ಪಡೆದಿರುವುದಾಗಿ ಹಾಗೂ ಸೆಪ್ಟೆಂಬರ್ ಅಂತ್ಯದವರೆಗಿನ ಅವಧಿಗೆ ಬರ ಪರಿಸ್ಥಿತಿ ಕಂಡು ಬಂದ 21 ತಾಲ್ಲೂಕುಗಳ ಪೈಕಿ Ground Truthing ಕೈಗೊಂಡ ವರದಿಯನ್ವಯ 17 ತಾಲ್ಲೂಕುಗಳನ್ನು “ತೀವ್ರ” ಬರಪೀಡಿತ ತಾಲ್ಲೂಕು ಎಂದು ಮತ್ತು ಉಳಿದ 4 ತಾಲ್ಲೂಕು “ಸಾಧಾರಣ” ಬರಪೀಡಿತವೆಂದು ಒಟ್ಟು 236 ತಾಲ್ಲೂಕುಗಳ ಪೈಕಿ 189 ತೀವ್ರ ಬರಪೀಡಿತ ತಾಲ್ಲೂಕು ಹಾಗೂ 27 ಸಾಧಾರಣಾ ಬರಪೀಡಿತ ತಾಲ್ಲೂಕುಗಳು ಒಳಗೊಂಡಂತೆ ಒಟ್ಟು 216 ತಾಲ್ಲೂಕುಗಳನ್ನು ಬರಪೀಡಿತ ತಾಲೂಕುಗಳಾಗಿ ಅರ್ಹತೆ ಪಡೆದಿರುವುದು ಕಂಡುಬಂದಿದೆ.