ತಿಮ್ಮಪ್ಪನ ಸನ್ನಿಧಿಯಲ್ಲಿ ಹೆಚ್ಚಾದ ಭಕ್ತರ ಸಂಖ್ಯೆ – ತಿಮ್ಮಪ್ಪನ ದರ್ಶನಕ್ಕೆ 12 ಗಂಟೆ ಕಾಯುವುದು ಅನಿವಾರ್ಯ! 

ತಿಮ್ಮಪ್ಪನ ಸನ್ನಿಧಿಯಲ್ಲಿ ಹೆಚ್ಚಾದ ಭಕ್ತರ ಸಂಖ್ಯೆ – ತಿಮ್ಮಪ್ಪನ ದರ್ಶನಕ್ಕೆ 12 ಗಂಟೆ ಕಾಯುವುದು ಅನಿವಾರ್ಯ! 

ತಿರುಪತಿ ತಿಮ್ಮಪ್ಪ ಭಕ್ತರ ಪಾಲಿಗೆ ಕಾಮಧೇನು. ಒಂದು ಕೇಳಿದರೆ ನಾಲ್ಕರಷ್ಟು ಕೊಡುವ ಭಗವಂತ. ತಿಮ್ಮಪ್ಪನನ್ನು ಒಮ್ಮೆಯಾದರೂ ಕಣ್ಣು ತುಂಬಿಕೊಳ್ಳಬೇಕು ಅಂತಾ ಲಕ್ಷಾಂತರ ಮಂದಿ ದೇಗುಲಕ್ಕೆ ಆಗಮಿಸುತ್ತಿದ್ದಾರೆ. ಕಳೆದ ತಿಂಗಳಿನಿಂದ ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಭಕ್ತ ಸಾಗರವೇ ಹರಿದು ಬರುತ್ತಿದೆ. ಹೀಗಾಗಿ ತಿಮ್ಮಪ್ಪನ ದರ್ಶನಕ್ಕೆ ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ತಿರುಪತಿ ದೇವಸ್ಥಾನದ ಅಧಿಕಾರಿಗಳು  ಟೋಕನ್ ಇಲ್ಲದ ಭಕ್ತರು ತಿರುಮಲದಲ್ಲಿ ಶ್ರೀವಾರಿ ಸರ್ವದರ್ಶನ ಪಡೆಯಲು 12 ಗಂಟೆ ಕಾಯುವುದು ಅನಿವಾರ್ಯ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇನ್ನೂ ಬಾರದ ಮಳೆ – ಮತ್ತೆ ಬೇಸಿಗೆ ರಜೆ ವಿಸ್ತರಿಸಿದ ಶಿಕ್ಷಣ ಇಲಾಖೆ 

ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಿದ್ದಾರೆ. ದೇಶದ ದೇಗುಲದ 9 ಕಂಪಾರ್ಟ್ ಮೆಂಟ್​ಗಳು ಭಕ್ತರಿಂದ ತುಂಬುತ್ತಿವೆ. ಟೋಕನ್ ಇಲ್ಲದ ಭಕ್ತರು ತಿರುಮಲದಲ್ಲಿ ಬಾಲಾಜಿ ಸರ್ವದರ್ಶನ ಪಡೆಯಲು 12 ಗಂಟೆ ಕಾಯುವುದು ಅನಿವಾರ್ಯ. ಸೋಮವಾರ ಒಂದೇ ದಿನ 73,156 ಭಕ್ತರು ದೇವರ ದರ್ಶನ ಪಡೆದಿದ್ದು, 28,175 ಭಕ್ತರು ತಾಲನಿಲ ಸಮರ್ಪಿಸಿದ್ದಾರೆ. ಭಕ್ತರು ನೀಡಿದ ಹುಂಡಿ ಕಾಣಿಕೆಯಿಂದಲೇ ಬರೋಬ್ಬರಿ 4.29 ಕೋಟಿ ಆದಾಯ ಬಂದಿದೆ ಎಂದು ಹೇಳಿದ್ದಾರೆ.

ಶಾಲೆಗಳು ತೆರೆದರೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ತಿರುಮಲಕ್ಕೆ ಆಗಮಿಸುತ್ತಿದ್ದಾರೆ. ವಾರಾಂತ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಿದ್ದಾರೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಟಿಟಿಡಿ ವಿಶೇಷ ಕ್ರಮ ಕೈಗೊಂಡಿದೆ. ಭಕ್ತರಿಗೆ ಹಾಲು, ಮಜ್ಜಿಗೆ, ಕಿಚಿಡಿ, ಉಪ್ಮಾ, ಅನ್ನ- ಸಾಂಬಾರ್, ಮೊಸರನ್ನ, ಕಡಲೆಕಾಳು ಪಲ್ಯ ಮತ್ತು ಎಳನೀರನ್ನು ಒದಗಿಸುತ್ತದೆ.

ಇನ್ನೂ ತಿರುಪತಿಯ ತಾಳ್ಳಪಾಕ ಶ್ರೀ ಸಿದ್ಧೇಶ್ವರ ಸ್ವಾಮಿಯ ವಾರ್ಷಿಕ ಬ್ರಹ್ಮೋತ್ಸವವು ಜೂನ್ 29 ರಿಂದ ಜುಲೈ 7 ರವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಬ್ರಹ್ಮೋತ್ಸವದ ಒಂದು ದಿನ ಮುಂಚಿತವಾಗಿ ಜೂನ್ 28 ರಂದು ಸಂಜೆ 5 ಗಂಟೆಗೆ ಅಂಕುರಾರ್ಪಣೆ ನಡೆಯಲಿದೆ.  ಜೂನ್ 30 ರಂದು ಸಂಜೆ ಚಂದ್ರಪ್ರಭಾವಾಹನ, ಜುಲೈ 1ರಂದು ಸಂಜೆ ಚಿನ್ನಶೇಷ ವಾಹನ, 2ರಂದು ಸಂಜೆ ಸಿಂಹವಾಹನ, 3ರಂದು ಸಂಜೆ ನಂದಿವಾಹನಸೇವೆ ನಡೆಯಲಿದೆ. ಜುಲೈ 4 ರಂದು ಸಂಜೆ 6 ಗಂಟೆಗೆ ಆರ್ಜಿತ ಕಲ್ಯಾಣೋತ್ಸವ ನಡೆಯಲಿದೆ. ಜುಲೈ 5ರಂದು ಸಂಜೆ ಪಲ್ಲಕ್ಕಿ ಸೇವೆ, ಜುಲೈ 6ರಂದು ಸಂಜೆ 6ಕ್ಕೆ ಪಾರ್ವೇತೋತ್ಸವ, ಜುಲೈ 7ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ತ್ರಿಶೂಲ ಸ್ನಾನ, ಸಂಜೆ 5ಕ್ಕೆ ಧ್ವಜಾರೋಹಣದೊಂದಿಗೆ ಬ್ರಹ್ಮೋತ್ಸವ ಸಮಾಪನಗೊಳ್ಳಲಿದೆ. ಈ ವೇಳೆಯೂ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

suddiyaana