ರಾಹುಲ್ ಗಾಂಧಿ ನವಯುಗದ ರಾವಣ! – ಭಾರತವನ್ನು ನಾಶಮಾಡುವುದೇ ರಾಗಾ ಗುರಿ – ಪೋಸ್ಟರ್ ರಿವೀಲ್ ಮಾಡಿದ ಬಿಜೆಪಿ
ನವದೆಹಲಿ: ಕೇಂದ್ರ ಬಿಜೆಪಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಸದಾ ಒಂದಲ್ಲ ಒಂದು ವಿಚಾರವಾಗಿ ಕಾಲೆಳೆಯುತ್ತಲೇ ಇದೆ. ಇದೀಗ ರಾಹುಲ್ ಗಾಂಧಿ ಅವರನ್ನು ರಾವಣನಂತೆ ಬಿಂಬಿಸಿ, ನವಯುಗದ ರಾವಣ ಎಂದು ಬಿಜೆಪಿ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ.
ಕೇಂದ್ರ ಬಿಜೆಪಿ ವಿವಾದಾತ್ಮಕ ಪೋಸ್ಟರ್ ಅನ್ನು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ಈ ಟ್ವೀಟ್ ಈಗ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ. ಪೋಸ್ಟರ್‌ನಲ್ಲಿ ಬಿಜೆಪಿ, ರಾವಣ, ಕಾಂಗ್ರೆಸ್ ಪಕ್ಷದ ನಿರ್ಮಾಣ, ಜಾರ್ಜ್ ಸೊರೊಸ್ ನಿರ್ದೇಶನ ಎಂದು ಬರೆದಿದೆ. ಅಲ್ಲದೇ ಚಿತ್ರದಲ್ಲಿ ರಾವಣನಂತೆಯೇ ರಾಹುಲ್ ಗಾಂಧಿಯವರಿಗೆ ಬಹು ತಲೆಗಳನ್ನು ಬಿಡಿಸಲಾಗಿದೆ. ಅಲ್ಲದೇ ರಾವಣನಂತೆ ರಕ್ಷಾಕವಚವನ್ನು ಧರಿಸಿರುವುದನ್ನು ತೋರಿಸಲಾಗಿದೆ. ಇದರ ಜೊತೆ ಹೊಸ ಯುಗದ ರಾವಣ ಬಂದಿದ್ದಾನೆ. ಅವನು ದುಷ್ಟ, ಧರ್ಮ ವಿರೋಧಿ, ರಾಮನ ವಿರೋಧಿ ಮತ್ತು ಅವನ ಗುರಿ ಭಾರತವನ್ನು ನಾಶಮಾಡುವುದು ಎಂದು ಬಿಜೆಪಿ ಬರೆದುಕೊಂಡಿದೆ.
ಇದನ್ನೂ ಓದಿ : ಪೂರ್ಣ ನಿದ್ರೆಗೆ ಜಾರಿದ ವಿಕ್ರಮ್, ಪ್ರಜ್ಞಾನ್ – ಚಂದ್ರಯಾನ – 3 ಕಾರ್ಯಾಚರಣೆ ಸಂಪೂರ್ಣ ಸ್ಥಗಿತ?
ಈ ವಿವಾದಾತ್ಮಕ ಪೋಸ್ಟರ್ ಅನ್ನು ಪೋಸ್ಟ್ ಮಾಡಿರುವುದಕ್ಕೆ ಕಾಂಗ್ರೆಸ್ ನಾಯಕರು ಕಿಡಿಕಾರಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿ ಬಿಜೆಪಿಯನ್ನು ಪ್ರಶ್ನಿಸಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸುವ ಉದ್ದೇಶದಿಂದ ಬಿಜೆಪಿ ಈ ರೀತಿ ಮಾಡಿದೆ ಎಂದು ಕಿಡಿಕಾರಿದ್ದಾರೆ.
ಇನ್ನು ಕಾಂಗ್ರೆಸ್ ನಾಯಕ ಕೆ.ಸಿ ವೇಣುಗೋಪಾಲ್ ಅವರು ಸಹ ಬಿಜೆಪಿಯ ಈ ನಡೆಯನ್ನು ಖಂಡಿಸಿದ್ದಾರೆ. ಇದು ನಾಚಿಕೆಗೇಡಿನ ವಿಚಾರ. ಇದನ್ನು ಖಂಡಿಸಲು ಯಾವುದೇ ಪದಗಳಿಲ್ಲ. ಅವರ ದುಷ್ಟ ಉದ್ದೇಶಗಳು ಸ್ಪಷ್ಟವಾಗಿವೆ. ಆ ಪೋಸ್ಟರ್‌ನ ಉದ್ದೇಶ ರಾಹುಲ್ ಅವರ ಅಜ್ಜಿ ಹಾಗೂ ತಂದೆಯಂತೆ ಅವರನ್ನು ಕೊಲ್ಲುವುದಾಗಿದೆ ಎಂದು ಬರೆದುಕೊಂಡಿದ್ದಾರೆ.
ಈ ಪೋಸ್ಟರ್ ಮೂಲಕ ಹಂಗೇರಿಯನ್-ಅಮೆರಿಕನ್ ಉದ್ಯಮಿ ಸೊರೊಸ್ ಅವರನ್ನು ಬಿಜೆಪಿ ಮತ್ತೆ ಎಳೆದು ತಂದಿದೆ. ಪ್ರಪಂಚದಾದ್ಯಂತದ ಅನೇಕ ಗುಂಪುಗಳಿಗೆ ದೇಣಿಗೆಗಳನ್ನು ನೀಡಿ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುತ್ತಾರೆ ಎಂಬ ಮಾತುಗಳು ಅವರ ವಿರುದ್ಧ ಕೇಳಿ ಬಂದಿವೆ.