ಮಗಳ ಮದುವೆಗಾಗಿ ದುಡಿದ ಹಣ ಬ್ಯಾಂಕ್ ಲಾಕರ್‌ನಲ್ಲಿಟ್ಟ ತಾಯಿ.. 18 ಲಕ್ಷ ರೂ. ಗೆದ್ದಲು ಪಾಲು!

ಮೊರಾದಾಬಾದ್: ದುಡಿದು ಸಂಪಾದನೆ ಮಾಡಿದ ಹಣವನ್ನು ಭವಿಷ್ಯಕ್ಕಾಗಿ ಕೂಡಿಡುತ್ತೇವೆ. ಮನೆಯಲ್ಲಿದ್ದರೆ ಖರ್ಚಾಗುತ್ತದೆ, ಕಳ್ಳರ ಕಾಟ ಅಂತಾ ಬ್ಯಾಂಕ್ ಲಾಕರ್‌ಗಳಲ್ಲಿ ಇಡುತ್ತೇವೆ. ಇಲ್ಲೊಬ್ಬಳು ಮಹಿಳೆ ತನ್ನ ಮಗಳ ಮದುವೆಗಾಗಿ ಹಣ ಮತ್ತು ಆಭರಣಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದಾಳೆ. ಕೆಲ ಸಮಯದ ನಂತರ ಮಹಿಳೆ ಬಂದು ನೋಡಿದಾಗ ಆಕೆಗೆ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಾಗಿದೆ.
ಉತ್ತರ ಪ್ರದೇಶದ ಮೊರಾದಾಬಾದ್ ಎಂಬಲ್ಲಿನ ನಿವಾಸಿ ಅಲ್ಕಾ ಪಾಠಕ್ ಎಂಬಾಕೆ ಮಗಳ ಮದುವೆ ಖರ್ಚಿಗೆ ಬೇಕಾಗುತ್ತದೆ ಎಂದು ತಾನು ದುಡಿದ ಹಣವನ್ನು ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದಾಳೆ. ಆದರೆ ಇದೀಗ ಬ್ಯಾಂಕ್ ಲಾಕರ್‌ನಲ್ಲಿಟ್ಟಿದ್ದ 18 ಲಕ್ಷ ರೂಪಾಯಿಗಳನ್ನು ಗೆದ್ದಲು ತಿಂದು ಹಾಕಿವೆ. ತಾನು ಕಷ್ಟ ಪಟ್ಟು ಸಂಪಾದನೆ ಮಾಡಿದ ಹಣ ಗೆದ್ದಲು ತಿಂದು ಮಣ್ಣಾಗಿರುವುದನ್ನು ನೋಡಿ ಮಹಿಳೆಗೆ ಆಕಾಶವೇ ತಲೆ ಮೇಲೆ ಕಳಚಿ ಬಿದ್ದಂತಾಗಿದೆ.
ಇದನ್ನೂ ಓದಿ: ಕೇರಳದ ಲಾಟರಿ ಗೆದ್ದ ಮೇಸ್ತ್ರಿ – ಉಪ್ಪಿನಂಗಡಿ ನಿವಾಸಿಗೆ ಒಲಿಯಿತು ಅದೃಷ್ಟ!
ಬ್ಯಾಂಕ್ ಆಫ್ ಬರೋಡಾದ ಆಶಿಯಾನಾ ಬ್ರಾಂಚ್‌ನಲ್ಲಿ ಈ ಘಟನೆ ನಡೆದಿದೆ.ಲಾಕರ್‌ನ ವಾರ್ಷಿಕ ನಿರ್ವಹಣೆ ಮತ್ತು ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಪರಿಶೀಲನೆಗಾಗಿ ಮಹಿಳೆಯನ್ನು ಬ್ಯಾಂಕ್ ಸಿಬ್ಬಂದಿ ಬ್ಯಾಂಕಿಗೆ ಕರೆಸಿದ್ದಾರೆ. ಈ ಸಂದರ್ಭದಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಬ್ಯಾಂಕಿಗೆ ಬಂದು ಲಾಕರ್ ತೆರೆದ ಮಹಿಳೆ ಗೆದ್ದಲು ತಿಂದ ನೋಟುಗಳನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ನಂತರ ಈ ಬಗ್ಗೆ ಆಕೆ ಬ್ಯಾಂಕ್ ಮ್ಯಾನೇಜರ್‌ಗೆ ಮಾಹಿತಿ ನೀಡಿದ್ದಾರೆ.
ಅಲ್ಕಾ ಪಾಠಕ್ ಚಿಕ್ಕಪುಟ್ಟ ವ್ಯಾಪಾರ ಮಾಡಿಕೊಂಡು ಮಕ್ಕಳಿಗೆ ಟ್ಯೂಶನ್ ಹೇಳುತ್ತ ಜೀವನ ಸಾಗಿಸುತ್ತಾರೆ. ಇವರು ತಮ್ಮ ಜೀವಮಾನವಿಡೀ ಕಷ್ಟಪಟ್ಟು ಉಳಿಸಿದ ಹಣ ಮತ್ತು ಆಭರಣಗಳನ್ನು ಲಾಕರ್ ನಲ್ಲಿ ಇಟ್ಟಿದ್ದರು. ಲಾಕರ್‌ನಲ್ಲಿ ಕರೆನ್ಸಿ ನೋಟುಗಳನ್ನು ಇರಿಸುವಂತಿಲ್ಲ ಎಂಬ ಬಗ್ಗೆ ತಿಳುವಳಿಕೆ ಇಲ್ಲದೆ ಆಭರಣಗಳೊಂದಿಗೆ ನೋಟುಗಳನ್ನು ಅಹ ಅದರಲ್ಲಿ ಇಟ್ಟಿದ್ದೇ ಈ ಎಲ್ಲ ಅವಾಂತರಕ್ಕೆ ಕಾರಣವಾಗಿದೆ.
ಬ್ಯಾಂಕ್ ಲಾಕಬ್‌ನಲ್ಲಿ ನಗದು ಮತ್ತು ಬೆಲೆಬಾಳುವ ವಸ್ತುಗಳನ್ನು ಇಡಬೇಕಾದರೆ ಪಾಲಿಸಬೇಕಾದ ನಿಯಮಗಳ ಬಗ್ಗೆ ತನಗೆ ಗೊತ್ತಿರಲಿಲ್ಲ ಎಂಬುದನ್ನು ಮಹಿಳೆ ಒಪ್ಪಿಕೊಂಡಿದ್ದಾರೆ. ಇದರ ನಂತರ, ಶಾಖಾ ವ್ಯವಸ್ಥಾಪಕರು ಘಟನೆಯನ್ನು ಮೇಲಾಧಿಕಾರಿಗಳಿಗೆ ವರದಿ ಮಾಡಿದ್ದು, ಹಾನಿಯ ಪ್ರಮಾಣ ನಿರ್ಣಯಿಸಲು ತನಿಖೆ ಪ್ರಾರಂಭಿಸಿದ್ದಾರೆ.