ಬಸ್‌ನಲ್ಲಿ ಸೀಟು ಸಿಕ್ಕಿಲ್ಲ ಅಂತಾ ಮಹಿಳೆ ಕೈಗೆ ಮಗು ಕೊಟ್ಟ ತಾಯಿ – 7 ತಿಂಗಳ ಕಂದಮ್ಮನೊಂದಿಗೆ ಅಪರಿಚಿತೆ ಪರಾರಿ
ಬಸ್‌ಗಳಲ್ಲಿ ರಶ್ ಇದೆ ಅಂತಾ ಮಕ್ಕಳನ್ನು ಸಿಕ್ಕ ಸಿಕ್ಕವರ ಬಳಿ ಕೂರಿಸುವ ಮುನ್ನ ಎಚ್ಚರ.. ಸ್ವಲ್ಪ ಯಾಮಾರಿದ್ರೂ ನಿಮ್ಮ ಮಕ್ಕಳು ಕಳ್ಳರ ಪಾಲಾಗಬಹುದು. ಇಲ್ಲೊಂದು ಕಡೆ ಮಹಿಳೆಯೊಬ್ಬಳು ಬಸ್‌ನಲ್ಲಿ ಸೀಟು ಸಿಕ್ಕಿಲ್ಲ ಅಂತಾ ಮಗುವನ್ನು ಅಪರಿಚಿತೆ ಬಳಿ ನೀಡಿದ್ದಾರೆ. ಮಗು ಕೈಗೆ ಸಿಗುತ್ತಿದ್ದಂತೆ ಐನಾತಿ ಕಳ್ಳಿ ಮಗುವಿನೊಂದಿಗೆ ಎಸ್ಕೇಪ್ ಆಗಿದ್ದಾಳೆ.
ಇದನ್ನೂ ಓದಿ: ಮಾಡಿದ್ದುಣ್ಣೋ ಮಾಲ್ಡೀವ್ಸ್ – ಭಾರತದ ಮುಂದೆ ಮಂಡಿಯೂರದೇ ವಿಧಿಯೇ ಇಲ್ಲ..!
ಹೌದು, ಈ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿಯ KSRTC ಬಸ್ ನಿಲ್ದಾಣದಲ್ಲಿ ನಡೆದಿದೆ. ನರಸೀಪುರ ತಾಲೂಕಿನ ವಡ್ಡರಕೊಪ್ಪಲು ನಿವಾಸಿ ಸವಿತಾ ಮಗು ಕಳೆದುಕೊಂಡ ತಾಯಿ. ಚನ್ನಪಟ್ಟಣದ ಬಸ್ ನಿಲ್ದಾಣದಲ್ಲಿ ಸವಿತಾ ಮಗುವಿನ ಸಮೇತ ಬಸ್ ಹತ್ತಿದ್ದಾರೆ. ಬಸ್ ನಲ್ಲಿ ಜನರು ತುಂಬಿದ್ದ ಕಾರಣ ಸೀಟ್ ನಲ್ಲಿ ಕೂತಿದ್ದ ಅಪರಿಚಿತ ಮಹಿಳೆಯೊಬ್ಬರ ಕೈಗೆ ಸವಿತಾ ಮಗು ನೀಡಿದ್ದಾರೆ. ಆದರೆ ಮಳವಳ್ಳಿ ಬಸ್ ನಿಲ್ದಾಣದಲ್ಲಿ ತಾನೂ ಇಳಿಯುವುದಾಗಿ ಹೇಳಿ ಕ್ಷಣಾರ್ಧದಲ್ಲಿ ಮಗು ಜೊತೆ ಮಹಿಳೆ ಪರಾರಿಯಾಗಿದ್ದಾಳೆ.
ಸವಿತಾ ಲಗೇಜ್ ಹಿಡಿದುಕೊಂಡು ಬಸ್ ನಿಂದ ಇಳಿಯುವಷ್ಟರಲ್ಲಿ ಮಗು ಸಮೇತ ಅಪರಿಚಿತ ಮಹಿಳೆ ಎಸ್ಕೇಪ್ ಆಗಿದ್ದಾಳೆ. ಸದ್ಯ 7 ತಿಂಗಳ ಗಂಡು ಮಗು ಕಳೆದುಕೊಂಡು ತಾಯಿ ಕಂಗಾಲಾಗಿದ್ದು, ಮಳವಳ್ಳಿ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.