ಕರಾವಳಿಯಲ್ಲಿ ಕಾಡುತ್ತಿದೆ ಕೆಂಗಣ್ಣು ಸೋಂಕಿನ ಕಿರಿಕಿರಿ
ಮಕ್ಕಳಲ್ಲಿ ಹೆಚ್ಚು ಬಂದ ಕೆಂಗಣ್ಣು ರೋಗ ಪ್ರಕರಣ
ಮಂಗಳೂರು: ಕರಾವಳಿ ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಕೆಂಗಣ್ಣು ರೋಗದ ಸಮಸ್ಯೆ ತೀವ್ರವಾಗಿ ಕಾಡುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯ ಬಜಪೆ, ಕಾವೂರು, ಕೋಡಿಕಲ್ ಮತ್ತು ಬೆಳ್ತಂಗಡಿ ಭಾಗಗಳಲ್ಲಿ ಕೆಂಗಣ್ಣು ರೋಗ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದಿದೆ. ಇದಲ್ಲದೇ, ಅಡ್ಯಾರ್, ಪುತ್ತೂರಿನಲ್ಲೂ ಕೆಂಗಣ್ಣು ರೋಗದ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದೆ. ದಿನಕ್ಕೆ 60ರಿಂದ 70 ಮಕ್ಕಳಲ್ಲಿ ಕೆಂಗಣ್ಣು ರೋಗ ಕಂಡು ಬರುತ್ತಿದೆ. ಮಕ್ಕಳಲ್ಲಿ ರೋಗದ ಲಕ್ಷಣ ಕಂಡುಬಂದರೆ ಶಾಲೆಗಳಿಗೆ ರಜೆ ಕೊಡುವಂತೆ ಸೂಚನೆ ನೀಡಲಾಗಿದೆ. ಮುನ್ನೆಚ್ಚರಿಕೆ ವಹಿಸುವಂತೆ ಜಿಲ್ಲೆಯ ಎಲ್ಲಾ ಪ್ರಾಥಮಿಕ, ಸಮುದಾಯ ಕೇಂದ್ರಗಳಿಗೆ ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಒಡೆಯುತ್ತೇನೆ ಎನ್ನಲು ಪ್ರತಾಪ ಸಿಂಹ ಯಾರು?- ಸಿದ್ದು ವಾಗ್ದಾಳಿ
ಈ ಕೆಂಗಣ್ಣು ರೋಗವು ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಈ ಬಾರಿ ಮಳೆಗಾಲ ಮುಗಿದು ಚಳಿಗಾಲದ ಆರಂಭದಲ್ಲೇ ಕಾಣಿಸಿಕೊಂಡಿದೆ. ಈ ರೋಗದಲ್ಲಿ ಕಣ್ಣುಗಳ ಬಿಳಿ ಭಾಗದಲ್ಲಿ ಸೋಂಕು ಸಂಭವಿಸುತ್ತದೆ ಮತ್ತು ಅದರ ಬಣ್ಣವು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಈ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ಸುಲಭವಾಗಿ ಹರಡುತ್ತದೆ. ಆದರೆ, ಕೆಲವೊಮ್ಮೆ ಧೂಳು, ಹೊಗೆ ಮತ್ತು ಮಾಲಿನ್ಯದಿಂದಲೂ ಈ ಸಮಸ್ಯೆ ಉಂಟಾಗುತ್ತದೆ.
ಕಣ್ಣಿನ ಸರ್ಜರಿ ಆಗಿರುವವರು ಹಾಗೂ ಮಧುಮೇಹಿಗಳ ವಿಚಾರದಲ್ಲಿ ಕೊಂಚ ಜಾಗ್ರತೆ ಅಗತ್ಯ. ಉಳಿದಂತೆ ಇದಕ್ಕೆ ಬೇಕಿರುವ ಡ್ರಾಪ್ಸ್ ಹಾಕಿದರೆ ಐದು ದಿನಗಳಲ್ಲಿ ಸರಿಹೋಗುತ್ತದೆ ಅಂತಾರೆ ನೇತ್ರತಜ್ಞರು. ಕಣ್ಣಿನ ಸ್ವಚ್ಛತೆ ಕಡೆಗೆ ಹೆಚ್ಚಿನ ಗಮನ ನೀಡಬೇಕು. ಸೋಂಕಿತರು ಕಣ್ಣನ್ನು ಮುಟ್ಟುವುದು ಅಥವಾ ಉಜ್ಜುವುದನ್ನು ಮಾಡಬಾರದು. ತಣ್ಣೀರಿನಿಂದ ಕಣ್ಣುಗಳನ್ನು ತೊಳೆಯಬೇಕು. ಬೇರೆಯವರ ಟವೆಲ್, ಕರವಸ್ತ್ರ, ದಿಂಬು, ಹಾಸಿಗೆ ಇತ್ಯಾದಿಗಳನ್ನು ಬಳಸಬಾರದು. ದ್ವಿಚಕ್ರ ವಾಹನ ಸವಾರಿ ಮಾಡುವಾಗ ಯಾವಾಗಲೂ ಸನ್ ಗ್ಲಾಸ್ ಧರಿಸಿದ್ರೆ ಸೋಂಕಿನ ಪ್ರಮಾಣ ಕಡಿಮೆಯಾಗಲಿದೆ.