ಶಕ್ತಿ ಯೋಜನೆಗೆ ಮೀಸಲಿಟ್ಟ ಹಣ ಖಾಲಿ – ಸಂಕಷ್ಟಕ್ಕೆ ಸಿಲುಕಿತಾ ಸಾರಿಗೆ ಇಲಾಖೆ?
ಬೆಂಗಳೂರು: ವಿಧಾನಸಭೆ ಚುನಾವಣೆ ಪೂರ್ವವೇ ತನ್ನ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಸರ್ಕಾರ 5 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಈಗ ನಾಲ್ಕು ಯೋಜನೆಗಳನ್ನು ಜಾರಿ ತಂದಿದೆ. ಕಾಂಗ್ರೆಸ್‌ನ ಶಕ್ತಿ ಯೋಜನೆ ಭರ್ಜರಿಯಾಗಿ ಯಶಸ್ವಿಯಾಗಿದೆ. ಮಹಿಳಾಮಣಿಗಳು ಈ ಯೋಜನೆಯನ್ನು ಸದುಪಯೋಗಪಡಿಸಿಕೊಂಡು ರಾಜ್ಯ ಸುತ್ತುತ್ತಿದ್ದಾರೆ. ಇದೀಗ ಶಕ್ತಿ ಯೋಜನೆ ಸಾರಿಗೆ ಇಲಾಖೆಗೆ ಕೈಸುಡುತ್ತಿದ್ದು ಮೀಸಲಿಟ್ಟ ದುಡ್ಡು ಸಿಕ್ಕಾಪಟ್ಟೆ ಹೈಸ್ಪೀಡ್‌ನಲ್ಲಿ ಖರ್ಚಾಗುತ್ತಿದೆ.
ಕಾಂಗ್ರೆಸ್‌ನ ಗ್ಯಾರಂಟಿಗಳಲ್ಲಿ ಒಂದಾದ ಶಕ್ತಿ ಯೋಜನೆ ಜೂನ್ 11ರಿಂದ ರಾಜ್ಯದಲ್ಲಿ ಜಾರಿಯಾಗಿದೆ. ಸುಮಾರು 90 ಕೋಟಿಗೂ ಹೆಚ್ಚು ನಾರಿಯರು ಉಚಿತವಾಗಿ ರಾಜ್ಯದಲ್ಲಿ ಪ್ರಯಾಣಿಸಿದ್ದಾರೆ. ಸಿಎಂ ಸಿದ್ದರಾಮಯ್ಯನವರು ಶಕ್ತಿ ಯೋಜನೆಗೆ ಎಂದು ತಮ್ಮ ಬಜೆಟ್‌ನಲ್ಲಿ 9 ತಿಂಗಳಿಗೆ 2,800 ಕೋಟಿ ರೂ.ಗಳನ್ನು ಮೀಸಲಿಟ್ಟಿದ್ದರು. ಆದರೆ ಈ ಯೋಜನೆ ಜಾರಿಯಾಗಿ ಐದೇ ತಿಂಗಳಿಗೆ ಈ ಹಣ ಖಾಲಿಯಾಗುತ್ತಾ ಬಂದಿದೆ.
ಇದನ್ನೂ ಓದಿ: ವರ್ಷಕ್ಕೂ ಮುನ್ನವೇ ಶಕ್ತಿ ಯೋಜನೆಯ ಅನುದಾನ ಶೇ.71 ರಷ್ಟು ಖಾಲಿ! –ಮುಂದೇನು ಮಾಡುತ್ತೆ ಸರ್ಕಾರ?
1 ತಿಂಗಳಿಗೆ ಸರ್ಕಾರದ 311 ಕೋಟಿ ರೂ. ಬೇಕಾಗಬಹುದು ಎಂದು ರಾಜ್ಯ ಸರ್ಕಾರ ಅಂದಾಜಿಸಿತ್ತು. ಆದರೆ 5 ತಿಂಗಳಿಗೆ (ನವೆಂಬರ್ 12ರವರೆಗೆ) 2,246 ಕೋಟಿ ರೂ. ಖರ್ಚಾಗಿದೆ. ಉಳಿದ 4 ತಿಂಗಳಿಗೆ ಸರ್ಕಾರದ ಈ ಹಿಂದೆ ನಿಗದಿ ಮಾಡಿದ ಲೆಕ್ಕಾಚಾರದಂತೆ 1,244 ಕೋಟಿ ರೂ. ಹಣ ಬೇಕಾಗುತ್ತದೆ. ಈ ಲೆಕ್ಕ ಪರಿಗಣಿಸಿದರೆ ಒಟ್ಟು 690 ಕೋಟಿ ರೂ. ಹಣ ಕೊರತೆಯಾಗುವ ಸಾಧ್ಯತೆಯಿದೆ. ಪ್ರತಿನಿತ್ಯ 40 ಲಕ್ಷದಿಂದ 60 ಲಕ್ಷ ಮಹಿಳೆಯರು ಉಚಿತವಾಗಿ ಸಂಚರಿಸುತ್ತಿದ್ದಾರೆ. ಈ ಹಣಕಾಸು ವರ್ಷ ಮುಗಿಯಲು ಇನ್ನೂ ಐದು ತಿಂಗಳು ಇರುವುದರಿಂದ ಶಕ್ತಿ ಯೋಜನೆಗೆ ಎಷ್ಟು ಖರ್ಚಾಗಬಹುದು ಎಂಬ ಕುತೂಹಲ ಈಗ ಹೆಚ್ಚಾಗಿದೆ.
ಶಕ್ತಿ ಯೋಜನೆ ಜಾರಿಯಾದ ಕೆಲ ತಿಂಗಳುಗಳ ನಂತರ ಪ್ರಯಾಣಿಕರ ಸಂಖ್ಯೆಯಲ್ಲಿ ಕಡಿಮೆಯಾಗಬಹುದೆಂಬ ನಿರೀಕ್ಷೆಯಿತ್ತು. ಆದರೆ ಅದು ಹುಸಿಯಾಗಿದ್ದು, ದಿನದಿಂದ ದಿನಕ್ಕೆ ಶಕ್ತಿ ಯೋಜನೆಗೆ ಭರ್ಜರಿ ಯಶಸ್ಸು ಕಂಡುಬರುತ್ತಿದೆ. ಹೀಗಾಗಿ ಸರ್ಕಾರದ ಲೆಕ್ಕಾಚಾರ ಮೀರಿ ಹಣ ಖರ್ಚಾಗುತ್ತಿದೆ. ಹೀಗಾಗಿ ಇನ್ನೂ 1 ಸಾವಿರ ಕೋಟಿ ರೂ. ಬೇಕಾಗಬಹುದು ಎಂದು ಹೇಳಲಾಗುತ್ತಿದೆ.