ಇನ್ನೂ ಬಗೆಹರಿಯದ ಬಿಕ್ಕಟ್ಟು – ಸಚಿವ ಸಂಪುಟ ರಚನೆಗೆ ದಿಲ್ಲಿಯಲ್ಲಿ ಕಸರತ್ತು

ಇನ್ನೂ ಬಗೆಹರಿಯದ ಬಿಕ್ಕಟ್ಟು – ಸಚಿವ ಸಂಪುಟ ರಚನೆಗೆ ದಿಲ್ಲಿಯಲ್ಲಿ ಕಸರತ್ತು

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ನಲ್ಲಿ ಸಚಿವ ಸಂಪುಟ ವಿಸ್ತರಣೆಗೆ ಸರ್ಕಸ್‌ ನಡೆಯುತ್ತಿದೆ. ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್‌ನ ಹೈಕಮಾಂಡ್‌ ಜೊತೆಗೆ ಗುರುವಾರ ಬೆಳಿಗ್ಗೆಯಿಂದ ರಾತ್ರಿಯವರೆಗೆ ಸುದೀರ್ಘವಾಗಿ ಸಮಾಲೋಚನೆ ನಡೆಸಿದರೂ ಕಗ್ಗಂಟು ಬಿಡಿಸಲಾಗಲಿಲ್ಲ.ಸಚಿವರ ಪಟ್ಟಿಗೆ ಅಂತಿಮ ರೂಪ ನೀಡುವ ಸಂಬಂಧ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಸಭೆ ನಿಗದಿಯಾಗಿದೆ.

ಇದನ್ನೂ ಓದಿ: ಸಚಿವ ಸಂಪುಟ ವಿಸ್ತರಣೆಗೆ ದಿಲ್ಲಿಯಲ್ಲಿ ಹೈವೋಲ್ಟೇಜ್‌ ಮೀಟಿಂಗ್‌ – ಯಾರ್ಯಾರಿಗೆ ಸಿಗಲಿದೆ ಮಂತ್ರಿಗಿರಿ?

ಮಲ್ಲಿಕಾರ್ಜುನ ಖರ್ಗೆ ಜೊತೆ ಮೀಟಿಂಗ್‌ ಬಳಿಕ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರನ್ನು ಭೇಟಿಯಾಗುವ ಸಾಧ್ಯತೆ ಇದೆ. ಸಚಿವರ ಪಟ್ಟಿಗೆ ವರಿಷ್ಠರು ಒಪ್ಪಿಗೆ ನೀಡಿದ್ದೇ ಆದರೆ ಶನಿವಾರ ಸಂಪುಟ ವಿಸ್ತರಣೆಯಾಗಲಿದೆ. ಶನಿವಾರ ಬೆಳಿಗ್ಗೆ 11.30ಕ್ಕೆ ರಾಜಭವನದಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆಸಲು ಕಾಂಗ್ರೆಸ್‌ ಉದ್ದೇಶಿಸಿದೆ.

ಕಾಂಗ್ರೆಸ್‌ ಸಚಿವ ಸಂಪುಟದಲ್ಲಿ ಒಟ್ಟು 34 ಸಚಿವರ ಸೇರ್ಪಡೆಗೆ ಅವಕಾಶ ಇದೆ. ಈಗ 10 ಸ್ಥಾನಗಳು ಭರ್ತಿಯಾಗಿವೆ. 20 ಶಾಸಕರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲು ಗುರುವಾರ ನಡೆದ ಸಭೆಯಲ್ಲಿ ಗಂಭೀರ ಚರ್ಚೆಗಳು ಆಗಿವೆ. 24 ಸ್ಥಾನಗಳನ್ನು ಒಂದೇ ಕಂತಿನಲ್ಲಿ ಭರ್ತಿ ಮಾಡಲು ಕೇಂದ್ರ ನಾಯಕತ್ವವು ಕಸರತ್ತು ನಡೆಸಿದೆ. ಪಟ್ಟಿ ಬಹುತೇಕ ಅಂತಿಮವಾಗಿದ್ದು, ಶನಿವಾರವೇ ಸಂಪುಟ ವಿಸ್ತರಣೆ ಆಗಲಿದೆ ಎಂದು ಸಿದ್ದರಾಮಯ್ಯ ಅವರ ಆಪ್ತ ಮೂಲಗಳು ತಿಳಿಸಿವೆ. ಪಟ್ಟಿ ಶೇ 80ರಷ್ಟು ಅಂತಿಮವಾಗಿದೆ ಎಂದು ಶಿವಕುಮಾರ್ ಆಪ್ತ ಮೂಲಗಳು ಹೇಳಿವೆ.

ಕಾಂಗ್ರೆಸ್ ವಾ‌ ರೂಂನಲ್ಲಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ.ವೇಣುಗೋಪಾಲ್, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೆವಾಲಾ ಅವರೊಂದಿಗೆ ಉಭಯ ನಾಯಕರು ಗುರುವಾರ ಸುಮಾರು ಏಳು ಗಂಟೆಗಳ ಕಾಲ ಚರ್ಚಿಸಿದರು. ಆದರೆ, ಸಭೆ ಅಪೂರ್ಣಗೊಂಡಿತು. ಶಿವಕುಮಾರ್ ಅವರು ಕೆಲವು ಕೆಲಸದ ನಿಮಿತ್ತ ಬೆಂಗಳೂರಿಗೆ ತೆರಳಿದ್ದರು.  ಶುಕ್ರವಾರ ಮತ್ತೆ ಡಿಕೆಶಿ ದೆಹಲಿಗೆ ತೆರಳಲಿದ್ದು, ಹೈಕಮಾಂಡ್‌ನ ನಾಯಕರನ್ನು ಭೇಟಿ ಮಾಡಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಬೆಂಗಳೂರಿಗೆ ಮರಳಲಿದ್ದಾರೆ.

ಸಚಿವ ಸ್ಥಾನದ ಆಕಾಂಕ್ಷಿಗಳಾದ ಸುಮಾರು 40 ಶಾಸಕರು ದೆಹಲಿಗೆ ದೌಡಾಯಿಸಿದ್ದು, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕಾಂಗ್ರೆಸ್‌ ವರಿಷ್ಠರ ಬಳಿ ಲಾಬಿ ನಡೆಸುತ್ತಿದ್ದಾರೆ. ಹಲವು ಶಾಸಕರು ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಒತ್ತಡ ಹೇರುವ ಪ್ರಯತ್ನ ನಡೆಸಿದ್ದಾರೆ.

suddiyaana