ಸರ್ಕಸ್ನಲ್ಲಿ ಸಿಕ್ಕವಳಿಗೆ ಅರಮನೆಯಲ್ಲಿ ವೈಭೋಗ – ಎಲ್ಲರಿಗೂ ಅಚ್ಚು ಮೆಚ್ಚು ಬಳ್ಳೆ ಲಕ್ಷ್ಮಿ..!

ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಪ್ರಮುಖ ಆಕರ್ಷಣೆ ಅಂದರೆ ಜಂಬೂ ಸವಾರಿ. ಈಗಾಗಲೇ ಗಜಪಡೆ ಅರಮನೆ ನಗರಿಯಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಈ ಗಜಪಡೆಯಲ್ಲಿ ಇರುವ ಹೆಣ್ಣಾನೆ ಬಳ್ಳೆ ಲಕ್ಷ್ಮಿ ಅನೇಕರ ಅಚ್ಚು ಮೆಚ್ಚಿನ ಆನೆ. 54 ವರ್ಷದ ಬಳ್ಳೆ ಲಕ್ಷ್ಮಿ ಕಳೆದ ಎರಡು ವರ್ಷಗಳಿಂದ ಜಂಬೂಸವಾರಿಯಲ್ಲಿ ಮಿಂಚುತ್ತಿದ್ದಾಳೆ. ಈ ಬಾರಿ ಕೂಡಾ ಬಳ್ಳೆ ಲಕ್ಷ್ಮಿ ಜಂಬೂಸವಾರಿಯ ಪ್ರಮುಖ ಆಕರ್ಷಣೆಯಾಗಿದ್ದಾಳೆ.
ಇದನ್ನೂ ಓದಿ: ಅಭಿಮನ್ಯು ಶಾಂತ.. ಭೀಮ ತಿಂಡಿಪೋತ – ಸರ್ಕಸ್ ಸಂಕಟ ತಪ್ಪಿಸಿ ಈಗ ರಾಜಾತಿಥ್ಯ
ಕಳೆದ ಎರಡು ವರ್ಷಗಳಿಂದ ದಸರಾಗೆ ಆಗಮಿಸುತ್ತಿರುವ 54 ವರ್ಷದ ಬಳ್ಳೆ ಲಕ್ಷ್ಮಿ ಈ ಬಾರಿ ಕೂಡಾ ದಸರಾ ಮಹೋತ್ಸವಕ್ಕೆ ಆಯ್ಕೆಯಾಗಿದ್ದಳು. ಈಗಾಗಲೇ ಅರಮನೆಯಲ್ಲಿ ಲಕ್ಷ್ಮೀಯ ವೈಭೋಗ ಶುರುವಾಗಿದೆ. ತಾಲೀಮಿನಲ್ಲಿ ಅಭಿಮನ್ಯು ಪಕ್ಕದಲ್ಲಿ ಹೆಜ್ಜೆಯಾಕುತ್ತಾ ಸಾಗುತ್ತಿದ್ದಾಳೆ. ಮೊದಲಿನಿಂದಲೂ ಶಾಂತ ಸ್ವಭಾವದ ಆನೆಯಾದ ಬಳ್ಳೆ ಲಕ್ಷ್ಮಿ ಕಂಡರೆ ಜನರಿಗಂತೂ ತುಂಬಾನೇ ಪ್ರೀತಿ. ಯಾರ ಜೊತೆಗೂ ಯಾವುದೇ ಕಿರಿಕಿರಿ ಮಾಡಿಕೊಳ್ಳದೇ ಎಲ್ಲರ ಜೊತೆಯು ಬೆರೆಯುತ್ತಾಳೆ. ಜೊತೆಗೆ ತನ್ನ ತಂಡದ ಎಲ್ಲಾ ಆನೆಗಳನ್ನು ಶಿಸ್ತಿನಲ್ಲಿ ಇರುವಂತೆ ನೋಡಿಕೊಳ್ಳುತ್ತಿದ್ದಾಳೆ.
ಬಳ್ಳೆ ಲಕ್ಷ್ಮಿ ಪಟಾಕಿ ಹಾಗೂ ವಾಹನದ ಶಬ್ಧಕ್ಕೆ ಎಂದು ಹೆದರಿಕೊಳ್ಳುವುದಿಲ್ಲ. ನಗರದ ರಸ್ತೆಯಲ್ಲಿ ಸಂಚಾರ ಮಾಡುವಾಗಲೇ ಶಾಂತ ಸ್ಥಿತಿಯಲ್ಲೇ ಹೆಜ್ಜೆ ಹಾಕುತ್ತಾಳೆ. ತನ್ನ ಶಾಂತಿ ಹಾಗೂ ಶಕ್ತಿಯುತ ನಡೆಯಿಂದ ದಸರಾಗೆ ಮೆರುಗು ನೀಡುತ್ತಿದ್ದಾಳೆ. ಮಾವುತ ಸಣ್ಣಪ್ಪ ಹಾಗೂ ಕಾವಾಡಿ ಮಂಜು ಅವರ ಆರೈಕೆಯಲ್ಲಿ ಲಕ್ಷ್ಮೀ ಶಿಸ್ತಿನ ಆನೆಯಾಗಿ ಬೆಳೆಯುತ್ತಿದ್ದಾಳೆ.
ಹೆಚ್ಚಾಗಿ ಆನೆಗಳು ಅರಣ್ಯ ಇಲಾಖೆ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕಿರುತ್ತವೆ. ಇಲ್ಲವೆಂದರೆ ಆನೆ ಶಿಬಿರದಲ್ಲಿ ಹುಟ್ಟಿರುತ್ತವೆ. ಆದರೆ, ಬಳ್ಳೆ ಲಕ್ಷ್ಮಿ ಈ ಎರಡು ಕಡೆಯಲ್ಲಿಯು ಸಿಕ್ಕಿದಲ್ಲ. ಈಕೆ ಸರ್ಕಸ್ ಕಂಪನಿಯಲ್ಲಿದ್ದಳು. ಆದರೆ 2015 ರಲ್ಲಿ ಅರಣ್ಯ ಇಲಾಖೆಯವರು ಬಳ್ಳೆಲಕ್ಷ್ಮಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಅದನ್ನು ಆನೆ ಶಿಬಿರದಲ್ಲಿ ಪಳಗಿಸಲು ಶುರುಮಾಡಿದರು. ಸರ್ಕಸ್ನಲ್ಲಿ ಇದ್ದ ಆನೆಗೆ ನೈಸರ್ಗಿಕ ಪ್ರದೇಶದಲ್ಲಿ ಹೊಂದಿಕೊಂಡು ಜೀವನ ನಡೆಸುವಂತೆ ಅರಣ್ಯ ಇಲಾಖೆ ತರಬೇತಿ ನೀಡಿತು. ನಂತರ ಕಳೆದ ಎರಡು ವರ್ಷಗಳಿಂದ ದಸರಾದಲ್ಲಿ ಭಾಗವಹಿಸಿ ಅಂಬಾರಿ ಹೊತ್ತ ಅಭಿಮನ್ಯುವಿನ ಅಕ್ಕ ಪಕ್ಕದಲ್ಲಿ ನಡೆಯುವ ಮೂಲಕ ಅರಣ್ಯ ಇಲಾಖೆಯವರ ನಂಬಿಕೆಗೆ ಪಾತ್ರವಾಗಿದ್ದಾಳೆ ಲಕ್ಷ್ಮೀ. ಈ ಸಲ ಜಂಬೂಸವಾರಿಗೆ ಹೋದವರು ಮೆಚ್ಚಿನ ಆನೆ ಭೀಮನಿಗೆ ಹಾಯ್ ಮಾಡುವ ಜೊತೆಗೆ ಲಕ್ಷ್ಮಿಗೂ ಹಾಯ್ ಮಾಡಿ ಬನ್ನಿ.

ನೋಡಿರಿ

