ನಡೆದಿದ್ದೇ ದಾರಿ ಎನ್ನುವ ಪುಂಡಾನೆ ಪಳಗಿಸಲು ಬೇಕು ಗಟ್ಟಿ ಗುಂಡಿಗೆ – ಗಜರಾಜ ಮತ್ತು ಮಾವುತನ ಬಾಂಧವ್ಯದ ಬೆಸುಗೆ 

ನಡೆದಿದ್ದೇ ದಾರಿ ಎನ್ನುವ ಪುಂಡಾನೆ ಪಳಗಿಸಲು ಬೇಕು ಗಟ್ಟಿ ಗುಂಡಿಗೆ – ಗಜರಾಜ ಮತ್ತು ಮಾವುತನ ಬಾಂಧವ್ಯದ ಬೆಸುಗೆ 

ಕಂಬದಂತಹ ಕಾಲುಗಳು. ಚಾಮರದಂತಹ ಕಿವಿ. ಸ್ಫಟಿಕದಂತಹ ದಂತ. ದೈತ್ಯ ದೇಹದಲ್ಲೂ ಗಾಂಭೀರ್ಯ ಹುಟ್ಟಿಸುವಂತಹ ನಡಿಗೆ ಆನೆಗಳದ್ದು. ಇಂತಹ ಆನೆಯನ್ನು ರಾಜ ಜೀವಿ ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಪ್ರಾಚೀನ ಕಾಲದಲ್ಲಿ ಅನೇಕ ದೇವರುಗಳು ಮತ್ತು ರಾಜರು ಆನೆಗಳನ್ನು ಸವಾರಿ ಮಾಡಲು ಬಳಸುತ್ತಿದ್ದರು. ಸಾಮಾನ್ಯವಾಗಿ, ಹೆಣ್ಣು ಆನೆಗಳು ಗುಂಪುಗಳಲ್ಲಿ ವಾಸಿಸುತ್ತವೆ ಆದರೆ ಗಂಡು ಆನೆಗಳು ಒಂಟಿ ಜೀವನಕ್ಕೆ ಆದ್ಯತೆ ನೀಡುತ್ತವೆ. ಆದರೆ ಹೀಗೆ ಒಂಟಿಯಾಗಿ ಸಾಗುವ ಆನೆಗಳ ಪುಂಡಾಟ ಜನರ ಜೀವಕ್ಕೇ ಕುತ್ತು ತರುತ್ತದೆ. ಇಂತಹ ಆನೆಗಳನ್ನ ಪಳಗಿಸುವುದು ಎಂದರೆ ಸಾವಿನ ಜೊತೆ ಸರಸ ಆಡಿದಂತೆಯೇ ಸರಿ.

ಭೂಮಿ ಮೇಲೆ ವಾಸಿಸುವ ಅತಿದೊಡ್ಡ ಪ್ರಾಣಿ ಎಂದರೆ ಅದು ಆನೆಗಳು. ಇಂತಹ ಬೃಹತ್‌ ಕಾಯದ ಆನೆಗಳನ್ನು ಪಳಗಿಸಿ ಅವುಗಳ ಮೇಲೆ ಸವಾರಿ ಮಾಡುವುದೆಂದರೆ ಅಷ್ಟು ಸುಲಭದ ಮಾತಲ್ಲ. ಹೀಗಿದ್ದರೂ ಲೀಲಾಜಾಲವಾಗಿ ಆನೆಗಳ ಬೆನ್ನು ಸವರುತ್ತ, ಸ್ನಾನ ಮಾಡಿಸುತ್ತ ಅವುಗಳೊಂದಿಗೆ ಸ್ನೇಹದಿಂದ ವರ್ತಿಸುವ ಮಾವುತನ ಬಗ್ಗೆ ಏನು ಹೇಳಬೇಕು ಗೊತ್ತಾಗುವುದೇ ಇಲ್ಲ. ಆನೆ ಮತ್ತು ಮಾವುತರ ನಡುವೆ ಅಷ್ಟೊಂದು ಭಾವ ಬೆಸುಗೆ ಹೇಗೆ ಸಾಧ್ಯ ಎನ್ನುವ ನಾವು ಅದರ ಹಿಂದಿನ ಕಸರತ್ತನ್ನ ತಿಳಿಯಲೇಬೇಕು. ಇಡೀ ಕಾಡೇ ತನ್ನದೆಂಬಂತೆ ಯಾರ ಭೀತಿಯಿಲ್ಲದೇ ಸುತ್ತಾಡುತ್ತಿದ್ದ ಪುಂಡಾನೆಯನ್ನು ಕೆಣಕಿ, ತಿವಿದು, ಛೇಡಿಸಿ ಪಳಗಿಸಲೆಂದು ದೊಡ್ಡಿಯಲ್ಲಿ ಕೂಡಿಹಾಕಲಾಗುತ್ತದೆ. ಅದರೊಂದಿಗೆ ಮಾವುತ ಸ್ನೇಹ ಬೆಳೆಸಬೇಕು. ಬುಸುಗುಡುವ ಹಾವಿನೊಂದಿಗೆ ಸರಸವಾಡುವುದಕ್ಕಿಂತ ಒಂದು ಕೈ ಮೇಲಿನ ಅಪಾಯದ ಕೆಲಸವಿದು. ಆದರೂ ಅದನ್ನು ಪುಸಲಾಯಿಸಿ ವಿಶ್ವಾಸಕ್ಕೆ ಪಡೆಯಲು ಆತ ಎಲ್ಲರೀತಿಯ ಸರ್ಕಸ್‌ ಮಾಡುತ್ತಾನೆ. ನಿತ್ಯ ಕಾಡಿನಲ್ಲಿ 50-60 ಕಿ.ಮೀ. ನಡೆದಾಡುವ ಆನೆಗೆ ಏಕಾಏಕಿ ಬಂಧಿಯಾಗಿಸಿದ್ದಕ್ಕೆ ಅದೇ ಗುಂಗಿನಲ್ಲಿ ಊಟವೂ ಮಾಡುವುದಿಲ್ಲ.

ಇದನ್ನೂ ಓದಿ : ಕೇರಳದಲ್ಲಿ ಆಫ್ರಿಕನ್‌ ಹಂದಿ ಜ್ವರ ಪತ್ತೆ –  ಹಂದಿಗಳನ್ನು ಕೊಲ್ಲಲು ಜಿಲ್ಲಾಡಳಿತ ಆದೇಶ!

ತಾನು ನಡೆದಿದ್ದೇ ದಾರಿ ಎಂಬಂತೆ ಸುತ್ತಾಡುತ್ತಿದ್ದ ಆನೆ ಏಕಾಏಕಿ ಬಂಧಿಯಾಗುತ್ತದೆ. ಕೊನೆಗೆ ಹಸಿವು ತಾಳಲಾಗದೇ ನೀಡಿದ್ದನ್ನು ತಿನ್ನುತ್ತದೆ. ಮಾವುತ ರಾತ್ರಿ ಇಡೀ ಎಚ್ಚರವಿದ್ದು, ಮಗುವಿನಂತೆ ಅದಕ್ಕೆ ಹಸಿವಿದೆಯೋ ಇಲ್ಲವೋ ಊಟ ಮಾತ್ರ ನೀಡುತ್ತಲೇ ಇರಬೇಕು. ನಿದ್ದೆಗೆಟ್ಟು ಆನೆಯ ವಿಶ್ವಾಸ ಗಳಿಸಬೇಕು. ಆರಂಭದಲ್ಲಂತೂ ಆನೆಯ ಮೇಲೆ ಹೆಚ್ಚು ಸಿಟ್ಟೂ ಆಗುವಂತಿಲ್ಲ. ಪ್ರೀತಿಯಿಂದಲೇ ತಿಳಿಹೇಳಬೇಕು. ಕೆಲವೊಮ್ಮೆ ರೊಚ್ಚಿಗೇಳುವ ಆನೆ ದೊಡ್ಡಿಯನ್ನು ತಿವಿದು ಮುರಿಯಲು ಯತ್ನಿಸುತ್ತದೆ. ಆಗ ಅದಕ್ಕಾಗುವ ಗಾಯಗಳಿಗೆ ಮುಲಾಮು ಹಚ್ಚಿ ವಾಸಿಯಾಗುವಂತೆ ಕಾಳಜಿ ವಹಿಸಬೇಕು. ಇದು ಇಷ್ಟಕ್ಕೇ ನಿಲ್ಲುವುದಿಲ್ಲ. ಮಾವುತನನ್ನು ಆಯ್ಕೆ ಮಾಡಿಕೊಂಡ ಆನೆಯ ವಿಧೇಯ ವಿದ್ಯಾರ್ಥಿಯೆಡೆಗಿನ ತರಬೇತಿಯ ಮೊದಲ ಅಧ್ಯಾಯವಿದು. ಇಲ್ಲಿಂದ ಮಾವುತ ಮತ್ತು ಆನೆಯ ನಡುವಿನ ಬಾಂಧವ್ಯ ಬೆಸೆಯಲಾರಂಭಿಸುತ್ತದೆ. ಸುಮಾರು 6 ತಿಂಗಳುಗಳ ಕಾಲ ಆನೆಯನ್ನು ದೊಡ್ಡಿಯಲ್ಲೇ ಇಡಲಾಗುತ್ತದೆ. ಮಾವುತ ಅದಕ್ಕೆ ಬೇಕಾದ ಆಹಾರ, ಊಟ ನೀಡುತ್ತಾನೆ. ಕಬ್ಬು, ಬೆಲ್ಲ, ಕಾಯಿ, ಆಲದ ಮರದ ಎಲೆ, ಅಕ್ಕಿ ತರಹೇವಾರಿ ಆಹಾರ ನೀಡುತ್ತಾನೆ. ಇದಕ್ಕೆ ಹೆಚ್ಚುವರಿಯಾಗಿ ಕಾವಾಡಿಯೂ ಸೇರ್ಪಡೆಯಾಗುತ್ತಾನೆ. ಮಾವುತ ಮತ್ತು ಕಾವಾಡಿ ಇಬ್ಬರೂ ಆನೆಯ ಪೋಷಣೆ ಮಾಡಲಾರಂಭಿಸುತ್ತಾರೆ.

ಹೀಗೆ ಆನೆಯನ್ನ ಪಳಗಿಸುವಾಗ ಆನೆಗೆ ಭಾಷೆಯನ್ನೂ ಕಲಿಸಲಾಗುತ್ತದೆ. ತಿರೆ (ಮಲ್ಕೊ), ತೋಲ್‌ (ಕಾಲೆತ್ತು), ಮಲ್‌ (ಮುಂದೆ ಹೋಗು), ಕೊಡೊ(ನಿಂತ್ಕೊ), ದಲೈ (ಸೊಂಡಿಲು ಮೇಲೆತ್ತು), ನೀಚ್‌ (ಕಾಲು ಹಿಂದೆ-ಮುಂದೆ ಮಾಡು) ಹೀಗೆ ಸಣ್ಣಪುಟ್ಟ ಪದಗಳ ಭಾಷೆಗಳನ್ನು ಕಲಿಸಲಾಗುತ್ತದೆ. ಕಾಲಾನುಕಾಲದಿಂದಲೂ ಆನೆಗಳಿಗೆ ಹಿಂದಿ, ಬಂಗಾಳಿ ಭಾಷೆ ಕಲಿಸುತ್ತಾ ಬರಲಾಗುತ್ತಿದೆ. ಅವುಗಳಿಗೆ ಸುಲಭವಾಗಿ ಅರ್ಥವಾಗುವ ಪುಟ್ಟ ಪದಗಳನ್ನೇ ಕಲಿಸಬೇಕು. ಆರಂಭದಲ್ಲಿ ಪರಿಪರಿ ಹೇಳಿದರೂ ಆನೆ ಸೊಪ್ಪು ಹಾಕುವುದಿಲ್ಲ. ಆದರೂ ಬಿಟ್ಟೂಬಿಡದೇ ಮಾವುತ, ಕಾವಾಡಿ ಆ ಪದಗಳು ಆನೆಯ ಕಿವಿಗೆ ಬೀಳುವಂತೆ ಮಾತಾಡುತ್ತಾರೆ. ಇನ್ನೇನು ಮಾತುಗಳನ್ನು ಕೇಳಲಾರಂಭಿಸಿತು ಎನ್ನುವಾಗಲೇ ಇನ್ನೊಂದು ಹಂತದ ತರಬೇತಿಗೆ ಅಣಿಗೊಳಿಸಲಾಗುತ್ತದೆ.

ಆರೇಳು ತಿಂಗಳುಗಳಲ್ಲಿ ಮಾವುತ, ಕಾವಾಡಿ ಮತ್ತು ಆನೆಯ ನಡುವೆ ಒಂದು ಜಗತ್ತೇ ಏರ್ಪಟ್ಟು ಕೌಟುಂಬಿಕ ವಾತಾವರಣ ಸೃಷ್ಟಿಯಾಗಿರುತ್ತದೆ. ಅಲ್ಲಿಯವರೆಗೆ ಆ ಆನೆಯ ಪಾಲಿಗೆ ದೊಡ್ಡಿಯಲ್ಲಿನ ಪ್ರದೇಶವೇ ಜಗತ್ತು ಮತ್ತು ಅಲ್ಲಿರುವ ಆನೆಗಳೇ ಸಹಚರರಾಗಿರುತ್ತಾರೆ. ಆದರೆ, ಕ್ಯಾಂಪಿನಲ್ಲಿರುವ ಆನೆಗಳು ಇದರಾಚೆಗಿನ ಹೊಂದಾಣಿಕೆ ಮನೋಭಾವ ಹೊಂದಿರಬೇಕಾಗುತ್ತದೆ. ಹೀಗಾಗಿ, ಆನೆಯನ್ನು ಅಕ್ಕಪಕ್ಕದ ಹಳ್ಳಿಗಳಿಗೆ ಕರೆದೊಯ್ಯಲಾಗುತ್ತದೆ. ಜನರೊಂದಿಗೆ ಬೆರೆಯುವ ಗುಣ ರೂಢಿಸಲಾಗುತ್ತದೆ. ಜನರನ್ನು ನೋಡಿ ಗಾಬರಿಯಾಗುತ್ತಿಲ್ಲ ಎಂದಾದರೆ ಅದನ್ನು ಆನೆ ಬಿಡಾರಗಳಿಗೆ ಕರೆತರಲಾಗುತ್ತದೆ. ಹೀಗೆ ಒಂದು ಪುಂಡಾನೆ ಮೃದು ವರ್ತನೆ ತೋರುವವರೆಗೂ ಮಾವುತನೇ ಅದಕ್ಕೆಲ್ಲಾ ಆಗಿರುತ್ತಾನೆ.

suddiyaana