ನೂತನ ಸಚಿವರ ಪಟ್ಟಿ ಸಿದ್ದ! – ಸೋನಿಯಾ, ರಾಹುಲ್ ಗಾಂಧಿ ಭೇಟಿ ಮಾಡಿದ್ಯಾಕೆ ಸಿದ್ದು? 

ನೂತನ ಸಚಿವರ ಪಟ್ಟಿ ಸಿದ್ದ! – ಸೋನಿಯಾ, ರಾಹುಲ್ ಗಾಂಧಿ ಭೇಟಿ ಮಾಡಿದ್ಯಾಕೆ ಸಿದ್ದು? 

ನವದೆಹಲಿ: ಕರ್ನಾಟಕದಲ್ಲಿ ಈಗ ಸಚಿವ ಸಂಪುಟ ರಚನೆಗೆ ಭಾರಿ ಹೈಡ್ರಾಮ ನಡೆಯುತ್ತಿದೆ. ಒಂದು ಕಡೆ ಹಲವು ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿದ್ದರೆ, ಇನ್ನೊಂದು ಕಡೆಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಗೆ ತೆರಳಿ ಮೇಲಿಂದ ಮೇಲೆ ಮೀಟಿಂಗ್ ನಡೆಸುತ್ತಿದ್ದಾರೆ. ಇದೀಗ ಸಿಎಂ ಸಿದ್ದರಾಮಯ್ಯ ದೆಹಲಿಯಲ್ಲಿ ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಬಳಿಕ ಸಿಎಂ ಸಿದ್ದರಾಮಯ್ಯ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಹಾಗೂ ರಾಬರ್ಟ್ ವಾದ್ರಾರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಇದನ್ನೂ ಓದಿ: ಬಿಜೆಪಿಗೆ ಶಾಕ್‌ ಮೇಲೆ ಶಾಕ್‌! – 20 ಸಾವಿರ ಕೋಟಿ ರೂಪಾಯಿ ಟೆಂಡರ್‌ ರದ್ದು ಮಾಡಿದ್ಯಾಕೆ ಕಾಂಗ್ರೆಸ್?‌

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಕಳೆದೆರಡು ದಿನಗಳಿಂದ ನವದೆಹಲಿಯಲ್ಲಿ ಸರಣಿ ಸಭೆ ನಡೆಸಿ ನೂತನ ಸಚಿವರ ಪಟ್ಟಿ ಅಂತಿಮಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಒಂದು ಮಾಹಿತಿಯ ಪ್ರಕಾರ ಸಚಿವ ಸ್ಥಾನಕ್ಕೆ ಈಗಾಗಲೇ 24 ಮಂದಿ ಶಾಸಕರನ್ನು ಫೈನಲ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಕಾಂಗ್ರೆಸ್ ಮಾತ್ರ ಯಾವುದೇ ಸುಳಿವನ್ನು ಬಿಟ್ಟುಕೊಡುತ್ತಿಲ್ಲ.

ಇನ್ನು ಸಚಿವ ಸಂಪುಟ ವಿಸ್ತರಣೆ ಬಗ್ಗೆ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿದ್ದು, ಸಚಿವ ಸಂಪುಟ ವಿಸ್ತರಣೆಯಲ್ಲಿ ತಡವಾಗುತ್ತಿಲ್ಲ, ಬದಲಾಗಿ ಎಲ್ಲಾ ಪ್ರಕ್ರಿಯೆಗಳು ನಡೆಯುತ್ತಿವೆ. ಸಿಎಂ, ಡಿಸಿಎಂ ವರಿಷ್ಠರ ಜೊತೆ ಮಾತನಾಡುತ್ತಿದ್ದಾರೆ. ಅನೇಕ ಊಹಾಪೋಹಗಳು ಕೇಳಿಬರುತ್ತಿವೆ. ಆದರೆ ಯಾರಿಗೆಲ್ಲಾ ಸಚಿವ ಸ್ಥಾನ ಸಿಕ್ಕಿದೆ ಎನ್ನುವುದನ್ನು ತಿಳಿಯಲು ಅಧಿಕೃತ ಮಾಹಿತಿ  ಸಿಗುವವರೆಗೂ ಕಾಯಬೇಕಾಗಿದೆ ಎಂದು ಹೇಳಿದ್ದಾರೆ.

ಸಂಪುಟಕ್ಕೆ ಹಿರಿಯ ಶಾಸಕರನ್ನು ಸೇರಿಸಿಕೊಳ್ಳುವುದಿಲ್ಲ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ನಾಯಕರು ಹೇಳಿಕೆ ಕೊಟ್ಟಿಲ್ಲ. ಹೊರಗಡೆ ಊಹಾಪೋಹಗಳು ಕೇಳಿಬರುತ್ತಿವೆ. ಅದನ್ನೆಲ್ಲಾ ಮಾಧ್ಯಮಗಳಲ್ಲಿ ನೋಡಿದ್ದೇವೆ ಅಷ್ಟೆ. ಆದರೆ ಪಕ್ಷದಿಂದ ಈ ಬಗ್ಗೆ ನಮಗೆ ಮಾಹಿತಿ ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.

suddiyaana