120 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರೆಡಿ – ಫಸ್ಟ್ ಲಿಸ್ಟ್ ನಲ್ಲಿ ಯಾರಿಗೆಲ್ಲಾ ಅವಕಾಶ..?

120 ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ರೆಡಿ – ಫಸ್ಟ್ ಲಿಸ್ಟ್ ನಲ್ಲಿ ಯಾರಿಗೆಲ್ಲಾ ಅವಕಾಶ..?

ಕರ್ನಾಟಕ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದೆ. ಕೆಲವೇ ದಿನಗಳಲ್ಲಿ ಚುನಾವಣೆಗೆ ದಿನಾಂಕ ಘೋಷಣೆಯಾಗಲಿದೆ. ಈ ನಡುವೆ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ಜೋರಾಗಿದೆ. ಈಗಾಗ್ಲೇ ಜೆಡಿಎಸ್ ಮೊದಲ ಹಂತದ ಪಟ್ಟಿ ಬಿಡುಗಡೆ ಮಾಡಿದೆ. ಈಗ ಕಾಂಗ್ರೆಸ್ ಕೂಡ ಸ್ಕ್ರೀನಿಂಗ್ ಕಮಿಟಿ ಸಭೆ ನಡೆಸಿದ್ದು 120 ಕ್ಷೇತ್ರಗಳ ಟಿಕೆಟ್​ ಅಂತಿಮಗೊಳಿಸಲಾಗಿದೆ.

ಈಗಾಗ್ಲೇ ಯಾತ್ರೆಗಳ ಮೂಲಕ ಮೂರೂ ಪಕ್ಷಗಳು ರೌಂಡ್ಸ್ ಹಾಕ್ತಿದ್ದು ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆ ಪ್ರಕ್ರಿಯೆ ಭರದಿಂದ ಸಾಗಿದೆ. ರಾಜ್ಯ ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಸೇರಿದಂತೆ ಹಿರಿಯ ನಾಯಕರು ಮಾರ್ಚ್ 8ರಂದು ಬೆಂಗಳೂರಿನಲ್ಲಿ ಸಭೆ ನಡೆಸಿದ್ದಾರೆ. ಮಧ್ಯಾಹ್ನದಿಂದ ರಾತ್ರಿ 10 ಗಂಟೆಯವರೆಗೆ ನಡೆದ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಟಿಕೆಟ್ ಆಕಾಂಕ್ಷಿಗಳಿಂದ ಬಂದಿರುವ ಅರ್ಜಿಗಳನ್ನು ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ : ಕೋಟಿ ಕೋಟಿ ಗಳಿಸಿ ನೀವೂ ಶ್ರೀಮಂತರಾಗಬೇಕೇ..? – ‘ಮಾಡಾಳ್ ತಳಿ ಅಡಕೆ ಗಿಡಗಳು’ ಬಂದಾಯ್ತು..!

ಸಿದ್ದರಾಮಯ್ಯ ಹಾಗೂ ಡಿಕೆಶಿವಕುಮಾರ್ ಇಬ್ಬರೂ ಸೇರಿ 120 ಕ್ಷೇತ್ರಗಳ ಅಭ್ಯರ್ಥಿಗಳನ್ನು ಒಮ್ಮತದಿಂದ ಆಯ್ಕೆ ಮಾಡಿದ್ದು, ಈ ಪಟ್ಟಿಯನ್ನು ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಮೋಹನ್ ಪ್ರಕಾಶ್ ಅವರು ಹೈಕಮಾಂಡ್​ಗೆ ನೀಡಲಿದ್ದಾರೆ. ಇನ್ನುಳಿದಂತೆ 104 ಸ್ಥಾನಗಳಿಗೆ ಎರಡರಿಂದ ಮೂರು ಹೆಸರುಗಳು ಪ್ರಸ್ತಾಪವಾಗಿದೆ. ಬಳಿಕ ಮತ್ತೊಂದು ಸುತ್ತಿನ ಸಭೆ ನಡೆಸಿ ನಿರ್ಧಾರ ಕೈಗೊಳ್ಳಲಿದ್ದಾರೆ. ನಂತರ ದೆಹಲಿಗೆ ಅಭ್ಯರ್ಥಿಗಳ ಪಟ್ಟಿ ರವಾನೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ಕೆಲವು ಭಾಗಗಳಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ನಾಯಕರು ಪಕ್ಷಕ್ಕೆ ಸೇರುವ ಸಾಧ್ಯತೆ ಇರುವುದರಿಂದ ನಂತರ ನಿರ್ಧಾರ ತೆಗೆದುಕೊಳ್ಳುವ ತೀರ್ಮಾನ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಂತಹ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಮಾರ್ಚ್ 27 ರ ನಂತರ ಘೋಷಣೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.

120 ಕ್ಷೇತ್ರಗಳ ಮೊದಲ ಪಟ್ಟಿಯಲ್ಲಿ ಟಾಪ್ ಲೀಡರ್ಸ್​ ಹೆಸರುಗಳು ಇವೆ ಎಂದು ತಿಳಿದುಬಂದಿದೆ. ಟಾಪ್​ ಲೀಡರ್ಸ್ ಅಂದ್ರೆ ಕೆಲ ಹಾಲಿ ಶಾಸಕರ ಹೆಸರುಗಳು ಮೊದಲ ಪಟ್ಟಿಯಲ್ಲಿವೆ. ಡಿಕೆ ಶಿವಕುಮಾರ್, ಕೃಷ್ಣ ಬೈರೇಗೌಡ, ರಾಮಲಿಂಗರೆಡ್ಡಿ, ಎನ್.ಎ ಹ್ಯಾರೀಸ್, ಆರ್​.ವಿ. ದೇಶಪಾಂಡೆ, ಕೆ.ಜೆ ಜಾರ್ಜ್​, ಜಮೀರ್ ಅಹಮ್ಮದ್​ ಖಾನ್ ಹೀಗೆ ಹಾಲಿ ಹಾಗೂ ಪ್ರಭಾವಿ ನಾಯಕರುಗಳ ಹೆಸರುಗಳು ಮೊದಲ ಪಟ್ಟಿಯಲ್ಲಿದೆ. ಇನ್ನು ಒಂದು ಕ್ಷೇತ್ರದಲ್ಲಿ ಒಬ್ಬರೇ ಟಿಕೆಟ್​ ಆಕಾಂಕ್ಷಿ ಇರುವ ಅಭ್ಯರ್ಥಿಗಳ ಹೆಸರು ಸಹ ಮೊದಲ ಪಟ್ಟಿಯಲ್ಲೇ ಪ್ರಕಟವಾಗಲಿದೆ ಎನ್ನಲಾಗಿದೆ. ಇದನ್ನು ಹೊರತುಪಡಿಸಿ ಫಸ್ಟ್​ ಲಿಸ್ಟ್​ನಲ್ಲಿ ಯಾರ್ಯಾರಿಗೆ ಟಿಕೆಟ್​ ಸಿಗಲಿದೆ ಎನ್ನುವುದು ತೀವ್ರ ಕುತೂಹಲ ಮೂಡಿಸಿದೆ.

ವಿಧಾನ ಪರಿಷತ್ ಸದಸ್ಯರ ಬಗ್ಗೆಯೂ ಚರ್ಚೆ ಮುಂದೆ ಸರ್ಕಾರ ಬಂದರೆ 4 ರಿಂದ 8 ವಿಧಾನ ಪರಿಷತ್ ಸದಸ್ಯರಿಗೆ ಸಚಿವ ಸ್ಥಾನ ನೀಡುವ ಬಗ್ಗೆಯೂ ಚರ್ಚೆಯಾಗಿದೆ. ಹಾಲಿ ಪರಿಷತ್ ಸದಸ್ಯರಿಗೆ ಟಿಕೆಟ್​ ನೀಡುವ ಬದಲು ಹಿರಿಯ ಹಾಗೂ ಪ್ರಬಲ ಸಮುದಾಯದ ವಿಧಾನ ಪರಿಷತ್ ಸದಸ್ಯರಿಗೂ ಸಚಿವ ಸ್ಥಾನ ನೀಡುವ ಬಗ್ಗೆ ಮಾತುಕತೆ ಆಗಿದ್ದು, ಚುನಾವಣೆಯಲ್ಲಿ ಅಭ್ಯರ್ಥಿಗಳ ಗೆಲುವಿಗೆ ವಿಧಾನ ಪರಿಷತ್ ಸದಸ್ಯರನ್ನು ಸಮರ್ಥವಾಗಿ ಬಳಸಿಕೊಳ್ಳುವ ಬಗ್ಗೆ ಸಭೆಯಲ್ಲಿ ತೀರ್ಮಾನವಾಗಿದೆ.

ಸಭೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಸದ್ಯಕ್ಕೆ ಶೇ.75 ರಷ್ಟು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ ನಂತರ ಕೇಂದ್ರ ನಾಯಕರಿಗೆ ಪಟ್ಟಿಯನ್ನು ಕಳುಹಿಸಲಾಗುವುದು. ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಬಿಜೆಪಿ 65 ಸ್ಥಾನಗಳನ್ನು ದಾಟುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

suddiyaana