ವಿವಾದದ ಸುಳಿಯಲ್ಲಿ ‘ದಿ ಕೇರಳ ಸ್ಟೋರಿ’ – ಚಿತ್ರ ಪ್ರದರ್ಶನಕ್ಕೆ ಹಿಂದೇಟು ಹಾಕಿದ ಚಿತ್ರಮಂದಿರದ ಮಾಲೀಕರು

ವಿವಾದದ ಸುಳಿಯಲ್ಲಿ ‘ದಿ ಕೇರಳ ಸ್ಟೋರಿ’ – ಚಿತ್ರ ಪ್ರದರ್ಶನಕ್ಕೆ ಹಿಂದೇಟು ಹಾಕಿದ ಚಿತ್ರಮಂದಿರದ ಮಾಲೀಕರು

ದೇಶದಾದ್ಯಂತ ವಿವಾದದ ಕಿಚ್ಚು ಹೊತ್ತಿಸಿರುವ ಲವ್ ಜಿಹಾದ್ ಆಧಾರಿತ ಸಿನಿಮಾ ‘ದಿ ಕೇರಳ ಸ್ಟೋರಿ’ ಶುಕ್ರವಾರ ರಿಲೀಸ್ ಆಗಿದೆ. ಮಲಯಾಳಂ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಯಲ್ಲಿ ಸಿನಿಮಾ ಮೂಡಿ ಬಂದಿದ್ದು, ಕೇರಳದಲ್ಲಿ ಚಿತ್ರ ಪ್ರದರ್ಶನಕ್ಕೆ ಥಿಯೇಟರ್ ಮಾಲೀಕರು ಹಿಂದೇಟು ಹಾಕಿದ್ದಾರೆ.

ವಿವಾದಕ್ಕೆ ಕಾರಣವಾಗಿರುವ ಎಲ್ಲಾ ಅಂಶಗಳು ಈ ಚಿತ್ರದಲ್ಲಿ ತೋರಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ ಕೇರಳದಲ್ಲೂ ಕಾಂಗ್ರೆಸ್ ಹಾಗೂ ಕೆಲ ಸಂಘಟನೆಗಳು ಈ ಸಿನಿಮಾ ಬಿಡುಗಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದು, ಪ್ರತಿಭಟನೆಯ ಕಾವು ಜೋರಾಗಿದೆ. ಈ ಹಿನ್ನೆಲೆ ಕೇರಳದ ಕೆಲವು ಜಿಲ್ಲೆಗಳ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯನ್ನು ಕ್ಯಾನ್ಸಲ್ ಮಾಡಿದ್ದಾರೆ.

ಇದನ್ನೂ ಓದಿ: ವರಸೆ ಬದಲಿಸಿದ ‘ದಿ ಕೇರಳ ಸ್ಟೋರಿ’ ಟೀಮ್! – ತಮಿಳುನಾಡು ಸರ್ಕಾರಕ್ಕೆ ಗುಪ್ತಚರ ಇಲಾಖೆ ಹೇಳಿದ್ದೇನು?

ಕೇರಳದ ಕೊಚ್ಚಿಯ ಚಿತ್ರಮಂದಿರಗಳಲ್ಲಿ ದಿನದಲ್ಲಿ 2 ಬಾರಿ ಪ್ರದರ್ಶನ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿತ್ತು. ವಿವಾದ ಭುಗಿಲೆದ್ದ ಹಿನ್ನೆಲೆ ಫಿಕ್ಸ್ ಮಾಡಲಾಗಿದ್ದ 2 ಪ್ರದರ್ಶನವನ್ನು ರದ್ದುಗೊಳಿಸಲಾಗಿದೆ. ಇನ್ನು ಕೊಚ್ಚಿಯ ಲುಲು ಮಾಲ್ ಮತ್ತು ಸೆಂಟರ್ ಸ್ಕ್ವೇರ್ ಮಾಲ್ ಥಿಯೇಟರ್ ಮಾಲೀಕರು ಕೂಡ ಸಿನಿಮಾವನ್ನು ಬಹಿಷ್ಕರಿಸಲು ನಿರ್ಧರಿಸಿದ್ದಾರೆ. ಅದೇ ರೀತಿ ಕೊಲ್ಲಂ, ಪತ್ತನಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಕಣ್ಣೂರು ಮತ್ತು ವಯನಾಡ್ ಜಿಲ್ಲೆಗಳ ಥಿಯೇಟರ್‌ಗಳು ಕೂಡ ಸಿನಿಮಾ ಪ್ರದರ್ಶಿಸದಿರಲು ನಿರ್ಧರಿಸಿವೆ.

ಈಗಾಗಲೇ ವಿವಾದಕ್ಕೆ ಕಾರಣವಾಗುವಂತಹ ಮತ್ತು ಆಕ್ಷೇಪಕ್ಕೆ ಗುರಿಯಾಗಿರುವ ಹಲವು ದೃಶ್ಯಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿದೆ. ಬರೋಬ್ಬರಿ 10 ದೃಶ್ಯಗಳಿಗೆ ಕತ್ತರಿ ಹಾಕುವ ಮೂಲಕ ಚಿತ್ರತಂಡಕ್ಕೆ ಶಾಕ್ ನೀಡಿದೆ. ಅಲ್ಲದೇ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರವನ್ನು ನೀಡಿದೆ. ಮಾಜಿ ಸಿಎಂ ಒಬ್ಬರ ಸಂದರ್ಶನ, ಕೆಲ ಸಂಭಾಷಣೆಗಳು ಹಾಗೂ ಕಮ್ಯುನಿಸ್ಟ್ ಪಕ್ಷದವರ ಬಗ್ಗೆ ಆಡಿದ ಮಾತುಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿದೆ.

ಕಳೆದ ಮೂರು ವಾರಗಳಿಂದ ‘ದಿ ಕೇರಳ ಸ್ಟೋರಿ’ ಸಿನಿಮಾದ ಬಗ್ಗೆ ಸಾಕಷ್ಟು ಪರ ವಿರೋಧದ ಮಾತು ಕೇಳಿ ಬರುತ್ತಿದೆ. ಈ ಸಿನಿಮಾದಲ್ಲಿರುವುದು ಸತ್ಯ ಎಂದು ಚಿತ್ರತಂಡ ಹೇಳಿಕೊಂಡರೆ, ಅದು ಕಪೋಕಲ್ಪಿತ ಕಥೆ ಎಂದು ಹಲವರು ವಾದಿಸುತ್ತಿದ್ದಾರೆ. ಈ ಸಿನಿಮಾ ಪ್ರದರ್ಶನಕ್ಕೆ ತಡೆಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲು ಕೂಡ ಏರಲಾಗಿತ್ತು. ಆದರೆ, ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ನಿರಾಕರಿಸಿತ್ತು. ಹೈಕೋರ್ಟ್ ಗೆ ಹೋಗಲು ಸೂಚನೆ ನೀಡಿತ್ತು. ಇಷ್ಟೆಲ್ಲ ಬೆಳವಣಿಗೆ ಮಧ್ಯೆಯೇ ಮತ್ತೊಂದು ಸವಾಲು ಘೋಷಣೆ ಆಗಿದೆ.

ಈ ಸಿನಿಮಾದಲ್ಲಿಯ ಮಾಹಿತಿಯು ನಿಜ ಅಂತ ಸಾಬೀತು ಪಡಿಸಿದರೆ ಒಂದು ಕೋಟಿ ರೂಪಾಯಿ ಬಹುಮಾನ ಕೊಡುವುದಾಗಿ ಮುಸ್ಲಿಂ ಯೂತ್ ಲೀಗ್ ಕೇರಳ ರಾಜ್ಯ ಕಮಿಟಿಯು ಘೋಷಿಸಿದೆ. ಸಿನಿಮಾದಲ್ಲಿ ಸುಳ್ಳುಗಳ ಸರಮಾಲೆಯೇ ಇದೆ. ಅವರು ಹೇಳುತ್ತಿರುವುದು ನಿಜ ಎಂದು ಸಾಬೀತು ಪಡಿಸಲಿ ಎಂದು ಹೇಳಿಕೆ ನೀಡಿದೆ.

suddiyaana