‘ದಿ ಕೇರಳ ಸ್ಟೋರಿ’ ಮೊದಲ ದಿನದ ಕಲೆಕ್ಷನ್ ಎಷ್ಟು? – ದಿ ಕಾಶ್ಮೀರ್ ಫೈಲ್ಸ್ ಮೀರಿಸುತ್ತಾ ಈ ಸಿನಿಮಾ?

ದೇಶದಾದ್ಯಂತ ವಿವಾದದ ಕಿಚ್ಚು ಹೊತ್ತಿಸಿರುವ ಲವ್ ಜಿಹಾದ್ ಆಧಾರಿತ ಸಿನಿಮಾ ‘ದಿ ಕೇರಳ ಸ್ಟೋರಿ’ಶುಕ್ರವಾರ ರಿಲೀಸ್ ಆಗಿದೆ. ಇತ್ತೀಚೆಗೆ ತೆರೆಕಂಡ ಹಿಂದಿ ಚಿತ್ರಗಳಿಗೆ ಹೋಲಿಸಿದರೆ ‘ದಿ ಕೇರಳ ಸ್ಟೋರಿ’ ಸಿನಿಮಾದ ಫಸ್ಟ್ ಡೇ ಕಲೆಕ್ಷನ್ ವಿಚಾರದಲ್ಲಿ ಪಾಸಿಟಿವ್ ಓಪನಿಂಗ್ ಸಿಕ್ಕಿದೆ.
ಈ ಸಿನಿಮಾ ರಿಲೀಸ್ ಮಾಡಬಾರದು ಎಂದು ಕೇರಳದಲ್ಲಿ ಕಾಂಗ್ರೆಸ್ ಹಾಗೂ ವಿವಿಧ ಸಂಘಟನೆಗಳಿಂದ ಒತ್ತಾಯ ಕೇಳಿಬಂದಿತ್ತು. ಕೆಲ ಚಿತ್ರಮಂದಿರಗಳು ಕೂಡ ಪ್ರದರ್ಶನವನ್ನು ರದ್ದು ಮಾಡಿದ್ದವು. ಈ ಎಲ್ಲಾ ಸವಾಲುಗಳನ್ನು ಎದುರಿಸಿ ‘ದಿ ಕೇರಳ ಸ್ಟೋರಿ’ ಶುಕ್ರವಾರ ಬಿಡುಗಡೆಯಾಗಿದೆ.
ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ರಿಲೀಸ್ – ಪ್ರಧಾನಿ ಮೋದಿ ಹೇಳಿದ್ದೇನು?
ಸುದಿಪ್ತೋ ಸೇನ್ ನಿರ್ದೇಶನದ ಈ ಸಿನಿಮಾದಲ್ಲಿ ಅದಾ ಶರ್ಮಾ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಮೊದಲ ದಿನ ಸಾಧಾರಣ ಗಳಿಕೆ ಮಾಡಬಹುದು ಎಂದು ಚಿತ್ರ ಪಂಡಿತರು ಊಹಿಸಿದ್ದರು. ಈ ಊಹೆ ನಿಜವಾಗಿದೆ. ಸ್ಯಾಕ್‌ನಿಲ್ಕ್ ವರದಿಯ ಪ್ರಕಾರ ಚಿತ್ರ ಮೊದಲ ದಿನವೇ 7.50 ಕೋಟಿ ಗಳಿಸಿದೆ ಎನ್ನಲಾಗುತ್ತಿದೆ. ಬಾಕ್ಸ್ ಆಫೀಸ್ ಲೆಕ್ಕಾಚಾರದಲ್ಲಿ ನೋಡಿದರೆ ಇದು ಸಾಧಾರಣ ಗಳಿಕೆ ಎನ್ನಬಹುದು. ಮೊದಲ ದಿನ ಸಿನಿಮಾ ನೋಡಿದ ಅನೇಕರು ಇದನ್ನು ಮೆಚ್ಚಿಕೊಂಡಿದ್ದಾರೆ. ಸಿನಿಮಾಗೆ ಬಾಯಿಮಾತಿನ ಪ್ರಚಾರ ಸಿಗುತ್ತಿದೆ. ಬುಕ್ ಮೈ ಶೋನಲ್ಲಿ ಈ ಚಿತ್ರಕ್ಕೆ 22 ಸಾವಿರ ಜನರು ವೋಟ್ ಮಾಡಿದ್ದು, 9.6 ರೇಟಿಂಗ್ ಸಿಕ್ಕಿದೆ. ಹೀಗಾಗಿ, ಸಿನಿಮಾ ಮುಂದಿನ ದಿನಗಳಲ್ಲಿ ಅಬ್ಬರದ ಗಳಿಕೆ ಮಾಡಬಹುದು ಎಂದು ಅಂದಾಜಿಸಲಾಗಿದೆ.
2022ರಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ತೆರೆಗೆ ಬಂತು. ಈ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 3.5 ಕೋಟಿ ರೂಪಾಯಿ ಮಾತ್ರ. ನಂತರದ ದಿನಗಳಲ್ಲಿ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತವಾಯಿತು. ಈ ಸಿನಿಮಾ ಒಟ್ಟಾರೆ 252 ಕೋಟಿ ರೂಪಾಯಿ ಬಾಚಿಕೊಂಡಿತು. ಈಗ ‘ದಿ ಕೇರಳ ಸ್ಟೋರಿ’ ವಿಚಾರದಲ್ಲಿ ಇತಿಹಾಸ ಮರುಕಳಿಸಲಿದೆಯೇ ಎನ್ನುವ ಪ್ರಶ್ನೆ ಮೂಡಿದೆ.