‘ದಿ ಕೇರಳ ಸ್ಟೋರಿ’ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸಿದ ಸರ್ಕಾರ!
ಭೋಪಾಲ್: ಮೇ 5 ರಂದು ದೇಶದಾದ್ಯಂತ ‘ದಿ ಕೇರಳ ಸ್ಟೋರಿ’ ತೆರೆಕಂಡಿದ್ದು, ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಿನಿಮಾದ ಟ್ರೈಲರ್ ಬಿಡುಗಡೆಯಾದಾಗಿಂದಲೂ ಸಾಕಷ್ಟು ವಿವಾದದ ಕಿಡಿ ಹೊತ್ತಿಸಿದೆ. ಕೇರಳ ಕಾಂಗ್ರೆಸ್ ಸೇರಿದಂತೆ ಹಲವು ಸಂಘಟನೆಗಳು ಈ ಸಿನಿಮಾಗೆ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಈ ನಡುವೆಯೇ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಧ್ಯಪ್ರದೇಶದಲ್ಲಿ ದಿ ಕೇರಳ ಸ್ಟೋರಿ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡುವುದಾಗಿ ಘೋಷಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಿಎಂ ಶಿವರಾಜ್ ಸಿಂಗ್ ಚೌಹಾಣ್, “ನಾವು ಈಗಾಗಲೇ ಮಧ್ಯಪ್ರದೇಶದಲ್ಲಿ ಧಾರ್ಮಿಕ ಮತಾಂತರದ ವಿರುದ್ಧ ಕಾನೂನು ಜಾರಿ ಮಾಡಿದ್ದೇವೆ. ಈ ಚಿತ್ರವು ಜಾಗೃತಿ ಮೂಡಿಸುತ್ತದೆ. ಪ್ರತಿಯೊಬ್ಬರೂ ಈ ಚಿತ್ರವನ್ನು ನೋಡಬೇಕು. ಪೋಷಕರು, ಮಕ್ಕಳು ಮತ್ತು ಹೆಣ್ಣುಮಕ್ಕಳು ಇದನ್ನು ನೋಡಬೇಕು. ಅದಕ್ಕಾಗಿಯೇ ಮಧ್ಯಪ್ರದೇಶ ಸರ್ಕಾರ ದಿ ಕೇರಳ ಸ್ಟೋರಿ ಚಿತ್ರಕ್ಕೆ ತೆರಿಗೆ ವಿನಾಯಿತಿ ಘೋಷಿಸುತ್ತಿದೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಮೊದಲ ದಿನದ ಕಲೆಕ್ಷನ್ ಎಷ್ಟು? – ದಿ ಕಾಶ್ಮೀರ್ ಫೈಲ್ಸ್ ಮೀರಿಸುತ್ತಾ ಈ ಸಿನಿಮಾ?
‘ಲವ್ ಜಿಹಾದ್’, ಧಾರ್ಮಿಕ ಮತಾಂತರ ಮತ್ತು ಭಯೋತ್ಪಾದನೆಯ ಪಿತೂರಿಗಳು ಮತ್ತು ಅದರ ಭೀಕರ ಮುಖವನ್ನು ಈ ಚಿತ್ರದಲ್ಲಿ ಬಹಿರಂಗಪಡಿಸಲಾಗಿದೆ. ಕ್ಷಣಿಕ ಭಾವುಕತೆಯಲ್ಲಿ ಹೆಣ್ಣು ಮಕ್ಕಳು ಲವ್ ಜಿಹಾದ್ ಜಾಲದಲ್ಲಿ ಸಿಲುಕಿದರೆ ಅವರ ಜೀವನ ಹೇಗೆ ಹಾಳಾಗಿ ಹೋಗುತ್ತದೆ ಎಂಬುದನ್ನು ಈ ಸಿನಿಮಾ ತೋರಿಸುತ್ತದೆ. ಭಯೋತ್ಪಾದನೆಯ ವಿನ್ಯಾಸಗಳು ವಿವಿಧ ಮುಖಗಳು ಹೇಗಿರುತ್ತವೆ ಎಂಬುದನ್ನೂ ಈ ಸಿನಿಮಾ ತೋರಿಸಿಕೊಡುತ್ತದೆ. ಈ ಸಿನಿಮಾ ನಮ್ಮನ್ನು ಜಾಗರೂಕಗೊಳಿಸುತ್ತದೆ ಎಂದು ಚೌಹಾಣ್ ಹೇಳಿದ್ದಾರೆ.
ಈಗಾಗಲೇ ವಿವಾದಕ್ಕೆ ಕಾರಣವಾಗುವಂತಹ ಮತ್ತು ಆಕ್ಷೇಪಕ್ಕೆ ಗುರಿಯಾಗಿರುವ ಹಲವು ದೃಶ್ಯಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿದೆ. ಬರೋಬ್ಬರಿ 10 ದೃಶ್ಯಗಳಿಗೆ ಕತ್ತರಿ ಹಾಕುವ ಮೂಲಕ ಚಿತ್ರತಂಡಕ್ಕೆ ಶಾಕ್ ನೀಡಿದೆ. ಅಲ್ಲದೇ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರವನ್ನು ನೀಡಿದೆ. ಮಾಜಿ ಸಿಎಂ ಒಬ್ಬರ ಸಂದರ್ಶನ, ಕೆಲ ಸಂಭಾಷಣೆಗಳು ಹಾಗೂ ಕಮ್ಯುನಿಸ್ಟ್ ಪಕ್ಷದವರ ಬಗ್ಗೆ ಆಡಿದ ಮಾತುಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿದೆ.
ಕಳೆದ ಮೂರು ವಾರಗಳಿಂದ ‘ದಿ ಕೇರಳ ಸ್ಟೋರಿ’ ಸಿನಿಮಾದ ಬಗ್ಗೆ ಸಾಕಷ್ಟು ಪರ ವಿರೋಧದ ಮಾತು ಕೇಳಿ ಬರುತ್ತಿದೆ. ಈ ಸಿನಿಮಾದಲ್ಲಿರುವುದು ಸತ್ಯ ಎಂದು ಚಿತ್ರತಂಡ ಹೇಳಿಕೊಂಡರೆ, ಅದು ಕಪೋಲಕಲ್ಪಿತ ಕಥೆ ಎಂದು ಹಲವರು ವಾದಿಸುತ್ತಿದ್ದಾರೆ. ಈ ಸಿನಿಮಾ ಪ್ರದರ್ಶನಕ್ಕೆ ತಡೆಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲು ಕೂಡ ಏರಲಾಗಿತ್ತು. ಆದರೆ, ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ನಿರಾಕರಿಸಿತ್ತು. ಹೈಕೋರ್ಟ್ ಗೆ ಹೋಗಲು ಸೂಚನೆ ನೀಡಿತ್ತು. ಇಷ್ಟೆಲ್ಲ ಬೆಳವಣಿಗೆ ಮಧ್ಯೆಯೇ ಮತ್ತೊಂದು ಸವಾಲು ಘೋಷಣೆ ಆಗಿದೆ.
ಈ ಸಿನಿಮಾದಲ್ಲಿಯ ಮಾಹಿತಿಯು ನಿಜ ಅಂತ ಸಾಬೀತು ಪಡಿಸಿದರೆ ಒಂದು ಕೋಟಿ ರೂಪಾಯಿ ಬಹುಮಾನ ಕೊಡುವುದಾಗಿ ಮುಸ್ಲಿಂ ಯೂತ್ ಲೀಗ್ ಕೇರಳ ರಾಜ್ಯ ಕಮಿಟಿಯು ಘೋಷಿಸಿದೆ. ಸಿನಿಮಾದಲ್ಲಿ ಸುಳ್ಳುಗಳ ಸರಮಾಲೆಯೇ ಇದೆ. ಅವರು ಹೇಳುತ್ತಿರುವುದು ನಿಜ ಎಂದು ಸಾಬೀತು ಪಡಿಸಲಿ ಎಂದು ಹೇಳಿಕೆ ನೀಡಿದೆ.