ವರಸೆ ಬದಲಿಸಿದ ‘ದಿ ಕೇರಳ ಸ್ಟೋರಿ’ ಟೀಮ್! – ತಮಿಳುನಾಡು ಸರ್ಕಾರಕ್ಕೆ ಗುಪ್ತಚರ ಇಲಾಖೆ ಹೇಳಿದ್ದೇನು?

ವರಸೆ ಬದಲಿಸಿದ ‘ದಿ ಕೇರಳ ಸ್ಟೋರಿ’ ಟೀಮ್! – ತಮಿಳುನಾಡು ಸರ್ಕಾರಕ್ಕೆ ಗುಪ್ತಚರ ಇಲಾಖೆ ಹೇಳಿದ್ದೇನು?

ಭಾರಿ ವಿರೋಧಗಳ ನಡುವೆಯೂ ‘ದಿ ಕೇರಳ ಸ್ಟೋರಿ’ ಸಿನಿಮಾ ಮೇ 5 ರಂದು ದೇಶದಾದ್ಯಂತ ಬಿಡುಗಡೆಯಾಗುತ್ತಿದೆ. ಮಲಯಾಳಂ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದ್ದು, ಕೇರಳದಲ್ಲಿ ಕಾಂಗ್ರೆಸ್ ಸೇರಿದಂತೆ ಹಲವು ಸಂಘಟನೆಗಳು ಸಿನಿಮಾ ಪ್ರದರ್ಶನಕ್ಕೆ ತಡೆ ನೀಡಬೇಕು ಎಂದು ಹೋರಾಟಕ್ಕಿಳಿದಿವೆ. ಈ ಬೆನ್ನಲ್ಲೇ ತಮಿಳುನಾಡು  ಸರಕಾರಕ್ಕೆ ಗುಪ್ತಚರ ಇಲಾಖೆ ಎಚ್ಚರಿಕೆಯೊಂದನ್ನು ನೀಡಿದೆ.

ಶುಕ್ರವಾರ ‘ದಿ ಕೇರಳ ಸ್ಟೋರಿ’ ರಿಲೀಸ್ ಆದರೆ ಕೇರಳ ಮಾದರಿಯಲ್ಲೇ ತಮಿಳುನಾಡಿನಲ್ಲೂ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ, ಗಲಭೆ ನಡೆಯುವ ಸಾಧ್ಯತೆ ಹೆಚ್ಚಾಗಿದೆ. ಹೀಗಾಗಿ ಸರ್ಕಾರ ಎಚ್ಚರಿಕೆಯಿಂದ ಇರಬೇಕು ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ ಎನ್ನಲಾಗಿದೆ.

ಇದನ್ನೂ ಓದಿ: ಕೋರ್ಟ್ ಮೆಟ್ಟಿಲೇರಿದ ‘ದಿ ಕೇರಳ ಸ್ಟೋರಿ’ – ಚಿತ್ರದ 10 ದೃಶ್ಯಗಳಿಗೆ ಕತ್ತರಿ ಹಾಕಿದ ಸೆನ್ಸಾರ್‌ ಬೋರ್ಡ್

ಇನ್ನು ಈ  ಚಿತ್ರದ ಟ್ರೈಲರ್ ನಲ್ಲಿ 32 ಸಾವಿರ ಹಿಂದೂ ಹೆಣ್ಣು ಮಕ್ಕಳನ್ನು ಇಸ್ಲಾಂಗೆ ಮತಾಂತರ ಮಾಡಿ ಮದುವೆ ಮಾಡಿರುವ ಬಗ್ಗೆ ತೋರಿಸಲಾಗಿದೆ. ಅಲ್ಲದೇ ಅಂಥ ಹೆಣ್ಣು ಮಕ್ಕಳನ್ನು ಐಸಿಸ್‌ ಉಗ್ರ ಸಂಘಟನೆಗೆ ಸೇರಿಸಲಾಗಿದೆ ಎಂದು ತೋರಿಸಲಾಗಿದೆ. ಇದಕ್ಕೆ ಭಾರಿ ಟೀಕೆ ವ್ಯಕ್ತವಾಗಿತ್ತು. ಇದೀಗ ಚಿತ್ರತಂಡ ಟ್ರೈಲರ್ ನಲ್ಲಿ ಮಹತ್ವದ ಬದಲಾವಣೆ ಮಾಡಿದೆ. ಆದರೆ, ಈಗ 32 ಸಾವಿರದ ಬದಲಿಗೆ ‘ಮೂರು’ ಎಂದು ಬರೆಯಲಾಗಿದ್ದು, ಇದು ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ. ಸತ್ಯ ಹೇಳುತ್ತಿದ್ದೀರಿ ಎಂದ ಮೇಲೆ ಭಯ ಏಕೆ ಎಂದು ಅನೇಕರು ಪ್ರಶ್ನೆ ಮಾಡಿದ್ದಾರೆ.

ಈಗಾಗಲೇ ವಿವಾದಕ್ಕೆ ಕಾರಣವಾಗುವಂತಹ ಮತ್ತು ಆಕ್ಷೇಪಕ್ಕೆ ಗುರಿಯಾಗಿರುವ ಹಲವು ದೃಶ್ಯಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿದೆ. ಬರೋಬ್ಬರಿ 10 ದೃಶ್ಯಗಳಿಗೆ ಕತ್ತರಿ ಹಾಕುವ ಮೂಲಕ ಚಿತ್ರತಂಡಕ್ಕೆ ಶಾಕ್ ನೀಡಿದೆ. ಅಲ್ಲದೇ ಚಿತ್ರಕ್ಕೆ ‘ಎ’ ಪ್ರಮಾಣ ಪತ್ರವನ್ನು ನೀಡಿದೆ. ಮಾಜಿ ಸಿಎಂ ಒಬ್ಬರ ಸಂದರ್ಶನ, ಕೆಲ ಸಂಭಾಷಣೆಗಳು ಹಾಗೂ ಕಮ್ಯುನಿಸ್ಟ್ ಪಕ್ಷದವರ ಬಗ್ಗೆ ಆಡಿದ ಮಾತುಗಳಿಗೆ ಸೆನ್ಸಾರ್ ಮಂಡಳಿಯು ಕತ್ತರಿ ಹಾಕಿದೆ.

ಕಳೆದ ಎರಡು ವಾರಗಳಿಂದ ‘ದಿ ಕೇರಳ ಸ್ಟೋರಿ’ ಸಿನಿಮಾದ ಬಗ್ಗೆ ಸಾಕಷ್ಟು ಪರ ವಿರೋಧದ ಮಾತು ಕೇಳಿ ಬರುತ್ತಿದೆ. ಈ ಸಿನಿಮಾದಲ್ಲಿರುವುದು ಸತ್ಯ ಎಂದು ಚಿತ್ರತಂಡ ಹೇಳಿಕೊಂಡರೆ, ಅದು ಕಪೋಲಕಲ್ಪಿತ ಕಥೆ ಎಂದು ಹಲವರು ವಾದಿಸುತ್ತಿದ್ದಾರೆ. ಈ ಸಿನಿಮಾ ಪ್ರದರ್ಶನಕ್ಕೆ ತಡೆಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲು ಕೂಡ ಏರಲಾಗಿತ್ತು. ಆದರೆ, ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂ ನಿರಾಕರಿಸಿತ್ತು. ಹೈಕೋರ್ಟ್ ಗೆ ಹೋಗಲು ಸೂಚನೆ ನೀಡಿತ್ತು. ಇಷ್ಟೆಲ್ಲ ಬೆಳವಣಿಗೆ ಮಧ್ಯಯೇ ಮತ್ತೊಂದು ಸವಾಲು ಘೋಷಣೆ ಆಗಿದೆ.

suddiyaana