ಅನಾಥ ಆನೆಮರಿಯನ್ನ ಮಗುವಿನಂತೆ ಪೋಷಿಸುತ್ತಿದ್ದಾರೆ ಕಾವಾಡಿ ದಂಪತಿ – ಬಂಡೀಪುರದಲ್ಲೊಂದು ‘ದಿ ಎಲಿಫೆಂಟ್ ವಿಸ್ಪರರ್ಸ್’!

ಅನಾಥ ಆನೆಮರಿಯನ್ನ ಮಗುವಿನಂತೆ ಪೋಷಿಸುತ್ತಿದ್ದಾರೆ ಕಾವಾಡಿ ದಂಪತಿ – ಬಂಡೀಪುರದಲ್ಲೊಂದು ‘ದಿ ಎಲಿಫೆಂಟ್ ವಿಸ್ಪರರ್ಸ್’!

ಪುಟಾಣಿ ಮರಿ ಅದು. ಅಮ್ಮನ ಕಾಲಡಿಯಲ್ಲಿ ಬೆಳೆಯಬೇಕಿದ್ದ ಆ ಕಂದ ಹುಟ್ಟಿದ ಕೆಲವೇ ದಿನಗಳಲ್ಲಿ ಅನಾಥವಾಗಿತ್ತು. ಕಾಡಿನಲ್ಲಿ ಒಬ್ಬಂಟಿಯಾಗಿದ್ದ ಆ ಪುಟಾಣಿಗೆ ಈಗ ಅಪ್ಪ, ಅಮ್ಮ ಸಿಕ್ಕಿದ್ದಾರೆ. ಹೆತ್ತವಳಂತೆಯೇ ಮುದ್ದು ಮಾಡುವ ಪ್ರೀತಿಯೂ ಸಿಕ್ಕಿದೆ. ನಿಜ. ಜೀವಸಂಕುಲಕ್ಕೆ ಪ್ರೀತಿ ಅನ್ನೋದು ದೇವರು ಕೊಟ್ಟಿರುವ ವರ. ಪ್ರೀತಿ ಕೊಟ್ಟರೆ ಮರಳಿ ಪ್ರೀತಿಯೇ ಸಿಗುತ್ತೆ ಅನ್ನೋದು ಮತ್ತೊಮ್ಮೆ ಸಾಬೀತಾಗಿದೆ.

ಇದನ್ನೂ ಓದಿ : ಮರಿಗಳ ರಕ್ಷಣೆಗೆ ಭದ್ರಕೋಟೆ ನಿರ್ಮಿಸಿದ ಗಜಪಡೆ – ಆನೆಗಳ ಬುದ್ಧಿವಂತಿಕೆಗೆ ಬೆರಗಾದ ಜನ

ಇತ್ತೀಚೆಗೆ ಆಸ್ಕರ್ ಪ್ರಶಸ್ತಿ ಸಮಾರಂಭದ ವೇಳೆ ವಿಶ್ವ ಮಟ್ಟದಲ್ಲಿ ತಮಿಳುನಾಡಿನ ದಂಪತಿ ಬಗ್ಗೆ ಚರ್ಚೆಯಾಗಿತ್ತು. ಯಾಕಂದ್ರೆ ಆ ದಂಪತಿ ಮತ್ತು ಆನೆ ನಡುವಿನ ಬಾಂಧವ್ಯವೇ ಹಾಗಿತ್ತು. ಹೀಗಾಗೇ ನೈಜ ಘಟನೆ ಆಧಾರಿತ ‘ದಿ ಎಲೆಫೆಂಟ್ ವಿಸ್ಪರರ್ಸ್’(The Elephant Whisperers) ಸಾಕ್ಷ್ಯ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಲಭಿಸಿತ್ತು. ಈಗ ಇದೇ ಮಾದರಿಯ ಹಾಗೂ ಮದುಮಲೈನ ಬೆಳ್ಳಿ ಮತ್ತು ಬೊಮ್ಮನ್​ ದಂಪತಿ ಕಥೆಗಿಂತಲು ಬಲು ರೋಚಕ ಎನಿಸುವ ಘಟನೆ ನಡೆದಿದೆ.  ಚಾಮರಾಜನಗರ ಜಿಲ್ಲೆಯ ಬಂಡೀಪುರ ಅಭಯಾರಣ್ಯದ ರಾಮಪುರ ಆನೆ ಶಿಬಿರದಲ್ಲಿ(Rampura Elephant Camp) ದಿ ಎಲೆಫೆಂಟ್ ವಿಸ್ಪರರ್ಸ್ ಸಿನಿಮಾವನ್ನು ಹೋಲುವ ಘಟನೆ ನಡೆದಿದೆ. ಅನಾಥ ಹೆಣ್ಣು ಮರಿ ಆನೆಗೆ ದಂಪತಿ ಪೋಷಣೆ ಮಾಡುತ್ತಿದ್ದಾರೆ.

ಅಪರೂಪದಲ್ಲಿ ಅಪರೂಪ ಎನ್ನುವಂತಹ ಬಾಂಧವ್ಯಕ್ಕೆ ಚಾಮರಾಜನಗರ ಜಿಲ್ಲೆಯ ಬಂಡೀಪುರ ಅಭಯಾರಣ್ಯದ ರಾಮಪುರ ಆನೆ ಬಿಡಾರ ಸಾಕ್ಷಿಯಾಗಿದೆ. ಹೆತ್ತ ತಾಯಿಯಿಂದ ಬೇರೆಯಾದ ಮರಿ ಆನೆಗೆ ಕಾವಾಡಿ ಕುಟುಂಬವೊಂದು ತಂದೆ ತಾಯಿಯಂತೆ ಪೋಷಣೆ ಮಾಡುತ್ತಿದೆ. ಆನೆ ಮರಿ ಹುಟ್ಟಿದ ಏಳೇ ದಿನಕ್ಕೆ ತಾಯಿಯಿಂದ ಬೇರ್ಪಟ್ಟಿದ್ದು ಏಳು ದಿನದ ಮಗುವಿನಿಂದಲೇ ಈ ದಂಪತಿ ಆನೆ ಮರಿಯನ್ನು ಸಾಕುತ್ತಿದ್ದಾರೆ. ತಾಯಿ ಆನೆಯಿಂದ ಬೇರ್ಪಟ್ಟ ಮರಿ ಆನೆಗೆ ಕಾವಾಡಿ ರಾಜು ಪೋಷಕರಾಗಿದ್ದಾರೆ. ಹೆತ್ತ ಮಗುವಂತೆ ಪಾಲನೆ ಪೋಷಣೆ ಮಾಡುತ್ತಿದ್ದಾರೆ. ಅನಾಥ ಹೆಣ್ಣು ಆನೆಗೆ ಈ ದಂಪತಿ ಆಸರೆಯಾಗಿದ್ದಾರೆ.

ಕಾವಾಡಿ ರಾಜು ಮತ್ತು ರಮ್ಯ ದಂಪತಿ 7 ತಿಂಗಳ ಹೆಣ್ಣು ಆನೆ ವೇದಾಳನ್ನ ಸ್ವಂತ ಮಗುವಿನಂತೆ ಸಾಕಿ ಸಲಹುತ್ತಿದ್ದಾರೆ. ಅನಾಥ ಆನೆ ವೇದ ಅರೆಕ್ಷಣವು ರಾಜು ಹಾಗೂ ಆತನ ಪತ್ನಿಯನ್ನ ಬಿಟ್ಟಿರಲಾರದು. ಎಲ್ಲಿ ಹೋದರೂ ಜೊತೆಗೇ ಹೋಗುತ್ತೆ. ಸದಾ ಸೀರೆಗೆ ಗಂಟಾಕಿಕೊಂಡಂತೆ ಅವರೊಂದಿಗೆಯೇ ಬದುಕುತ್ತಿದೆ. ವೇದ ಹುಟ್ಟಿದ 7 ದಿನಕ್ಕೆ ತಾಯಿಯಿಂದ ದೂರವಾಗಿದೆ. ಆಗಿನಿಂದಲು ಮರಿ ಹೆಣ್ಣಾನೆ ಪಾಲಿಗೆ ಕಾವಾಡಿ ದಂಪತಿಯೇ ತಂದೆ ತಾಯಿ. ಕಾವಾಡಿ ರಾಜುರನ್ನ ನೋಡದೆ ಹೋದ್ರೆ ಚಿಕ್ಕ ಮಕ್ಕಳಂತೆ ವೇದ ಗಲಾಟೆ ಮಾಡ್ತಾಳೆ. ಪ್ರತಿ ದಿನ 12 ಲೀಟರ್ ಹಾಲು ಕುಡಿಯುವ ವೇದ, ಕಾವಾಡಿ ದಂಪತಿಯ ಮುದ್ದು ಕೂಸಾಗಿದೆ. ದಂಪತಿಗಳ ನಿಸ್ವಾರ್ಥ ಸೇವೆಗೆ ಬಂಡಿಪುರ ಅರಣ್ಯ ಅಧಿಕಾರಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಮರಿಯಾನೆ ಪೋಷಣೆಗೆ ಬೇಕಾದ ಆರ್ಥಿಕ ಸಹಾಯವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ.

suddiyaana