ಈ ಮೊಟ್ಟೆ ತಿಂದ್ರೆ ಆಯಸ್ಸು ಹೆಚ್ಚಾಗುತ್ತೆ? – ಬ್ಲಾಕ್ ಎಗ್ ಬಗ್ಗೆ ನಿಮ್ಗೆ ಗೊತ್ತಾ?
ಈ ಪ್ರಕೃತಿ ಒಂದು ವಿಸ್ಮಯ ಜಗತ್ತು. ಇಲ್ಲಿನ ಪ್ರತಿಯೊಂದು ಸೃಷ್ಟಿಯೂ ಅಚ್ಚರಿ ಅದ್ಭುತಗಳಿಂದ ಕೂಡಿದೆ. ಒಂದೊಂದು ಜೀವಿಯ ಚಟುವಟಿಕೆಯೂ ಒಂದಕ್ಕಿಂತ ಒಂದು ಭಿನ್ನ. ಒಂದಕ್ಕಿಂತ ಒಂದು ಸೊಗಸು. ಇನ್ನು ಪ್ರಪಂಚದಲ್ಲಿ ಅನೇಕ ಸಂಗತಿಗಳು ನಮ್ಮನ್ನು ಬೆರಗು ಮೂಡಿಸುತ್ತಿರುತ್ತದೆ. ಅವುಗಳಲ್ಲಿ ಈ ಕಪ್ಪು ಮೊಟ್ಟೆಯೂ ಕೂಡ ಒಂದು. ಈ ಮೊಟ್ಟೆಯನ್ನು ತಿನ್ನೋದಕ್ಕೆಂದೇ ಅನೇಕ ರಾಷ್ಟ್ರಗಳಿಂದ ಆಗಮಿಸುತ್ತಾರಂತೆ!
ಪ್ರಪಂಚದಾದ್ಯಂತ ಬಹುತೇಕರು ಮೊಟ್ಟೆಯಿಂದ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಸೇವಿಸುತ್ತಾರೆ. ಕೆಲವರಿಗೆ ಊಟದ ಜೊತೆ ಏನಾದರೊಂದು ಮಾಂಸಹಾರ ಬೇಕೆ ಬೇಕು. ಹೀಗಾಗಿ ಬೇಯಿಸಿದ ಮೊಟ್ಟೆ, ಆಮ್ಲೆಟ್ ಮಾಡಿಕೊಂಡು ಊಟ ಮಾಡುತ್ತಾರೆ. ಆದರೆ ಜಪಾನ್ ನ ಈ ಮೊಟ್ಟೆಯನ್ನ ತಿನ್ನಲು ವಿವಿಧ ದೇಶದ ಜನರು ಬರುತ್ತಾರಂತೆ.
ಇದನ್ನೂ ಓದಿ: ಈ ಜಾಗ ಎಷ್ಟು ಸುಂದರವೋ ಅಷ್ಟೇ ಭಯಾನಕ…! “ರೂಪಕುಂಡ” ರಹಸ್ಯವೇನು ಗೊತ್ತಾ…?
ಜಪಾನಿನಲ್ಲಿ ಒವಾಕುಡಾನಿ ಎಂಬ ಹೆಸರಿನ ದೊಡ್ಡ ಕುದಿಯುವ ಕಣಿವೆ ಇದೆ. ಇದು ಹಕೋನ್ ಪರ್ವತದ ಮೇಲೆ ನೆಲೆಗೊಂಡಿದೆ. 3000 ವರ್ಷಗಳ ಹಿಂದೆ ಜ್ವಾಲಾಮುಖಿಯ ಸ್ಫೋಟದಿಂದಾಗಿ ಈ ಕಣಿವೆ ರೂಪುಗೊಂಡಿತು. ಇಲ್ಲಿ ಎಷ್ಟು ಬಲವಾದ ಸ್ಫೋಟ ಸಂಭವಿಸಿದೆ ಎಂದರೆ ಇಂದಿಗೂ ಈ ಪ್ರದೇಶದಲ್ಲಿ ಕುದಿಯುವ ನೀರಿನ ಸಣ್ಣ ಕೊಳಗಳಿವೆ. ಇದರಲ್ಲಿ ಕೋಳಿ ಮೊಟ್ಟೆಗಳನ್ನು ಬೇಯಿಸಲಾಗುತ್ತದೆ. ಈ ಕೊಳದಲ್ಲಿ ಮೊಟ್ಟೆಗಳನ್ನು ಬೇಯಿಸಿದರೆ ಬಿಳಿ ಬಣ್ಣದಿಂದ ಕಪ್ಪು ಬಣ್ಣಕ್ಕೆ ತಿರುಗುತ್ತೆ. ಹೀಗಾಗಿ ಜಪಾನಿನ ಬ್ಲಾಕ್ ಎಗ್ ತುಂಬಾ ಫೇಮಸ್ ಆಗಿದ್ದು, ಇದನ್ನ ತಿನ್ನೋಕ್ಕೆಂದೇ ಜನರು ಅಲ್ಲಿಗೆ ಹೋಗುತ್ತಾರೆ.
ಮೊಟ್ಟೆಯನ್ನು ಬೇಯಿಸಿದಾಗ ಅದರ ಬಣ್ಣ ಬದಲಾಗೋದಿಲ್ಲ. ಆದರೆ ಜಪಾನ್‌ನಲ್ಲಿ ಮೊಟ್ಟೆಗಳನ್ನು ಬೇಯಿಸಿದಾಗ ಅವು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಇದು ಎಲ್ಲರನ್ನೂ ಆಶ್ಚರ್ಯ ಪಡುವಂತೆ ಮಾಡಿದೆ. ಈ ಮೊಟ್ಟೆಗೆ ಕುರೋ-ತಮಾಗೊ, ಜಪಾನ್ ಕಪ್ಪು ಮೊಟ್ಟೆ ಅಂತಾ ಕರೆಯಲಾಗುತ್ತದೆ.
ಜಪಾನಿನ ಜನರು ಒವಾಕುಡಾನಿ ಕಣಿವೆಯ ಕುದಿಯುವ ನೀರಿನಲ್ಲಿ ಕೋಳಿ ಮೊಟ್ಟೆಯನ್ನು ಬೇಯಿಸುತ್ತಾರೆ. ಈ ಕಾರಣದಿಂದಾಗಿ ಮೊಟ್ಟೆಗಳು ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಒವಾಕುಡಾನಿ ಕುದಿಯುವ ನೀರಿನಲ್ಲಿ ಬೇಯಿಸಿದ ಈ ಕಪ್ಪು ಮೊಟ್ಟೆಗಳನ್ನು ತಿಂದರೆ ಆಯಸ್ಸು ಇನ್ನೂ 7-8 ವರ್ಷ ಹೆಚ್ಚಾಗುತ್ತದೆ ಅಂತಾ ಅಲ್ಲಿನ ಜನರು ನಂಬುತ್ತಾರೆ. ಹೀಗಾಗಿ ನಾನಾ ಭಾಗಗಳಿಂದ ಜನರು ಆಗಮಿಸಿ ಬ್ಲಾಕ್ ಎಗ್ ಅನ್ನ ತಿನ್ನುತ್ತಾರೆ.
ಮೊಟ್ಟೆಗಳನ್ನು ದೊಡ್ಡ ಲೋಹದ ಕ್ರೇಟ್‌ನಲ್ಲಿ ತುಂಬಿಸಿ ಒಂದು ಗಂಟೆಗಳ ಕಾಲ ನೀರಿನಲ್ಲಿ ಹಾಕಲಾಗುತ್ತದೆ. ನೀರಿನ ತಾಪಮಾನವು ಸುಮಾರು 80 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಈ ನೀರಿನಲ್ಲಿ ಮೊಟ್ಟೆಗಳನ್ನು 15 ನಿಮಿಷಗಳ ಕಾಲ ಬೇಯಿಸಲಾಗುತ್ತದೆ. ಈ ಮೊಟ್ಟೆಯನ್ನು ಬೇಯಿಸಿದ ನಂತರ ಅದರ ಮೇಲ್ಬಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಆದರೆ ಒಳಭಾಗ ಮಾಮೂಲಿ ಬಣ್ಣದಂತೆ ಇರುತ್ತದೆ.
ಇನ್ನು ಬೇಯಿಸಿದ ಈ ಮೊಟ್ಟೆಗೆ 20, 30 ರೂಪಾಯಿ ಅಂತಾ ನೀವು ಅಂದುಕೊಂಡಿರಬಹುದು. ಆದರೆ ನಿಮ್ಮ ಊಹೆ ತಪ್ಪು. ಬ್ಲಾಕ್ ಎಗ್ ನ ಕೊಂಚ ದುಬಾರಿಯಾಗಿದೆ. 5 ಮೊಟ್ಟೆಗೆ 300 ರೂಪಾಯಿ ನಿಗಧಿಪಡಿಸಲಾಗಿದೆ.
ಮೊಟ್ಟೆ ಕೋಳಿಯದ್ದಾಗಿದ್ದು ಅದರಲ್ಲಿ ಯಾವುದೇ ವಿಶೇಷತೆ ಇಲ್ಲದೇ ಇದ್ದರೂ ಹೇಗೆ ಕಪ್ಪಾಗುತ್ತದೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕೆ ಕಾರಣ ನೀರಿನಲ್ಲಿರುವ ಸಲ್ಫೈಡ್ ಅಂಶ. ಸರೋವರದ ನೀರಿನಲ್ಲಿ ಸಲ್ಫರ್ ಡೈಆಕ್ಸೈಡ್ ಮತ್ತು ಹೈಡ್ರೋಜನ್ ಸಲ್ಫೈಡ್ ರೂಪುಗೊಳ್ಳುತ್ತವೆ. ಈ ನೀರು ಮೊಟ್ಟೆಯ ಚಿಪ್ಪನ್ನು ಸಂಧಿಸಿದಾಗ ಅದು ಕಪ್ಪು ಬಣ್ಣಕ್ಕೆ ತಿರುಗುತ್ತದೆ. ಅಷ್ಟೇ ಅಲ್ಲದೇ ಈ ಮೊಟ್ಟೆ ಸಲ್ಫರ್ ವಾಸನೆ ಬರುತ್ತದೆ. ರುಚಿ ಕೂಡ ಅದೇ ಆಗುತ್ತದೆ. ಹೀಗಾಗಿ ಅನೇಕ ಜನರು ಅಲ್ಲಿಗೆ ಭೇಟಿ ನೀಡಲು ಮತ್ತು ಈ ಮೊಟ್ಟೆಗಳನ್ನು ತಿನ್ನಲು ಬರುತ್ತಾರೆ.