ಹಮಾಸ್‌ ಉಗ್ರರನ್ನು ನಿರ್ನಾಮ ಮಾಡಲು ಹೊರಟ ಇಸ್ರೇಲ್ – ಗಾಜಾ ನಗರವನ್ನೇ ವಿಭಜಿಸಿದ ಸೇನೆ!

ಹಮಾಸ್‌ ಉಗ್ರರನ್ನು ನಿರ್ನಾಮ ಮಾಡಲು ಹೊರಟ ಇಸ್ರೇಲ್ – ಗಾಜಾ ನಗರವನ್ನೇ ವಿಭಜಿಸಿದ ಸೇನೆ!

ಹಮಾಸ್‌ ಹಾಗೂ ಇಸ್ರೇಲ್‌ ನಡುವಿನ ಕದನ ತೀವ್ರ ಸ್ವರೂಪ ಪಡೆದುಕೊಂಡಿದೆ. ಹಮಾಸ್‌ ಉಗ್ರರನ್ನು ನಿರ್ನಾಮ ಮಾಡುವುದಾಗಿ ಪಣ ತೊಟ್ಟಿರುವ ಇಸ್ರೇಲ್‌  ಗಾಜಾಪಟ್ಟಿ ಮೇಲೆ ದಾಳಿಯನ್ನು ಮುಂದುವರಿಸಿದೆ. ಈ ನಡುವೆಯೇ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಗಾಜಾ ನಗರವನ್ನು ಎರಡು ಭಾಗಗಳಾಗಿ ವಿಭಜಿಸಿರುವುದಾಗಿ ಇಸ್ರೇಲ್ ಸೇನೆ ಘೋಷಣೆ ಮಾಡಿದೆ.

ಈ ಸಂಬಂಧ ಪ್ರಕಟಣೆ ಹೊರಡಿಸಿರುವ ಇಸ್ರೇಲ್‌ ಸೇನೆ, ಇದು ಅತ್ಯಂತ ಪ್ರಮುಖ ಘಟ್ಟ. ನಾವು ಇನ್ನಷ್ಟು ದಾಳಿ ಮಾಡಲಿದ್ದೇವೆ ಎಂದು ಪ್ರಕಟಿಸಿದೆ. ಈಗಾಗಲೇ ದಕ್ಷಿಣ ಗಾಜಾ ಪ್ರಾಂತ್ಯವನ್ನು ತಲುಪಿರುವ ಐಡಿಎಫ್  ಮುಂದಿನ 48 ಗಂಟೆಯಲ್ಲಿ ಉತ್ತರ ದಿಕ್ಕಿನಿಂದಲೂ ಗಾಜಾವನ್ನು ಪ್ರವೇಶಿಸುವ ಸಾಧ್ಯತೆಯಿದೆ. ನಾವು ಗೆಲ್ಲುವವರೆಗೂ ಯುದ್ಧ ನಿಲ್ಲಿಸುವುದಿಲ್ಲ ಎಂದು ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಘೋಷಿಸಿದ್ದಾರೆ.

ಇದನ್ನೂ ಓದಿ: ಛತ್ತೀಸ್‌ಗಢದಲ್ಲಿ ಮತದಾನಕ್ಕೂ ಮುನ್ನ ಐಇಡಿ ಸ್ಫೋಟ – ಮಿಜೋರಾಂ ನಲ್ಲಿ ಕೈಕೊಟ್ಟ EVM

ಮಾಧ್ಯಮಗಳ ಜೊತೆ ಮಾತನಾಡಿದ ರಿಯರ್‌ ಅಡ್ಮಿರಲ್‌ ಡೆನಿಯಲ್‌ ಹಗರಿ, ಇಸ್ರೇಲ್ ಸೇನೆಯು ಗಾಜಾ ನಗರವನ್ನು ಸುತ್ತುವರೆದಿದೆ. ಮುತ್ತಿಗೆ ಹಾಕಿದ ನಂತರ ಉತ್ತರ ಗಾಜಾ ಮತ್ತು ದಕ್ಷಿಣ ಗಾಜಾ ಎಂದು ವಿಭಜಿಸಲಾಗಿದೆ. ಎರಡು ನಗರಗಳ ಮಧ್ಯೆ ಸಂಪರ್ಕ ಕಡಿತ ಮಾಡಲಾಗಿದೆ. ಹಮಾಸ್‌ ವಿರುದ್ಧದ ಯುದ್ಧದಲ್ಲಿ ಇದು ಮಹತ್ವದ ಹಂತ ಎಂದು ಹೇಳಿದರು. ಇಸ್ರೇಲ್‌ ಮಾಧ್ಯಮಗಳ ಪ್ರಕಾರ ಮುಂದಿನ 48 ಗಂಟೆಯಲ್ಲಿ ಇಸ್ರೇಲ್‌ ಸೇನೆ ಗಾಜಾ ನಗರದ ಮೇಲೆ ದಾಳಿ ನಡೆಸಬಹುದು ಎಂದು ತಿಳಿಸಿದೆ.

ಟರ್ಕಿಯಲ್ಲಿ ದಾಳಿ: ಹಮಾಸ್-ಇಸ್ರೇಲ್ ಯುದ್ಧದ ಪ್ರಭಾವ ಟರ್ಕಿಯಲ್ಲಿ ಕಾಣಿಸತೊಡಗಿದೆ. ಟರ್ಕಿಯಲ್ಲಿ ಪ್ಯಾಲೆಸ್ತೇನ್ ಬೆಂಬಲಿಗರು ಅಮೆರಿಕಾದ ವಾಯುನೆಲೆ ಮೇಲೆ ದಾಳಿಗೆ ಯತ್ನಿಸಿದ್ದಾರೆ. ನೂರಾರು ಸಂಖ್ಯೆಯ ಪ್ರತಿಭಟನಾಕಾರರು ಏರ್‌ಬೇಸ್‌ಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ.

ಬ್ಯಾರಿಕೇಡ್‌ಗಳನ್ನು ದಾಟಲು ಪ್ರಯತ್ನಿಸುತ್ತಾ, ಪೊಲೀಸರ ಮೇಲೆ ಕಲ್ಲು, ಕುರ್ಚಿಗಳನ್ನು ಎಸೆದಿದ್ದಾರೆ. ಉದ್ರಿಕ್ತರನ್ನು ಚದುರಿಸಲು ಪೊಲೀಸರು ಟಿಯರ್ ಗ್ಯಾಸ್, ಜಲಫಿರಂಗಿ ಬಳಸಿದ್ದಾರೆ. ಅಮೆರಿಕ ವಿದೇಶಾಂಗ ಮಂತ್ರಿ ಆಂಟನಿ ಬ್ಲಿಂಕನ್ ಅಂಕಾರಾಗೆ ಕಾಲಿಡುವ ಸಮಯದಲ್ಲೇ ಈ ಬೆಳವಣಿಗೆ ನಡೆದಿರುವುದು ವಿಶೇಷ.

Shwetha M