ಭಾರತದ ವಿಮಾನ ಜಲಸಮಾಧಿ!.. 8 ವರ್ಷಗಳ ಮಿಸ್ಟ್ರಿ ರಿವೀಲ್! –  29 ಮಂದಿ ಏನಾದ್ರು?

ಭಾರತದ ವಿಮಾನ ಜಲಸಮಾಧಿ!.. 8 ವರ್ಷಗಳ ಮಿಸ್ಟ್ರಿ ರಿವೀಲ್! –  29 ಮಂದಿ ಏನಾದ್ರು?

2016 ಜುಲೈ 22.. ಎಂಟು ವರ್ಷಗಳ ಹಿಂದೆ ಭಾರತೀಯ ವಾಯುಪಡೆಯ ಪಡೆಯ ಟ್ರಾನ್ಸ್​​ಪೋರ್ಟ್ ವಿಮಾನ AN-32 ಬೆಳಗ್ಗೆ 9.12ರ ಸುಮಾರಿಗೆ ಇದ್ದಕ್ಕಿಂತೆ ನಾಪತ್ತೆಯಾಗಿ ಬಿಡುತ್ತೆ. ಚೆನ್ನೈನಿಂದ ಅಂಡಮಾನ್​ನತ್ತ ಹೊರಟಿದ್ದ ಈ ಜೆಟ್ ಆಕಾಶ ಮಧ್ಯೆಯೇ ಮಿಸ್ ಆಗುತ್ತೆ. ಫ್ಲೈಟ್​​ನಲ್ಲಿ ಪೈಲಟ್​ ಸೇರಿದಂತೆ ಒಟ್ಟು 29 ಮಂದಿಯಿದ್ರು. ಆದ್ರೆ ಅದೇನಾಯ್ತೋ ಗೊತ್ತಿಲ್ಲ, ಜೆಟ್ ಈಸ್ ಮಿಸ್ಸಿಂಗ್. ಕೂಡಲೇ ವಿಮಾನದ ಹುಡುಕಾಟಕ್ಕೆ ಕಾರ್ಯಾಚರಣೆ ಶುರುವಾಗುತ್ತೆ. ಎಷ್ಟೇ ತಲಾಶ್ ನಡೆಸಿದ್ರೂ ವಿಮಾನದ ಸುಳಿವೇ ಸಿಗೋದಿಲ್ಲ. ಎಲ್ಲಿ ಹೋಯ್ತು? ಏನಾಯ್ತು? 29 ಮಂದಿಯ ಕಥೆಯೇನಾಯ್ತು? ಊಹುಂ..ಇದ್ಯಾವ ಪ್ರಶ್ನೆಗಳಿಗೂ ಆನ್ಸರ್ ಸಿಗಲಿಲ್ಲ. ಆದ್ರೀಗ ಬರೋಬ್ಬರಿ ಎಂಟು ವರ್ಷಗಳ ಬಳಿಕ ಆ ವಿಮಾನಕ್ಕೇನಾಯ್ತು? ವಿಮಾನದಲ್ಲಿದ್ದವರಿಗೇನಾಗಿದೆ? 2016ರ ಜುಲೈ 22ರಂದು ನಿಜಕ್ಕೂ ಆಗಿದ್ದೇನು? ಈ ಎಲ್ಲಾ ರಹಸ್ಯವೂ ಬಯಲಾಗಿದೆ. ಮಿಸ್ಟ್ರಿ ರಿವೀಲ್​​ ಆಗೋಕೆ ಇಷ್ಟು ವರ್ಷ ಯಾಕೆ ಬೇಕಾಯ್ತು? ಇವೆಲ್ಲದರ ಬಗ್ಗೆಯೂ ಅತ್ಯಂತ ಕುತೂಹಲಕಾರಿ ಇಲ್ಲಿದೆ.

ಇದನ್ನೂ ಓದಿ: ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದಿಂದ ಯತೀಂದ್ರ ಸ್ಪರ್ಧಿಸುತ್ತಾರಾ? – ಸಿಎಂ ಸಿದ್ದರಾಮಯ್ಯ ಹೇಳಿದ್ದೇನು?

2016ರ ಜುಲೈ 22ರಂದು ಬೆಳಗ್ಗೆ 8.30ಕ್ಕೆ ಸರಿಯಾಗಿ ಚೆನ್ನೈನ ತಾಂಬರನ್ ಏರ್​​ಪೋರ್ಟ್​​ನಿಂದ AN-32 ವಿಮಾನ ಟೇಕಾಫ್​ ಆಗುತ್ತೆ. 11.45ಕ್ಕೆ ಸರಿಯಾಗಿ ಈ ವಿಮಾನ ಅಂಡಮಾನ್ ನಿಕೋಬಾರ್​ನ ಪೋರ್ಟ್​​ ಬ್ಲೇರ್​​ನಲ್ಲಿ ಲ್ಯಾಂಡ್ ಆಗಬೇಕಿತ್ತು. ಆದ್ರೆ ಫ್ಲೈಟ್ ಟೇಕಾಫ್ ಆಗಿ 16 ನಿಮಿಷಗಳ ಬಳಿಕ ವಿಮಾನದ ಪೈಲೆಟ್ ಕಂಟ್ರೋಲ್​ ರೂಮ್​ಗೆ ಕೊನೆಯ ಬಾರಿಗೆ ಕಾಲ್ ಮಾಡ್ತಾರೆ. ಈ ವೇಳೆ ಎವ್ರಿತಿಂಗ್ ಈಸ್ ನಾರ್ಮಲ್ ಅಂತಾ ಇನ್​ಫಾರ್ಮ್ ಮಾಡ್ತಾರೆ. ಆ ಹೊತ್ತಿಗೆ ವಿಮಾನ ಸಮುದ್ರ ವಲಯದ ಮೇಲೆ 23,000 ಅಡಿ ಎತ್ತರದಲ್ಲಿ ಹಾರಾಡ್ತಾ ಇರುತ್ತೆ. ಚೆನ್ನೈ ಸಮುದ್ರ ತೀರದಿಂದ 280 ಕಿಲೋ ಮೀಟರ್​ ದೂರದಲ್ಲಿರುತ್ತೆ. ಆದ್ರೆ ಕೆಲ ನಿಮಿಷಗಳಲ್ಲೇ 9.12ರ ಟೈಮ್​ನಲ್ಲಿ ಇದ್ದಕ್ಕಿದ್ದಂತೆ ವಿಮಾನದ ಸಂಪರ್ಕವೇ ಕಡಿತವಾಗುತ್ತೆ. ಪೈಲಟ್ ಜೊತೆಗಿನ ಕಮ್ಯುನಿಕೇಷನ್ ಕೂಡ ಕಟ್ ಆಗುತ್ತೆ. ಕೂಡಲೇ ಇಂಡಿಯನ್​ ಏರ್​​ಫೋರ್ಸ್ ಮತ್ತು ನೌಕಾಪಡೆ ಸರ್ಚ್ ಆಪರೇಷನ್ ಆರಂಭಿಸುತ್ತೆ. ಚೆನ್ನೈನಿಂದ 280 ಕಿಲೋ ಮೀಟರ್ ದೂರದ ಸಮುದ್ರ ವಲಯದ ಸುತ್ತಮುತ್ತ ಹುಡುಕಾಟ ಶುರುವಾಗುತ್ತೆ. 11 ಹಡಗುಗಳು, ಹೆಲಿಕಾಪ್ಟರ್, ವಿಮಾನವನ್ನ ಕೂಡ ಬಳಸಿ ನಾಪತ್ತೆಯಾದ ವಿಮಾನಕ್ಕಾಗಿ ತೀವ್ರ ತಲಾಶ್ ನಡೆಸಲಾಗುತ್ತೆ. ಯಾವಾಗ ಏರ್​​ಕ್ರಾಫ್ಟ್​​ ಸಂಪರ್ಕ ಕಟ್ ಆಯ್ತೋ ಆಗಲೇ ವಿಮಾನ ಸಮುದ್ರದಲ್ಲಿ ಪತನವಾಗಿರಬಹುದು ಅನ್ನೋದು ತನಿಖಾಧಿಕಾರಿಗಳಿಗೆ ಕನ್ಫರ್ಮ್ ಆಗಿತ್ತು. ಯಾಕಂದ್ರೆ ವಿಮಾನ 23,000 ಅಡಿ ಎತ್ತರದಿಂದ ಒಮ್ಮೆಲೇ ಕೆಳಕ್ಕೆ ಕುಸಿದಿತ್ತು. ವಿಮಾನ ಕೆಳಕ್ಕೆ ಕುಸಿದಿರೋದು ರಾಡಾರ್​​​ನಲ್ಲಿ ಕೂಡ ರಿಜಿಸ್ಟರ್ ಆಗಿತ್ತು. ಹೀಗಾಗಿ ಸಮುದ್ರಕ್ಕೆ ಬಿದ್ದಿರುತ್ತೆ ಅಂತಾ ಸರ್ಚ್ ಆಪರೇಷನ್ ತೀವ್ರಗೊಳಿಸಲಾಗುತ್ತೆ. ಡೈವರ್ಸ್​​ಗಳು ಸಮುದ್ರದಾಳಕ್ಕೆ ಇಳಿದು ಹುಡುಕಾಟ ನಡೆಸ್ತಾರೆ. ಎಷ್ಟೇ ಸರ್ಚ್​ ಮಾಡಿದ್ರು ವಿಮಾನದ ಸಣ್ಣ ಅವಶೇಷ ಕೂಡ ಸಿಗೋದಿಲ್ಲ. ಅದಕ್ಕೆ ಇನ್ನೊಂದು ಪ್ರಮುಖ ಕಾರಣ ಕೂಡ ಇದೆ. ನಾಪತ್ತೆಯಾಗಿದ್ದ AN-32 ವಿಮಾನದ ಬ್ಲ್ಯಾಕ್​ ಬಾಕ್ಸ್​​ನ್ನ ಅಂಡರ್​​ವಾಟರ್ ಲೊಕೇಟರ್ ಬೀಕನ್​ಗೆ ಫಿಕ್ಸ್​ ಮಾಡಿರಲಿಲ್ಲ. ಈ ಅಂಡರ್​​ವಾಟರ್ ಲೊಕೇಟರ್ ಬೀಕನ್ ಅನ್ನೋದು ವಿಮಾನದಲ್ಲಿರೋ ಒಂದು ಎಲೆಕ್ಟ್ರಾನಿಕ್ ಸಾಧನ. ಇದ್ರಿಂದ ಎಲೆಕ್ಟ್ರಾನಿಕ್​ ಸಿಗ್ನಲ್​ಗಳು ಪಾಸ್ ಆಗ್ತಾನೆ ಇರುತ್ತೆ. ಸಮುದ್ರಕ್ಕೆ ಅಥವಾ ನೆಲದ ಮೇಲೆ ವಿಮಾನ ಕ್ರ್ಯಾಶ್ ಆದ್ರೂ ಕೂಡ ಈ ಲೊಕೇಟರ್ ಬೀಕನ್ ಕನಿಷ್ಠ ಒಂದು ತಿಂಗಳ ಕಾಲವಾದ್ರೂ​ ಸಿಗ್ನಲ್​ ರವಾನಿಸುತ್ತಲೇ ಇರುತ್ತೆ. ಎಲ್ಲಾ ವಿಮಾನಗಳಲ್ಲೂ ಕೂಡ ಬ್ಲ್ಯಾಕ್​ ಬಾಕ್ಸ್​ನ್ನ ಈ ಲೊಕೇಟರ್ ಬೀಕನ್​ಗೆ ಫಿಕ್ಸ್​ ಮಾಡಲಾಗುತ್ತೆ. ಬ್ಲ್ಯಾಕ್​ ಬಾಕ್ಸ್ ಅನ್ನೋದು ವಿಮಾನಗಳ ಅತ್ಯಂತ ಕ್ರೂಶಿಯಲ್ ಪಾರ್ಟ್. ವಿಮಾನ ಹಾರಾಟದ ವೇಳೆ ಪೈಲೆಟ್​​ಗಳು ಮತ್ತು ಕಂಟ್ರೋಲ್​ ರೂಮ್​​ ಸಿಬ್ಬಂದಿ ನಡುವಿನ ಇಡೀ ಸಂಭಾಷಣೆ ಈ ಬ್ಲ್ಯಾಕ್​​ಬಾಕ್ಸ್​​ನಲ್ಲಿ ರೆಕಾರ್ಡ್ ಆಗಿರುತ್ತೆ. ನೀವು ಗಮನಿಸಿರಬಹುದು, ವಿಮಾನ ಕ್ರ್ಯಾಶ್ ಆದಾಗಲೆಲ್ಲಾ ತನಿಖಾಧಿಕಾರಿಗಳು ಮೊದಲು ಕಲೆಕ್ಟ್ ಮಾಡೋದೆ ಬ್ಲ್ಯಾಕ್​​ ಬಾಕ್ಸ್​ನ್ನ. ಬ್ಲ್ಯಾಕ್​​ ಬಾಕ್ಸ್ ಸಿಕ್ರೆ ಸಾಕು ಅರ್ಧ ತನಿಖೆ ಮುಗಿದಂತೆಯೇ. ಯಾಕಂದ್ರೆ, ವಿಮಾನ ಕ್ರ್ಯಾಶ್ ಆಗೋ ಸಂದರ್ಭದಲ್ಲಿ ಪೈಲಟ್​​ಗಳು ವಿಮಾನಕ್ಕೆ ಏನಾಗ್ತಿದೆ? ಏನು ಎಡವಟ್ಟಾಗಿದೆ? ಎಲ್ಲಿ ಹಾರಾಡ್ತಾ ಇದ್ದೇವೆ? ವಿಮಾನವನ್ನ ಕಂಟ್ರೋಲ್​ಗೆ ತೆಗೆದುಕೊಳ್ಳೋಕೆ ಪ್ರಯತ್ನಿಸ್ತಿರೋದ್ರ ಬಗ್ಗೆ ಮಾತನಾಡ್ತಾನೆ ಇರ್ತಾರೆ. ಇವೆಲ್ಲವೂ ಬ್ಲ್ಯಾಕ್​ಬಾಕ್ಸ್​​ನಲ್ಲಿ ರೆಕಾರ್ಡ್ ಆಗುತ್ತೆ. ಹೀಗಾಗಿ ಕ್ರ್ಯಾಶ್ ಆದ ವಿಮಾನದ ಬ್ಲ್ಯಾಕ್​ ಬಾಕ್ಸ್​ನ್ನ ಕಲೆಕ್ಟ್ ಮಾಡಿ ಅದ್ರಲ್ಲಿ ದಾಖಲಾದ ಆಡಿಯೋ ರೆಕಾರ್ಡರ್​ನ್ನ ಪರಿಶೀಲಿಸ್ತಾರೆ. ಈ ಮೂಲಕ ವಿಮಾನ ಪತನವಾಗೋ ಲಾಸ್ಟ್​​ ಮೂಮೆಂಟ್​​ನಲ್ಲಿ ಏನಾಯ್ತು? ಪೈಲಟ್ ಹೇಳಿದ್ದೇನು ಅನ್ನೋದನ್ನ ಫೈಂಡ್​​ಔಟ್ ಮಾಡ್ತಾರೆ.

ಆದ್ರೆ AN-32 ವಿಮಾನಕ್ಕೆ ಏನಾಯ್ತು ಅನ್ನೋದು ಗೊತ್ತಾಗಬೇಕಾದ್ರೆ ಬ್ಲ್ಯಾಕ್​ ಬಾಕ್ಸ್​ ಸಿಗ್ಬೇಕಲ್ಲ. ಎಡವಟ್ಟಾಗಿರೋದು ಇಲ್ಲೇ ನೋಡಿ.. ಯಾವಾಗಲೂ ಸಿಗ್ನಲ್ ಪಾಸ್ ಮಾಡೋ ಲೊಕೇಟರ್ ಬೀಕನ್​ಗೆ ಈ ಬ್ಲ್ಯಾಕ್​​​ ಬಾಕ್ಸ್​​ನ್ನ ಫಿಕ್ಸ್​ ಮಾಡಲಾಗುತ್ತೆ. ಲೊಕೇಟರ್​ ಬೀಕನ್​ ಎಲ್ಲಿಂದ ಸಿಗ್ನಲ್​​ ಕಳಿಸ್ತಾ ಇದೆ ಅನ್ನೋದನ್ನ ನೋಡಿಕೊಂಡು ಮೊದಲಿಗೆ ಲೊಕೇಟರ್​ ಬೀಕನ್​ನನ್ನ ಫೈಂಡ್​ಔಟ್ ಮಾಡಿ ಬಳಿಕ ಅದ್ರಿಂದ ಬ್ಲ್ಯಾಕ್​​ಬಾಕ್ಸ್​​ನ್ನ ಕೂಡ ಕಲೆಕ್ಟ್ ಮಾಡ್ತಾರೆ.  ಆದ್ರೆ ಇಲ್ಲೇನಾಗಿದೆ, AN-32 ವಿಮಾನದ ಬ್ಲ್ಯಾಕ್​​ ಬಾಕ್ಸ್ ಈ ಲೊಕೇಟರ್​ ಬೀಕನ್​ಗೆ ಫಿಕ್ಸ್ ಆಗಿರಲಿಲ್ಲ. ಲೊಕೇಟರ್ ಬೀಕನ್ ಒಂದು ಕಡೆ ಹೋಗಿ ಬಿದ್ದಿದ್ರೆ, ಬ್ಲ್ಯಾಕ್​​ ಬಾಕ್ಸ್​ ಸಮುದ್ರದ ಇನ್ಯಾವುದೋ ಭಾಗಕ್ಕೆ ಹೋಗಿ ಬಿದ್ದಿತ್ತು. ಲೊಕೇಟರ್ ಬೀಕನ್ ಸಿಕ್ಕಿದ್ರೂ ಬ್ಲ್ಯಾಕ್​​ ಬಾಕ್ಸ್​ ಸಿಗ್ತಾ ಇರಲಿಲ್ಲ. ಹೀಗಾಗಿ ವಿಮಾನ ಎಲ್ಲಿಗೆ ಬಿತ್ತು ಅನ್ನೋದೆ ಗೊತ್ತಾಗಲಿಲ್ಲ. ಎಷ್ಟೇ ಹುಡುಕಾಡಿದ್ರೂ ಅವಶೇಷ ಸಿಗಲಿಲ್ಲ.

ಇನ್ನು ವಿಮಾನ ಎಲ್ಲಿ ಪತನವಾಗಿದೆ? ಅದ್ರ ಅವಶೇಷ ಇಷ್ಟು ವರ್ಷಗಳ ಕಾಲ ಪತ್ತೆಯಾಗದೇ ಇದ್ದಿದ್ದಕ್ಕೆ ಇನ್ನೊಂದು ರೀಸನ್ ಕೂಡ ಇದೆ. ಈ ವಿಮಾನ ಯಾವುದೇ ಸಾಮಗ್ರಿಗಳನ್ನ ಹೊತ್ತುಕೊಂಡು ಹೋಗ್ತಾ ಇರಲಿಲ್ಲ. ಏನಾದ್ರೂ ಸಾಮಗ್ರಿಗಳಿರ್ತಿದ್ರೆ ಅವುಗಳಾದ್ರೂ ಸಮುದ್ರದ ಮೇಲೆ ತೇಲ್ತಾ ಇರ್ತಿತ್ತು. ಅದನ್ನ ಪತ್ತೆ ಹಚ್ಚಿ ವಿಮಾನ ಬದ್ದಿರೋ ಲೊಕೇಷನನ್ನ ಫೈಂಡ್​ಔಟ್ ಮಾಡಬಹುದಿತ್ತು. ಆದ್ರೆ ಇಲ್ಲಿ ಅದು ಕೂಡ ಆಗಿಲ್ಲ. ಹಾಗಿದ್ರೆ ಎಂಟು ವರ್ಷಗಳ ಬಳಿಕ ವಿಮಾನದ ಅವಶೇಷ ಸಿಕ್ಕಿದ್ದು ಹೇಗೆ? AN-32 ಮಿಸ್ಟ್ರಿ ರಿವೀಲ್ ಆಗಿದ್ದು ಹೇಗೆ ಅನ್ನೋ ಪಶ್ನೆ ನಿಮ್ಮಲ್ಲಿರಬಹುದು. ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ಅಂಡರ್​​ನಲ್ಲಿ ಬರೋ ರಾಷ್ಟ್ರೀಯ ಸಾಗರ ತಂತ್ರಜ್ಞಾನ ಸಂಸ್ಥೆ ಸಮುದ್ರಕ್ಕೆ ಕ್ರ್ಯಾಶ್​​ ವಿಮಾನವನ್ನ ಪತ್ತೆ ಹಚ್ಚೋದಕ್ಕಾಗಿ ಬಂಗಾಳ ಕೊಲ್ಲಿ ಸಮುದ್ರ ಭಾಗದಲ್ಲಿ ಆಳ ಸಮುದ್ರದ ಅನ್ವೇಷಣೆಗಿಳಿಯುತ್ತೆ. ಇದಕ್ಕಾಗಿ ಸಮುದ್ರದೊಳಗೆ ಸಂಚರಿಸೋ ವಿಶೇಷ ವಾಹನವೊಂದನ್ನ ಕೂಡ ಸಿದ್ಧಪಡಿಸಲಾಗುತ್ತೆ. ಸಮುದ್ರದ ಸುಮಾರು 3,400 ಮೀಟರ್ ಆಳದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನ ಬಳಸಿ, ನೀರಿನಾಳದಲ್ಲಿ ಫೋಟೋ ತೆಗೆಯುವ ಕ್ಯಾಮರಾದ ಮೂಲಕ ಸಮುದ್ರದಾಳದ ಹೈ ರೆಸಲ್ಯೂಷನ್ ಫೋಟೋಗಳನ್ನ ತೆಗೆಯಲಾಗುತ್ತೆ. ಈ ವೇಳೆ ಚೆನ್ನೈ ತೀರದಿಂದ 310 ಕಿಲೋ ಮೀಟರ್ ದೂರದಲ್ಲಿ ಸಮುದ್ರದೊಳಗೆ ವಿಮಾನದ ಪ್ಲೇ ಲೋಡ್ ಮತ್ತು ಇಡೀ ವಿಮಾನದ ಅವಶೇಷದ ಚಿತ್ರ ಕೂಡ ಕ್ಯಾಮರಾದಲ್ಲಿ ಕ್ಯಾಪ್ಚರ್ ಆಗುತ್ತೆ. ಈ ಫೋಟೋಗಳನ್ನ ಕಂಪ್ಲೀಟ್ ಆಗಿ ಅನಾಲಿಸಿಸ್ ಮಾಡಲಾಗುತ್ತೆ. ಆಗ ಇದು 2016ರಲ್ಲಿ ನಾಪತ್ತೆಯಾದ AN-32 ವಿಮಾನದ ಅವಶೇಷ ಅನ್ನೋದು ಕನ್ಫರ್ಮ್ ಆಗುತ್ತೆ. ಯಾಕಂದ್ರೆ ಅವಶೇಷ ಸಿಕ್ಕ ಜಾಗದಲ್ಲಿ ಇನ್ಯಾವುದೇ ವಿಮಾನಗಳು ಇದುವರೆಗೂ ಕ್ರ್ಯಾಶ್ ಆಗಿಲ್ಲ. ಹೀಗಾಗಿ ಈಗ ಪತ್ತೆಯಾಗಿರೋ ಅವಶೇಷ AN-32 ವಿಮಾನದ್ದೇ ಅನ್ನೋ ತೀರ್ಮಾನಕ್ಕೆ ಭೂ ವಿಜ್ಞಾನ ಸಚಿವಾಲಯ ಬಂದಿದೆ.

ಆದ್ರೆ ಅಂದು ವಿಮಾನ ಪತನವಾಗೋಕೆ ಕಾರಣ ಏನು ಅನ್ನೋದು ಇನ್ನೂ ಕೂಡ ಗೊತ್ತಾಗಿಲ್ಲ. ಯಾಕಂದ್ರೆ ಬ್ಲ್ಯಾಕ್ ಬಾಕ್ಸೇ ಸಿಕ್ಕಿಲ್ಲ. ಈಗ ಬ್ಲ್ಯಾಕ್ ಬಾಕ್ಸ್​​ ಸಿಕ್ಕಿದ್ರೂ ಅದು ವರ್ಕ್​ ಆಗಬಹುದು ಅನ್ನೋ ಗ್ಯಾರಂಟಿಯೂ ಇಲ್ಲ. ಯಾಕಂದ್ರೆ ವಿಮಾನ ಮುಳುಗಿ 8 ವರ್ಷಗಳೇ ಆಯ್ತಲ್ಲಾ. ಹಾಗಂತಾ ರಕ್ಷಣಾ ಸಚಿವಾಲಯ ಮಾತ್ರ ಇನ್ನೂ ಕೂಡ ಕೇಸ್​​ಗೆ ಕಂಪ್ಲೀಟ್​​ ಕಂಕ್ಲೂಷನ್ ಕೊಟ್ಟಿಲ್ಲ. AN-32 ವಿಮಾನದ ಪತನಕ್ಕೆ ನಿಖರ ಕಾರಣ ಏನು ಅನ್ನೋದನ್ನ ಪತ್ತೆ ಹಚ್ಚೋಕೆ ಇನ್ನಷ್ಟು ತನಿಖೆ ನಡೆಸೋಕೆ ಮುಂದಾಗಿದೆ. ಯಾಕಂದ್ರೆ ಈ ವಿಮಾನ ವಾಯುಪಡೆಗೆ ಸೇರಿದ್ದಾಗಿತ್ತು. ಹೀಗಾಗಿ ಆಲ್​ ವೆದರ್​ ಕಂಡೀಷನ್ ಅಂದ್ರೆ ಎಲ್ಲಾ ಮಾದರಿಯ ಹವಾಮಾನದಲ್ಲೂ ಹಾರಾಡುವ ಸಾಮರ್ಥ್ಯ ಹೊಂದಿತ್ತು. ಇಷ್ಟಾದ್ರೂ ಫ್ಲೈಟ್ ಕ್ರ್ಯಾಶ್ ಆಗಿದ್ದು ಹೇಗೆ ಅನ್ನೋದು ಗೊತ್ತಾಗ್ಬೇಕಲ್ವಾ? ಜೊತೆಗೆ ವಿಮಾನದಲ್ಲಿದ್ದ ಎಲ್ಲಾ 29 ಮಂದಿ ಕೂಡ ಮೃತಪಟ್ಟಿದ್ದಾರೆ. ಅವರಿಗೂ ಅಂದು ಏನಾಯ್ತು ಅನ್ನೋ ಬಗ್ಗೆ ಒಂದು ಕ್ಲ್ಯಾರಿಟಿ ಸಿಗ್ಬೇಕಲ್ಲ. ಕುಟುಂಬಸ್ಥರಿಗೆ ಉತ್ತರ ನೀಡೋದು ಸರ್ಕಾರದ ಜವಾಬ್ದಾರಿಯಾಗಿರುತ್ತೆ. ಹೀಗಾಗಿ ರಕ್ಷಣಾ ಇಲಾಖೆ ಈ ಬಗ್ಗೆ ಇನ್ನಷ್ಟು ತನಿಖೆ ನಡೆಸೋಕೆ ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ವಿಮಾನದ ಕ್ರ್ಯಾಶ್ ರಹಸ್ಯ ಬಯಲಾಗೋ ಕಾದು ನೋಡ್ಬೇಕಿದೆ.

Shwetha M