ಎಟಿಎಂನಿಂದ ಹಣ ಡ್ರಾ ಮಾಡಿದ್ರೂ ಅಕೌಂಟ್ನಲ್ಲಿ ಹಣ ಕಟ್ ಆಗಲ್ಲ! – ಖತರ್ನಾಕ್ ಕಳ್ಳರ ತಂತ್ರಕ್ಕೆ ಬ್ಯಾಂಕ್ ಅಧಿಕಾರಿಗಳೇ ಶಾಕ್
ಬೆಂಗಳೂರು: ಕಳ್ಳರು ಎಲ್ಲೆಲ್ಲಾ ಕೈಚಳಕ ತೋರಿಸುತ್ತಾರೆ ಅಂತಾ ಹೇಳಲು ಸಾಧ್ಯವಿಲ್ಲ. ಸಾಮಾನ್ಯರಂತೆ ಓಡಾಡುತ್ತಿದ್ದಂತೆ ತಮ್ಮ ಕೈಚಳಕ ತೋರಿಸಿ, ಸಿಕ್ಕಿದ್ದನ್ನೆಲ್ಲಾ ಬಾಚಿಕೊಂಡು ಹೋಗುತ್ತಾರೆ. ಇನ್ನು ಎಟಿಎಂ ಬಳಿಯಂತೂ ಕಳ್ಳರು ಯಾರು ಹಣ ಡ್ರಾ ಮಾಡಿ ಹೊರಗೆ ಬರುತ್ತಾರೆ ಅಂತಾ ಕಾಯ್ತಾರೆ. ಆದ್ರೆ ಇಲ್ಲೊಂದು ಖತರ್ನಾಕ್ ಗ್ಯಾಂಗ್ ತನ್ನ ಕರಾಮತ್ತು ತೋರಿಸಿದೆ. ಬ್ಯಾಂಕ್ ಅಕೌಂಟ್ನಿಂದ ಹಣ ಕಡಿತಗೊಳ್ಳದಂತೆ ಎಟಿಎಂನಿಂದ ಹಣ ಡ್ರಾ ಮಾಡಿದ್ದಾರೆ. ಇವರ ತಂತ್ರಕ್ಕೆ ಬ್ಯಾಂಕ್ ಅಧಿಕಾರಿಗಳೇ ದಿಗ್ಭ್ರಾಂತರಾಗಿದ್ದಾರೆ.
ಘಟನೆಯ ವಿವರ..
ಬೆಂಗಳೂರಿನ ಟಿ ದಾಸರಹಳ್ಳಿಯ ತುಮಕೂರು ಮುಖ್ಯರಸ್ತೆಯಲ್ಲಿರುವ ಸಹಕಾರಿ ಬ್ಯಾಂಕ್ ಎಟಿಎನಲ್ಲಿ ಈ ಘಟನೆ ನಡೆದಿದೆ. ಈ ಸಂಬಂಧ ಬ್ಯಾಂಕ್ ವ್ಯವಸ್ಥಾಪಕರು ಪೊಲೀಸರಿಗೆ ದೂರು ನೀಡದ ಬಳಿಕ ಘಟನೆ ಬೆಳಕಿಗೆ ಬಂದಿದೆ. ಎಟಿಎಂನಲ್ಲಿ ಹಣ ಡ್ರಾ ಮಾಡುವಾಗ ಖತರ್ನಾಗ್ ಕಳ್ಳರು ತಮ್ಮ ಕೈಚಳಕ ತೋರಿಸಿದ್ದಾರೆ. ಬ್ಯಾಂಕ್ ಅಕೌಂಟ್ನಿಂದ ಹಣ ಕಡಿತಗೊಳ್ಳದಂತೆ ಕಳ್ಳರು ಎಟಿಎಂನಿಂದ ಹಣ ಡ್ರಾ ಮಾಡಿದ್ದಾರೆ. ಈ ವಿಚಾರ ತಿಳಿದ ಪೊಲೀಸರು ಹಾಗೂ ಬ್ಯಾಂಕ್ ಸಿಬ್ಬಂದಿ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ವಿಮಾನದ ಶೌಚಾಲಯದಲ್ಲಿ ಬಾಂಬ್ ಇರುವ ಶಂಕೆ – ಪರಿಶೀಲನೆ ನಡೆಸಿದಾಗ ಅಧಿಕಾರಿಗಳಿಗೆ ಸಿಕ್ಕಿದ್ದು ಅಡಲ್ಟ್ ಡೈಪರ್!
ಹಣ ಎಗರಿಸಲು ಕಳ್ಳರು ಮಾಡಿದ್ದೇನು?
ಕಳ್ಳರು ಹಣ ಎಗರಿಸಲು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಎಟಿಎಂನಿಂದ ಹಣ ಬರುತ್ತಿರುವ ಸರಿಯಾದ ಸಮಯದಲ್ಲಿ ಎಟಿಎಂ ಯಂತ್ರದ ವೈರ್ ಗಳನ್ನು ಅನ್ ಪ್ಲಗ್ ಮಾಡಿದ್ದಾರೆ. ಇದರಿಂದ ಬ್ಯಾಂಕ್ ಖಾತೆಯಲ್ಲಿ ಹಣ ಕಡಿತಗೊಳ್ಳದೆ, ಎಟಿಎಂನಲ್ಲಿದ್ದ ಹಣ ಮಾತ್ರ ಹೊರ ಬಂದಿದೆ. ಹಣವು ವಾಲ್ಟ್ನಿಂದ ಡಿಸ್ಪೆನ್ಸರ್ಗೆ ಉರುಳಲು ಪ್ರಾರಂಭಿಸಿದಾಗ ಎಟಿಎಂ ಯಂತ್ರದ ವೈರ್ಗಳನ್ನು ಅನ್ಪ್ಲಗ್ ಮಾಡಲಾಗಿದೆ.
ಸಿಸಿಟಿವಿಯಲ್ಲಿ ಬಯಲಾಯ್ತು ಕಳ್ಳರ ಕೈಚಳಕ!
ಎಟಿಎಂನ ಭದ್ರತಾ ಸಿಬ್ಬಂದಿ ಶೌಚಾಲಯಕ್ಕೆ ಹೋಗಿದ್ದ ವೇಳೆ ಘಟನೆ ನಡೆದಿದೆ. ಘಟನೆಯ ಸಂಪೂರ್ಣ ವಿಡಿಯೋ ಎಟಿಎಂ ಕಿಯೋಸ್ಕ್ ನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಾಗಲಗುಂಟೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಳ್ಳರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.