8 ಅಡಿ ಎತ್ತರದ ಚಿನ್ನ ಲೇಪಿತ ಸಿಂಹಾಸನದ ಮೇಲೆ ಎತ್ತಲಿದೆ ಶ್ರೀರಾಮನ ಮೂರ್ತಿ

8 ಅಡಿ ಎತ್ತರದ ಚಿನ್ನ ಲೇಪಿತ ಸಿಂಹಾಸನದ ಮೇಲೆ ಎತ್ತಲಿದೆ ಶ್ರೀರಾಮನ ಮೂರ್ತಿ

ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಕೋಟ್ಯಂತರ ಹಿಂದೂಗಳ ಕನಸು ನನಸಾಗುವ ಕಾಲ ಹತ್ತಿರವಾಗುತ್ತಿದೆ. ಅಯೋಧ್ಯೆ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಮುಂದಿನ ಜನವರಿಯಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಇದೀಗ ಅಯೋಧ್ಯೆಯ ರಾಮಮಂದಿರದಲ್ಲಿ 8 ಅಡಿ ಎತ್ತರದ ಚಿನ್ನ ಲೇಪಿತ ಅಮೃತಶಿಲೆಯ ಸಿಂಹಾಸನ ಹೊಂದಿರಲಿದೆ. ಈ ಚಿನ್ನ ಲೇಪಿತ ಸಿಂಹಾಸನದ ಮೇಲೆ ರಾಮನ ಮೂರ್ತಿ ಸ್ಥಾಪಿಸಲಾಗುತ್ತದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯ ಅನಿಲ್ ಮಿಶ್ರಾ ತಿಳಿಸಿದ್ದಾರೆ.

ಈಗಾಗಲೇ ಅಮೃತ ಶಿಲೆಯ ಸಿಂಹಾಸನವನ್ನು ರಾಜಸ್ಥಾನದ ಕುಶಲಕರ್ಮಿಗಳು ತಯಾರಿಸುತ್ತಿದ್ದು, 8 ಅಡಿ ಎತ್ತರ, 3 ಅಡಿ ಉದ್ದ ಹಾಗೂ 4 ಅಡಿ ಅಗಲ ಇರಲಿದೆ. ಡಿಸೆಂಬರ್‌ 15ರ ಒಳಗೆ ಅಯೋಧ್ಯೆ ತಲುಪಲಿದೆ. ರಾಮಮಂದಿರದ ಗರ್ಭಗುಡಿಯಲ್ಲಿ ಸಿಂಹಾಸನ ಇರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಅಯೋಧ್ಯೆ ರಾಮಮಂದಿರದ ಮೆರುಗು ಹೆಚ್ಚಿಸಲು ನಿಡ್ಡೋಡಿಯ ನಾಗಲಿಂಗ ಪುಷ್ಪ ಗಿಡಗಳ ರವಾನೆ!

ಶ್ರೀರಾಮನ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಮತ್ತು ಬೆಳ್ಳಿ ವಸ್ತುಗಳನ್ನ ದಾನ ಮಾಡಿದ್ದಾರೆ. ಟ್ರಸ್ಟ್‌ ರಚನೆಗೂ ಮೊದಲು ಮತ್ತು ನಂತರ ದಾನ ಮಾಡಿದ ಚಿನ್ನ-ಬೆಳ್ಳಿ ವಸ್ತುಗಳು, ನಾಣ್ಯಗಳು, ಇಟ್ಟಿಗೆಗಳನ್ನು ಕರಗಿಸಲಾಗುತ್ತದೆ. ಅಲ್ಲದೇ ದಾನ ಮಾಡಿದ ಚಿನ್ನ, ಬೆಳ್ಳಿ ವಸ್ತುಗಳನ್ನು ಘನೀಕರಿಸಿ, ಸುರಕ್ಷಿತವಾಗಿಡಲಾಗುತ್ತದೆ. ಪ್ರತಿಷ್ಠಿತ ಸಂಸ್ಥೆಯ ಮಾರ್ಗದರ್ಶನದಲ್ಲಿ ಈ ಎಲ್ಲ ಕೆಲಸಗಳು ನಡೆಯಲಿದೆ ಎಂದು ಮಿಶ್ರಾ ಮಾಹಿತಿ ನೀಡಿದ್ದಾರೆ.

ಮಹಾಮಸ್ತಕಾಭಿಷೇಕದ ಸಿದ್ಧತೆಯ ನಡುವೆಯೇ ರಾಮಮಂದಿರ ನಿರ್ಮಾಣ ಕಾರ್ಯ ಚುರುಕುಗೊಳಿಸಲಾಗಿದೆ. ಅಗತ್ಯಕ್ಕೆ ತಕ್ಕಂತೆ ರಾಮಮಂದಿರ ನಿರ್ಮಾಣ ಕಾರ್ಯಕ್ಕೆ ಕಾರ್ಮಿಕರ ಸಂಖ್ಯೆಯನ್ನೂ ಹೆಚ್ಚಿಸಲಾಗಿದೆ. ಡಿಸೆಂಬರ್‌ 15ರ ಒಳಗೆ ರಾಮಂದಿರದ ನೆಲ ಮಹಡಿಯನ್ನ ಸಂಪೂರ್ಣ ಸಿದ್ಧಪಡಿಸಲಾಗುತ್ತದೆ. ಇನ್ನೂ ಮೊದಲ ಅಂತಸ್ತಿನ ಕಾಮಗಾರಿ 80% ಪೂರ್ಣಗೊಂಡಿದೆ. ಗರ್ಭಗುಡಿ ನಿರ್ಮಾಣವೂ ಪೂರ್ಣಗೊಂಡಿದೆ. ಪರಿಕ್ರಮ ಮಾರ್ಗದ ನೆಲಹಾಸು ಕಾಮಗಾರಿ ಮುಗಿದಿದೆ. ಈಗ ಗೃಹ ಮಂಟಪದ ಮಹಡಿಯಲ್ಲಿ ಮಾರ್ಬಲ್ ಹಾಕುವ ಕೆಲಸ ನಡೆಯುತ್ತಿದೆ. ಮೆಟ್ಟಿಲುಗಳ ಜೊತೆಗೆ ಇತರ ಸ್ಥಳಗಳಲ್ಲಿ ನೆಲಹಾಸು ಕೆಲಸ ನಡೆಯುತ್ತಿದೆ ಎಂದು ಅವರು ವಿವರಿಸಿದ್ದಾರೆ.

Shwetha M