ರಾತ್ರಿಯಿಡೀ ನಡೆದು ವಧು ಮನೆ ಸೇರಿದ ವರ – ಕೊನೇ ಗಳಿಗೆಯಲ್ಲಿ ಆಗಿದ್ದೇನು..?

ರಾತ್ರಿಯಿಡೀ ನಡೆದು ವಧು ಮನೆ ಸೇರಿದ ವರ – ಕೊನೇ ಗಳಿಗೆಯಲ್ಲಿ ಆಗಿದ್ದೇನು..?

ಒಂಟಿ ಬದುಕಿಗೆ ತೆರೆ ಎಳೆದು ಜಂಟಿಯಾಗಿ ಬದುಕುವ ಕ್ಷಣ ಹತ್ತಿರವಾಗಿತ್ತು. ಜೀವನಕ್ಕೆ ಒಬ್ಬಳು ಸಖಿ ಸಿಗುತ್ತಾಳೆ ಅಂತಾ ಆ ಯುವಕ ಹತ್ತಾರು ಕನಸು ಕಂಡಿದ್ದ. ಮದುವೆ ದಿನ ಕೂಡ ಹತ್ತಿರ ಬಂದಿತ್ತು. ಕಲ್ಯಾಣ ಮಂಟಪಕ್ಕೆ ಹೀರೋ ಥರ ಕಾರಲ್ಲಿ ಗ್ರ್ಯಾಂಡ್ ಆಗಿ ಎಂಟ್ರಿ ಕೊಡಬೇಕು ಅಂತಾ ಎಲ್ಲಾ ತಯಾರಿಯನ್ನೂ ಮಾಡಿಕೊಂಡಿದ್ದ. ಆದ್ರೆ ಕೊನೇ ಗಳಿಗೆಯಲ್ಲಿ ಕಾಲಿನಲ್ಲೇ ಓಡಿಕೊಂಡು ಹೋಗಿ ಹಸೆಮಣೆ ಏರಿದ್ದಾನೆ. ಅದೂ ಕೂಡ ಬರೋಬ್ಬರಿ 28 ಕಿಲೋಮೀಟರ್ ನಡೆದುಕೊಂಡು ಹೋಗಿ ತಾಳಿ ಕಟ್ಟಿದ್ದಾನೆ.

ಮದುವೆ ಅಂದರೆ ತಿಂಗಳುಗಟ್ಟಲೆ ತಯಾರಿ ನಡೆಯುತ್ತೆ. ಮದುವೆ ನಿಶ್ಚಯವಾದ ದಿನದಿಂದ ತಾಳಿ ಕಟ್ಟುವ ತನಕ ಹತ್ತಾರು ಸಿದ್ಧತೆಗಳನ್ನ ಮಾಡಿಕೊಂಡಿರುತ್ತಾರೆ. ಆದರೆ ಇವರು ಯಾಕೆ ಮದುವೆ ಮನೆಗೆ ನಡೆದುಕೊಂಡು ಹೋದರು ಅಂತಾ ನಿಮಗೆ ಅನ್ನಿಸಬಹುದು. ನಿಮ್ಮ ಅನುಮಾನ ಕೂಡ ಸಹಜವೇ. ಈ ಕುಟುಂಬಸ್ಥರೂ ಕೂಡ ಮದುವೆಗೆ ಸಕಲ ತಯಾರಿಯನ್ನೂ ಮಾಡಿಕೊಂಡಿದ್ದರು. ವಧುವಿನ ಮನೆಯಲ್ಲಿ ಮದುವೆ ಆಯೋಜಿಸಿದ್ದರಿಂದ, ವರನ ಕುಟುಂಬವು ಮದುವೆಯ ಅದ್ಧೂರಿ ಮೆರವಣಿಗೆಗಾಗಿ 4 ಕಾರುಗಳನ್ನು ವ್ಯವಸ್ಥೆ ಮಾಡಿಕೊಂಡಿದ್ದರು. ಇಷ್ಟೆಲ್ಲಾ ಆದರೂ ವರ ಹಾಗೂ ಆತನ ಕುಟುಂಬದವರು ಸುಮಾರು 28 ಕಿ.ಮೀ ಅಂದರೆ ರಾತ್ರಿ ಪೂರ್ತಿ ನಡೆದು ಮರುದಿನ ಮುಂಜಾನೆ ವಧುವಿನ ಮನೆಗೆ ತಲುಪಿದ್ದಾರೆ.

ಇದನ್ನೂ ಓದಿ : ಇರಲಾರದೆ ಇರುವೆ ಬಿಟ್ಟುಕೊಂಡ ಅಜ್ಜ – ಮೊಸಳೆ ಮುಂದೆ ಬೇಕಿತ್ತಾ ಸಾಹಸ?

ಒಡಿಶಾದ ರಾಯಗಡ ಜಿಲ್ಲೆಯ ವಧುವಿನ ಗ್ರಾಮಕ್ಕೆ ಮದುವೆಗಾಗಿ ವರ ನರೇಶ್ ಪ್ರಾಸ್ಕಾ(22) ಮತ್ತು ಅವರ ಕುಟುಂಬ ಸದಸ್ಯರು 28 ಕಿಲೋಮೀಟರ್ ನಡೆದುಕೊಂಡು ಹೋಗಿದ್ದಾರೆ. ಕಲ್ಯಾಣಸಿಂಗ್‌ಪುರ ಬ್ಲಾಕ್‌ನ ಸುನಖಂಡಿ ಪಂಚಾಯಿತಿಯಿಂದ ಗುರುವಾರ ರಾತ್ರಿಯಿಡೀ ನಡೆದುಕೊಂಡು ದಿಬಳಪಾಡು ಗ್ರಾಮಕ್ಕೆ ಆಗಮಿಸಿ ಅಲ್ಲಿ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ವಿಷಯ ಏನಂದ್ರೆ ಒಡಿಶಾದಲ್ಲಿ ಚಾಲಕರ ಮುಷ್ಕರ ನಡೆಯುತ್ತಿದ್ದ ಕಾರಣದಿಂದಾಗಿ ವಾಹನ ವ್ಯವಸ್ಥೆಗೆ ತಡೆಯಾಗಿದೆ. ವಿಮೆ, ಪಿಂಚಣಿ, ಕಲ್ಯಾಣ ಮಂಡಳಿ ರಚನೆ ಮತ್ತಿತರ ಸಮಾಜ ಕಲ್ಯಾಣ ಕ್ರಮಗಳಿಗೆ ಆಗ್ರಹಿಸಿ ಚಾಲಕರ ಏಕತಾ ಮಹಾಸಂಘ ಬುಧವಾರದಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದೆ. ಇದುವೇ ಈ ವರನ ಕುಟುಂಬಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.

ಚಾಲಕರ ಮುಷ್ಕರದಿಂದಾಗಿ ಯಾವುದೇ ಸಾರಿಗೆ ಲಭ್ಯವಿರಲಿಲ್ಲ. ಹೀಗಾಗಿ ನಾವು ಹಳ್ಳಿಗೆ ತಲುಪಲು ರಾತ್ರಿಯಿಡೀ ನಡೆದಿದ್ದೇವೆ. ನಮಗೆ ಬೇರೆ ದಾರಿ ಇರಲಿಲ್ಲ ಎಂದು ವರನ ಕುಟುಂಬಸ್ಥರು ತಿಳಿಸಿದ್ದಾರೆ. ದ್ವಿಚಕ್ರ ವಾಹನಗಳಲ್ಲಿ ಮದುವೆಗೆ ಬೇಕಾದ ಸಾಮಗ್ರಿಗಳನ್ನು ಕಳುಹಿಸಲಾಗಿತ್ತು. ಎಂಟು ಮಹಿಳೆಯರು ಸೇರಿದಂತೆ ಕುಟುಂಬದ ಸುಮಾರು 30 ಸದಸ್ಯರು, ಸಂಬಂಧಿಕರು ಮತ್ತು ಸ್ನೇಹಿತರು ಕಾಲ್ನಡಿಗೆಯಲ್ಲಿ ವಧುವಿನ ಮನೆಗೆ ಹೋಗಲು ನಿರ್ಧರಿಸಿದೆವು. ಇದು ಅಸ್ಮರಣೀಯ ಅನುಭವ ಎಂದು ವರ ನರೇಶ್ ಹೇಳಿದ್ದಾರೆ. ಮಹಿಳೆಯರು ಸೇರಿದಂತೆ ವರ ಮತ್ತು ಅವರ ಕುಟುಂಬ ಸದಸ್ಯರು ರಾತ್ರಿಯಲ್ಲಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

suddiyaana