ವರನಿಗೆ ಹಣ ಎಣಿಸಲು ಬರಲಿಲ್ಲ – ಮಂಟಪದಲ್ಲೇ ಮದುವೆ ಕ್ಯಾನ್ಸಲ್!
ಮದುವೆ ಅಂದಾಗ ಅಲ್ಲಿ ಕೆಲವೊಂದು ಮನಸ್ತಾಪಗಳಿರುವುದು ಸಾಮಾನ್ಯ. ಕೆಲವೊಂದು ಕಡೆ ಮದುವೆಗಳಲ್ಲಿ ಊಟೋಪಚಾರ ಸರಿ ಇಲ್ಲ, ಮದುವೆ ಮಂಟಪದಲ್ಲಿ ವರ ಮುತ್ತು ಕೊಟ್ಟಿದ್ದಕ್ಕೆ, ಮದ್ಯಪಾನ ಮಾಡಿದಕ್ಕೆ, ಕೇಳಿದಷ್ಟು ವರದಕ್ಷಿಣೆ ಕೊಡಲಿಲ್ಲ ಎಂದು ಕಡೇ ಕ್ಷಣದಲ್ಲಿ ಮದುವೆ ರದ್ದಾಗುವುದನ್ನು ನಾವು ಕೇಳಿದ್ದೇವೆ. ಉತ್ತರಪ್ರದೇಶದ ಫರೂಖಾಬಾದ್ ಜಿಲ್ಲೆಯಲ್ಲಿ ನಡೆದ ಘಟನೆ ಕೊಂಚ ಭಿನ್ನ. ಯುವತಿಯೊಬ್ಬಳು ತಾನು ವರಿಸಬೇಕಿದ್ದ ವರನಿಗೆ ಹಣ ಎಣಿಸಲು ಬಾರದಿದ್ದಕ್ಕೆ ಮದುವೆಯನ್ನೇ ರದ್ದುಗೊಳಿಸಿದ್ದಾಳೆ.
ಇದನ್ನೂ ಓದಿ: ಮೂವರು ಮಕ್ಕಳಿಗೆ ಜನ್ಮ ನೀಡಿದರೆ ಅಧಿಕ ವೇತನ, 3 ಲಕ್ಷ ಸಹಾಯಧನ! – ಸರ್ಕಾರದಿಂದ ಬಂಪರ್ ಆಫರ್
ಹೌದು, ಉತ್ತರ ಪ್ರದೇಶದ ಫರೂಕಾಬಾದ್ ಜಿಲ್ಲೆಯ ದುರ್ಗಾಪುರ ಗ್ರಾಮದಲ್ಲಿ 3 ತಿಂಗಳ ಹಿಂದೆ ಯುವತಿ ಜೊತೆ ಬಬಿನಾ ಸಾರಾ ಗ್ರಾಮದ ಯುವಕನ ಮದುವೆ ಮಾತುಕತೆ ನಡೆದಿತ್ತು. ಇದಾದ ಬಳಿಕ ಎರಡು ಮನೆಯವರು ಹಲವು ಬಾರಿ ಭೇಟಿಯಾದ ನಂತರ ವಿವಾಹ ನಿಶ್ಚಯವಾಗಿತ್ತು. ನಂತರ ನಿಶ್ಚಿತಾರ್ಥ ಕೂಡ ನೆರವೇರಿತ್ತು. ಅಲ್ಲದೇ ಮಧ್ಯವರ್ತಿ ಯುವತಿ ಸಂಬಂಧಿಕನಾಗಿದ್ದರಿಂದ ಆತನ ಮೇಲೆ ನಂಬಿಕೆ ಇಟ್ಟು ಮದುವೆ ದಿನಾಂಕವನ್ನೂ ನಿಗದಿಪಡಿಸಲಾಗಿತ್ತು.
ನಿಗದಿತ ದಿನಾಂಕದಂದು ಮದುವೆ ಶಾಸ್ತ್ರವನ್ನು ಪ್ರಾರಂಭಿಸಲಾಗಿತ್ತು. ಆದರೆ ಮಂಟಪದಲ್ಲಿ ವರನ ನಡವಳಿಕೆ ಕಂಡ ವಧುವಿನ ಸಹೋದರನಿಗೆ ಆತ ಅನಕ್ಷರಸ್ಥ ಎಂಬ ಅನುಮಾನ ಮೂಡಿದೆ. ಈ ಅನುಮಾನವನ್ನು ಬಗೆಹರಿಸಬೇಕೆಂದು ಆತ ಮದುವೆ ಮಾಡಿಸಲು ಬಂದಿದ್ದ ಪುರೋಹಿತರನ್ನು ಕರೆಸಿ, ವರನಿಗೆ ಹಣ ನೀಡಿ ಎಣಿಸಲು ಹೇಳುವಂತೆ ಕೇಳಿಕೊಂಡಿದ್ದಾನೆ. ಆತನ ಕೋರಿಕೆಯ ಮೇರೆಗೆ ಪುರೋಹಿತರು 10 ರೂಪಾಯಿ ಮುಖಬೆಲೆಯ 30 ನೋಟುಗಳನ್ನು ವರನ ಕೈಯಲ್ಲಿ ಕೊಟ್ಟು ಎಣಿಸುವಂತೆ ಹೇಳಿದ್ದಾರೆ. ಈ ವೇಳೆ ವರ ನೋಟುಗಳನ್ನು ಎಣಿಸಲು ತಡವರಿಸಿ ಪೆಚ್ಚು ಮೋರೆ ಹಾಕಿದ್ದಾನೆ. ಬಳಿಕ ಈ ವಿಷಯವನ್ನು ಸಹೋದರ ವಧುವಿಗೆ ತಿಳಿಸಿದ್ದಾನೆ. ಈ ವಿಷಯ ತಿಳಿದ ವಧು, ಇದು ನನ್ನ ಜೀವನದ ಪ್ರಶ್ನೆಯಾಗಿದೆ. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ತಾನು ಅನಕ್ಷರಸ್ಥನನ್ನು ಯಾವುದೇ ಕಾರಣಕ್ಕೂ ಮದುವೆಯಾಗುವುದಿಲ್ಲ ಎಂದು ಪೋಷಕರ ಮುಂದೆ ಕಡ್ಡಿ ಮುರಿದಂತೆ ಹೇಳಿದ್ದಾಳೆ.
ಯುವತಿಯ ನಿರ್ಧಾರದಿಂದ ಗಾಬರಿಗೊಂಡ ವರನ ಮನೆಯವರು, ವಧುವಿನ ಮನೆಯವರೊಂದಿಗೆ ಮಾತುಕತೆ ನಡೆಸಲು ಯತ್ನಿಸಿದ್ದಾರೆ. ಇದು ಫಲ ಕೊಡದೇ ಇದ್ದಾಗ ವರನ ಕಡೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಎರಡು ಮನೆಯವರನ್ನು ಪೊಲೀಸ್ ಠಾಣೆಗೆ ಕರೆಸಿ ಹಲವು ಗಂಟೆಗಳ ಕಾಲ ರಾಜಿ ಪಂಚಾಯಿತಿ ನಡೆಸಿದರೂ ಅದು ಫಲಿಸಲಿಲ್ಲ. ಹೀಗಾಗಿ ಬಂದ ದಾರಿಗೆ ಸುಂಕವಿಲ್ಲ ಎಂದು ವರನ ಮನೆಯವರು ಹಿಂತಿರುಗಿದ್ದಾರೆ.