ರಾಜ್ಯದ ಅಭಿವೃದ್ಧಿಯನ್ನು ರಿವರ್ಸ್ ಗೇರ್‌ನಲ್ಲಿರಿಸಿದ್ದೇ 4 ತಿಂಗಳ  ಕಾಂಗ್ರೆಸ್ ಸರ್ಕಾರದ ಮಹಾನ್ ಸಾಧನೆ! – ಬಿಜೆಪಿ ಲೇವಡಿ

ರಾಜ್ಯದ ಅಭಿವೃದ್ಧಿಯನ್ನು ರಿವರ್ಸ್ ಗೇರ್‌ನಲ್ಲಿರಿಸಿದ್ದೇ 4 ತಿಂಗಳ  ಕಾಂಗ್ರೆಸ್ ಸರ್ಕಾರದ ಮಹಾನ್ ಸಾಧನೆ! – ಬಿಜೆಪಿ ಲೇವಡಿ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಾಗಿದೆ. ಇದೀಗ ರಾಜ್ಯ ಬಿಜೆಪಿ ರಾಜ್ಯದ ಅಭಿವೃದ್ಧಿಯನ್ನು ರಿವರ್ಸ್ ಗೇರ್‌ನಲ್ಲಿರಿಸಿದ್ದೇ 4 ತಿಂಗಳ “ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಮಹಾನ್ ಸಾಧನೆ ಎಂದು ಟೀಕೆ ಮಾಡಿದೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ಕಾಂಗ್ರೆಸ್‌ನ ನಾಲ್ಕು ತಿಂಗಳ ಕಳಪೆ ಆಡಳಿತದಲ್ಲಿ ಕರ್ನಾಟಕದಲ್ಲಿ ದಾಖಲೆ ಬಂದ್‌ಗಳು ನಡೆದಿವೆ ಎಂದು ಹೇಳಿ, ರಾಜ್ಯದಲ್ಲಿ ನಡೆದಿರುವ ಬಂದ್ ಗಳನ್ನು ಪಟ್ಟಿ ಮಾಡಿದೆ. ವಿದ್ಯುತ್ ದರ ಏರಿಕೆಯನ್ನು ಪ್ರತಿಭಟಿಸಿ, ಕೈಗಾರಿಕೋದ್ಯಮಿಗಳಿಂದ ಕೈಗಾರಿಕೆಗಳ ಬಂದ್, ಸ್ಟಾಲಿನ್ ಮುಲಾಜಿಗೆ ಬೇಕಾಬಿಟ್ಟಿ ನೀರು ಹರಿಸಿದ ಪರಿಣಾಮ, ಮಂಡ್ಯ ಬಂದ್ – ಬೆಂಗಳೂರು ಬಂದ್ – ಕರ್ನಾಟಕ ಬಂದ್, ಸರ್ಕಾರದ ನಿರ್ಲಕ್ಷ್ಯ ಮಿತಿಮೀರಿ ಖಾಸಗಿ ಬಸ್, ಕ್ಯಾಬ್, ಆಟೋ ಚಾಲಕ- ಮಾಲೀಕರಿಂದ ಖಾಸಗಿ ಸಾರಿಗೆ ಬಂದ್, ಚುನಾವಣೆಗೆ ಮುನ್ನ ಹೇಳಿದ್ದ ಬೊಗಳೆಗಳನ್ನು ಈಡೇರಿಸದ ಸರ್ಕಾರದ ವಿರುದ್ಧ ಕೆ.ಎಸ್.ಆರ್.ಟಿ.ಸಿ ಸಿಬ್ಬಂದಿಗಳಿಂದ ಸಾರಿಗೆ ಬಂದ್, ಅಂಗನವಾಡಿ ಸಿಬ್ಬಂದಿಗಳ ವೇತನ ವಂಚಿಸಿದ ಸರ್ಕಾರದ ‌ವಿರುದ್ಧ ಎಲ್ಲಾ ಅಂಗನವಾಡಿಗಳು ಬಂದ್, ಭದ್ರಾ ನೀರು ಪೂರೈಕೆಯ ವೈಫಲ್ಯವನ್ನು ಖಂಡಿಸಿ ದಾವಣಗೆರೆ ಬಂದ್ ಆಗಿದ್ದವು ಎಂದು ಬಿಜೆಪಿ ಪಟ್ಟಿ ಮಾಡಿದೆ.

ಇದನ್ನೂ ಓದಿ: ವಜ್ರಕ್ಕಾಗಿ ರಸ್ತೆಯಲ್ಲೆಲ್ಲಾ ಹುಡುಕಾಡಿದ ಜನ ! – ಡೈಮಂಡ್‌ ಸಿಕ್ಕ  ಖುಷಿಯಲ್ಲಿದ್ದವರಿಗೆ ಕಾದಿತ್ತು ಶಾಕ್‌!

ರಾಜ್ಯದ ಅಭಿವೃದ್ಧಿಯಂತೂ ಈಗಾಗಲೇ ಬಂದ್ ಮಾಡಿರುವ ಕಾಂಗ್ರೆಸ್ ಸರ್ಕಾರ, ತಾವು ಅಧಿಕಾರಕ್ಕೆ ಬಂದಿರುವುದೇ ಬಂದ್ ಮಾಡಿಸಲು ಎಂಬುದನ್ನು ಪದೇ ಪದೇ ಸಾಬೀತುಪಡಿಸುತ್ತಿದೆ. ಸಿದ್ದರಾಮಯ್ಯ ಅವರೇ, ನಿಮ್ಮ ಬೇಜವಾಬ್ದಾರಿಯ ಆಡಳಿತಕ್ಕೆ ರೋಸಿ ಹೋಗಿ ರಾಜ್ಯದ ರೈತರು ಬೀದಿಗಿಳಿದು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.  ಈಗಾಗಲೇ ನಿಮ್ಮ ದುರಾಡಳಿತಕ್ಕೆ ಬೇಸತ್ತು 150ಕ್ಕೂ ಹೆಚ್ಚು ರೈತರು ಸರಣಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. ನಿಮ್ಮ ಗ್ಯಾರಂಟಿ ಯೋಜನೆಗಳ ಅವಾಸ್ತವಿಕ ಅನುಷ್ಠಾನದಿಂದ ಜನರು ಬೇಸತ್ತು ಹೋಗಿದ್ದಾರೆ. ಜತೆಗೆ ಈ ಹಿಂದಿನ ಎಲ್ಲಾ ಯೋಜನೆಗಳಿಗೂ ತಿಲಾಂಜಲಿ ಇಟ್ಟು ಜನರನ್ನು ಮೂರ್ಖರನ್ನಾಗಿಸಿದ ಕಾಂಗ್ರೆಸ್ ಸರ್ಕಾರಕ್ಕೆ ಛೀಮಾರಿ ಹಾಕುತ್ತಿದ್ದಾರೆ ಎಂದು ಬಿಜೆಪಿ ಕಿಡಿಕಾರಿದೆ.

ಕಾವೇರಿ ಮಾತ್ರವಲ್ಲ, ಭದ್ರಾ ನದಿ ನಂಬಿದವರನ್ನೂ ನಿರ್ನಾಮ ಮಾಡಲು ಸಿದ್ದರಾಮಯ್ಯ ಸರ್ಕಾರ ಕಟಿಬದ್ಧವಾಗಿ ನಿಂತಿದೆ. ಭದ್ರಾ ಕಾಲುವೆಗಳಿಗೆ ಮೂವತ್ತೇ ದಿನಗಳಲ್ಲಿ ನೀರು ನಿಲ್ಲಿಸಿ ಮಧ್ಯ ಕರ್ನಾಟಕ ಭಾಗದಲ್ಲಿ ಕ್ಷಾಮ ನಿರ್ಮಾಣಕ್ಕೆ ಕಾಂಗ್ರೆಸ್ ಸರ್ಕಾರ ಮುಂದಾಗಿದೆ. ತಮ್ಮ INDIA ಮೈತ್ರಿಕೂಟಕ್ಕೆ ರೈತರು ಸೊಪ್ಪು ಹಾಕುತ್ತಿಲ್ಲ ಎಂಬ ಕಾರಣಕ್ಕಾಗಿ ಈ ರೀತಿ ರೈತರ ಮೇಲೆ ದ್ವೇಷ ಕಾರುವುದು ಅಕ್ಷಮ್ಯ. ಮಳೆಯಿಲ್ಲದೆ ಈಗಾಗಲೇ ಸೊರಗಿರುವ ರೈತರ ಸರ್ವನಾಶವೇ ಈ ಅಸಮರ್ಥ ಸರ್ಕಾರದ ಧ್ಯೇಯ ಎಂದು ಆಕ್ರೋಶ ಹೊರಹಾಕಿದೆ.

ಕರ್ನಾಟಕಕ್ಕಿದ್ದ ‘ಪವರ್ ಸರ್‌ಪ್ಲಸ್ ಸ್ಟೇಟ್’ ಹೆಗ್ಗಳಿಕೆಯನ್ನು ಕಳಚಿ ಕತ್ತಲು ರಾಜ್ಯವನ್ನಾಗಿಸುತ್ತಿರುವುದೇ ಸಿದ್ದರಾಮಯ್ಯ ಸರ್ಕಾರದ ಗ್ಯಾರಂಟಿ. ಮುಂಗಾರು ಕೈಕೊಟ್ಟು ಬರಗಾಲ ಆವರಿಸಿದೆ, ಜಲಾಶಯಗಳಲ್ಲಿ ನೀರಿಲ್ಲ, ವಿದ್ಯುತ್ ಉತ್ಪಾದನೆ ಪ್ರಮಾಣ ಸಂಪೂರ್ಣ ಕುಸಿತ ಕಂಡಿದೆ. ಇದರ ನಡುವೆ ವಿಪರೀತ ವಿದ್ಯುತ್ ದರ ಏರಿಕೆಗೆ ಬೇಸತ್ತಿದ್ದ ಕೃಷಿ, ಕೈಗಾರಿಕೆಗಳು ಇದೀಗ ಲೋಡ್ ಶೆಡ್ಡಿಂಗ್‌ನಿಂದ ತತ್ತರಿಸಿ ಹೋಗಲಿವೆ. ಒಂದು ಕಡೆ ಬರಗಾಲ ನಿರ್ವಹಣೆಯನ್ನೂ ಮಾಡುತ್ತಿಲ್ಲ. ತಮಿಳುನಾಡಿಗೆ ನೀರು ಹರಿಸುವುದನ್ನು ಬಿಡುತ್ತಿಲ್ಲ. ವಿದ್ಯುತ್ ಸಮಸ್ಯೆಗೆ ಪರಿಹಾರವನ್ನೂ ಕೈಗೊಳ್ಳುತ್ತಿಲ್ಲ. ಕರ್ನಾಟಕವನ್ನು ಹಾಳು ಮಾಡುವುದೊಂದೇ ಸಿದ್ದರಾಮಯ್ಯ ಅವರ ಸರ್ಕಾರದ ಗುರಿಯಾಗಿದೆ ಎಂದು ವಾಗ್ದಾಳಿ ನಡೆಸಿದೆ.

Shwetha M