ಗ್ಯಾರಂಟಿಗೆ ಹಣದ ಕೊರತೆ, ಸರ್ಕಾರಕ್ಕೆ ಸಾಲುತ್ತಿಲ್ಲ ಹಣ – ಸರ್ಕಾರದ ಬೊಕ್ಕಸದಲ್ಲಿ ಹಣ ಇಲ್ಲದಿದ್ದರೆ ಮುಂದೇನು?
ನುಡಿದಂತೆ ನಡೆದಿದ್ದೇವೆ ಎನ್ನುತ್ತಲೇ ಕಾಂಗ್ರೆಸ್ ಸರ್ಕಾರ ತನ್ನ ಐದೂ ಗ್ಯಾರಂಟಿಗಳನ್ನ ಜಾರಿಗೆ ತಂದಿದೆ. ಶುಕ್ರವಾರ ಶಿವಮೊಗ್ಗದಲ್ಲಿ ಯುವನಿಧಿ ಯೋಜನೆಗೆ ಚಾಲನೆ ನೀಡುವ ಮೂಲಕ ತನ್ನ ಐದನೇ ಭರವಸೆಯನ್ನೂ ಈಡೇರಿಸಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಸೇರಿದಂತೆ ಇಡೀ ಸಚಿವ ಸಂಪುಟವೇ ನೆರೆದಿತ್ತು ಅನ್ನೋದು ಮತ್ತೊಂದು ವಿಶೇಷ. ಕಾಂಗ್ರೆಸ್ ಏನೋ ತಾನು ಕೊಟ್ಟ ಮಾತನ್ನ ಉಳಿಸಿಕೊಂಡಿದೆ. ಅದ್ರಲ್ಲಿ ಎರಡು ಮಾತಿಲ್ಲ. ಆದ್ರೆ ಈ ಐದು ಗ್ಯಾರಂಟಿ ಯೋಜನೆಗಳಿಂದ ರಾಜ್ಯ ಅಭಿವೃದ್ಧಿ ಆಗುತ್ತಾ..? ಬೇರೆ ಯಾವ ಕೆಲಸಗಳೂ ನಡೆಯೋದು ಬೇಡ್ವಾ..? ಸರ್ಕಾರದ ಭೊಕ್ಕಸದಲ್ಲಿ ಎಷ್ಟು ಹಣ ಇದೆ..? ಜಾರಿಯಾಗಿರೋ ಗ್ಯಾರಂಟಿ ಯೋಜನೆಗಳ ಲಾಭ ಜನರಿಗೆ ತಲುಪಿದ್ಯಾ..? ಎಂಬ ಬಗ್ಗೆ ವಿವರಣೆ ಇಲ್ಲಿದೆ.
ಇದನ್ನೂ ಓದಿ: ಸುಮಲತಾಗೆ ಮಂಡ್ಯದ ಬಿಜೆಪಿ ಟಿಕೆಟ್ ಡೌಟ್! – ಬಿ.ವೈ. ವಿಜಯೇಂದ್ರ ಮಾತುಕತೆ ಸಾಧ್ಯತೆ
2023ರ ವಿಧಾನಸಭೆ ಚುನಾವಣೆ ಆರಂಭದಿಂದ ಈವರೆಗೂ ರಾಷ್ಟ್ರ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ವಿಷ್ಯ ಅಂದ್ರೆ ಅದು ಗ್ಯಾರಂಟಿ ಯೋಜನೆಗಳು. ರಾಜ್ಯವನ್ನ ಬರ್ಬಾದ್ ಮಾಡ್ತಾರೆ ಅಂತಾ ಬಿಜೆಪಿಗರು.. ಕೆರೆಯ ನೀರನ್ನ ಕೆರೆಗೆ ಚೆಲ್ಲುತ್ತಿದ್ದೇವೆ ಅಷ್ಟೇ ಅಂತಾ ಕಾಂಗ್ರೆಸ್ಸಿಗರು. ಈ ಐದು ಯೋಜನೆಗಳ ಬಗ್ಗೆ ಪರ ವಿರೋಧ ಇದ್ದೇ ಇದೆ. ಅದನ್ನೆಲ್ಲಾ ಪಕ್ಕಕ್ಕಿಟ್ಟು ನೋಡೋದಾದ್ರೆ ಕಾಂಗ್ರೆಸ್ ತಾನು ಕೊಟ್ಟ ಮಾತಿನಂತೆ ಐದು ಗ್ಯಾರಂಟಿಗಳನ್ನ ಜಾರಿ ಮಾಡಿದೆ. ಅದ್ಧೂರಿಯಾಗಿ ಕಾರ್ಯಕ್ರಮ ಆಯೋಜನೆ ಮಾಡಿ ಚಾಲನೆ ನೀಡಿದೆ. ಹಾಗಂತ ಇಷ್ಟಕ್ಕೇ ಜವಾಬ್ದಾರಿ ಮುಗೀಲಿಲ್ಲ. ಅಸಲಿ ಆಟ ಈಗ ಶುರುವಾಗಿದೆ. ಸರ್ಕಾರದ ಮುಂದೆ ಸಾಲು ಸಾಲು ಸವಾಲುಗಳಿವೆ. ಯಾಕಂದ್ರೆ ಈಗಾಗಲೇ ಜಾರಿಗೊಳಿಸಿರುವ ಯೋಜನೆಗಳಿಗೇ ಹಣ ಹೊಂದಿಸೋಕೆ ಸಾಧ್ಯವಾಗ್ತಿಲ್ಲ.
ಮಹಿಳೆಯರಿಗೆ ಸರ್ಕಾರಿ ಬಸ್ ಗಳಲ್ಲಿ ಫ್ರೀಯಾಗಿ ಸಂಚಾರ ಮಾಡಲು ಶಕ್ತಿ ಯೋಜನೆ ಜಾರಿಗೊಳಿಸಲಾಗಿತ್ತು. ಮಹಿಳಾ ಪ್ರಯಾಣಿಕರು ನಿರೀಕ್ಷೆಗೂ ಮೀರಿ ಬಸ್ ಗಳಲ್ಲಿ ಪ್ರಯಾಣಿಸ್ತಿದ್ದಾರೆ. ಆದ್ರೆ ಸರ್ಕಾರ ಸಾರಿಗೆ ನಿಗಮಗಳಿಗೆ ಭರಿಸಬೇಕಿದ್ದ ಹಣ ಸರಿಯಾಗಿ ನೀಡುತ್ತಿಲ್ಲ ಎಂಬ ಆರೋಪ ಇದೆ. ಹಾಗೇ ಗೃಹಲಕ್ಷ್ಮೀ ಯೋಜನೆ ಜಾರಿಯಾಗಿದ್ದರೂ ಕೂಡ ಫಲಾನುಭವಿಗಳ ಖಾತೆಗೆ ಸರಿಯಾಗಿ ಹಣ ತಲುಪುತ್ತಿಲ್ಲ. ಪ್ರತೀ ತಿಂಗಳು ಮಹಿಳೆಯರು ಹಣಕ್ಕಾಗಿ ಸರ್ಕಾರಿ ಕಚೇರಿಗಳಿಗೆ ಅಲೆಯುವಂತಾಗಿದೆ. ಇನ್ನು ಅನ್ನಭಾಗ್ಯ ಯೋಜನೆಯ ಉದ್ದೇಶವೇ ಬದಲಾಗಿ ಹೋಗಿದೆ. 10 ಕೆಜಿ ಅಕ್ಕಿ ಕೊಡೋಕೆ ಅಕ್ಕಿ ಸಿಗ್ತಿಲ್ಲ ಅಂತಾ 5 ಕೆಜಿ ಅಕ್ಕಿ ಇನ್ನು ಉಳಿದ 5 ಕೆಜಿ ಅಕ್ಕಿಗೆ ಬದಲಾಗಿ ಹಣ ನೀಡಲಾಗ್ತಿದೆ. ಆದ್ರೆ ಬಹುತೇಕ ಮಂದಿ ನಮಗೆ ಹಣ ಬೇಡ ಅಕ್ಕಿ ಕೊಡಿ ಅಂತಿದ್ದಾರೆ. ಹಾಗೇ ಅಕ್ಕಿ ಬದಲಾಗಿ ನೀಡುತ್ತಿರುವ ಹಣವೂ ಸರಿಯಾಗು ತಲುಪುತ್ತಿಲ್ಲ. ಇನ್ನೂ ಗೃಹಜ್ಯೋತಿ ಯೋಜನೆ ಕೂಡ ಸರ್ಕಾರಕ್ಕೇ ಹೊರೆಯಾಗುತ್ತಿದೆ.
ಇಲ್ಲಿ ಇನ್ನೊಂದು ಟ್ವಿಸ್ಟ್ ಇದೆ. ಅದೇನಂದ್ರೆ ಐದು ಗ್ಯಾರಂಟಿಗಳ ಪರಿಣಾಮಕಾರಿ ಜಾರಿಗೆ ರಾಜ್ಯ ಮಟ್ಟದ ಸಮಿತಿಯನ್ನು ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಸಮಿತಿಯಲ್ಲಿ ರಾಜ್ಯಮಟ್ಟದಲ್ಲಿ ಅಧ್ಯಕ್ಷರು, ಐದು ಜನ ಉಪಾಧ್ಯಕ್ಷರು ಇರಲಿದ್ದಾರೆ. ಅಧ್ಯಕ್ಷರಾದವರಿಗೆ ಸಂಪುಟ ದರ್ಜೆ ಸ್ಥಾನಮಾನ ಇರಲಿದೆ. ಉಪಾಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನ ನೀಡಲಾಗುತ್ತದೆ. ರಾಜ್ಯ ಮಟ್ಟದ ಸಮಿತಿಗೆ 31 ಜನ ಸದಸ್ಯರು ಇರಲಿದ್ದಾರೆ. ಕ್ಷೇತ್ರ ಮಟ್ಟದ ಅಧ್ಯಕ್ಷರಿಗೂ ಸುಮಾರು 25,000 ರೂ. ಗೌರವ ಧನ ನೀಡುವ ಚಿಂತನೆ ಇದೆ. ಇವರಿಗೆ ನೀಡೋ ಹಣವನ್ನೂ ಸರ್ಕಾರವೇ ಭರಿಸಲಿದೆ. ಇದಕ್ಕಾಗಿ ವಾರ್ಷಿಕ 25 ಕೋಟಿ ರೂಪಾಯಿ ಖರ್ಚಾಗುತ್ತೆ ಎನ್ನಲಾಗಿದೆ. ಸರ್ಕಾರದ ಇದೇ ನಿರ್ಧಾರ ವಿಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ತೀವ್ರ ಬರಗಾಲವಿದ್ರೂ ರೈತರಿಗೆ ಪರಿಹಾರ ನೀಡಲು ಕಾಂಗ್ರೆಸ್ ಸರ್ಕಾರದ ಬಳಿ ಹಣವಿಲ್ಲ. ಆದರೆ ಕಾಂಗ್ರೆಸ್‌ನ ಚೇಲಾಗಳಿಗೆ ಬಿರಿಯಾನಿ ಊಟ ಕೊಡಿಸಲು, ಮಜಾ ಮಾಡಲು ಕೋಟ್ಯಂತರು ರೂಪಾಯಿ ಇವರ ಬಳಿ ಇದೆ ಕಿಡಿ ಕಾರಿದ್ದಾರೆ. ಹಾಗಂತ ಇಲ್ಲಿ ಬರೀ ಗ್ಯಾರಂಟಿ ಯೋಜನೆಗಳಿಗಷ್ಟೇ ಹಣದ ಕೊರತೆ ಇಲ್ಲ. ರಾಜ್ಯದ ಸರ್ವಾಂಗೀಣ ಅಭಿವೃದ್ಧಿಯೂ ಕುಂಠಿತವಾಗ್ತಿದೆ.
ರಾಜ್ಯದಲ್ಲಿ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿರುವ ಕಾಂಗ್ರೆಸ್ ಸರ್ಕಾರಕ್ಕೆ ಇತರ ಅಭಿವೃದ್ಧಿ ಯೋಜನೆಗಳಿಗೆ ಹಣ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಸರ್ಕಾರ ರಚನೆಯಾದಾಗಿನಿಂದಲೂ ವಿರೋಧ ಪಕ್ಷಗಳು ಇದನ್ನೇ ಹೇಳಿಕೊಂಡು ಬರ್ತಿದೆ. ರಾಜ್ಯದ ಹಲವು ಪ್ರದೇಶಗಳು, ಶಾಸಕರ ಕ್ಷೇತ್ರಗಳಿಗೆ ಅಭಿವೃದ್ಧಿ ಯೋಜನೆಗಳಿಗೆ ಹಣ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ನೀರಾವರಿ ಕ್ಷೇತ್ರದ ತಜ್ಞರ ಪ್ರಕಾರ, ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಹಣವನ್ನು ಹೊಂದಿಸಲು ಸರ್ಕಾರಕ್ಕೆ ಕಷ್ಟವಾಗುತ್ತಿದೆ. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ಕೃಷ್ಣಾ ಭಾಗ್ಯ ಜಲ ನಿಗಮ ಲಿಮಿಟೆಡ್ ಮತ್ತು ಕರ್ನಾಟಕ ನೀರಾವರಿ ನಿಗಮ ಲಿಮಿಟೆಡ್ ನೀರಾವರಿ ಯೋಜನೆಗಳಿಗೆ 20,000 ಕೋಟಿ ರೂಪಾಯಿ ಮೌಲ್ಯದ ಟೆಂಡರ್‌ಗಳನ್ನು ಕರೆಯಲಾಗಿತ್ತು. ಆದ್ರೀಗ ಸಿದ್ದರಾಮಯ್ಯ ಸರ್ಕಾರ ಅವುಗಳನ್ನ ಸ್ಥಗಿತಗೊಳಿಸಿದೆ. ಅಲ್ಲದೆ ಪ್ರತಿಯೊಬ್ಬ ಶಾಸಕರಿಗೆ ಶಾಸಕರ ನಿಧಿಯಡಿ 50 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ. ಈ ಹಣ ಒಂದು ರಸ್ತೆಯನ್ನು ಅಭಿವೃದ್ಧಿಪಡಿಸಲು ಕೂಡ ಸಾಕಾಗುತ್ತಿಲ್ಲ.
ಹೀಗೆ ಸರ್ಕಾರದ ಬೊಕ್ಕಸದಲ್ಲಿ ಹಣದ ಕೊರತೆ ಕಾಡುತ್ತಿದ್ರೆ ಬಿಜೆಪಿ ನಾಯಕರಿಗೆ ಇದು ಅಸ್ತ್ರವಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದು 7 ತಿಂಗಳಾದ್ರೂ ಅಭಿವೃದ್ಧಿ ಶೂನ್ಯ. ಸ್ಲೀಪಿಂಗ್ ಸರ್ಕಾರ ಎಂದು ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದೆ. ಸರ್ಕಾರ ಅಂದಮೇಲೆ ವಿಪಕ್ಷಗಳ ಟೀಕೆ ಇದ್ದಿದ್ದೇ. ಆದ್ರೆ ಕೆಲವೊಂದನ್ನ ಸೂಕ್ಷ್ಮವಾಗಿ ಗಮನಿಸಿದಾಗ ಕಾಂಗ್ರೆಸ್ ಸರ್ಕಾರದ ಮುಂದೆ ಹತ್ತಾರು ಸವಾಲುಗಳಿರೋದು ಗೊತ್ತಾಗುತ್ತೆ. ಗ್ಯಾರಂಟಿಗಳ ಯೋಜನೆಗೆ ಹಣ ಹೊಂದಿಸಲು ಒದ್ದಾಡ್ತಿರೋ ಸರ್ಕಾರದಿಂದ ಅಭಿವೃದ್ಧಿ ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಮೂಡೋದು ಸಹಜ.