ಬಿಸಿಯೂಟ ಮಾಡಿ ಬಡಿಸುವ ತಾಯಂದಿರ ಸಂಬಳಕ್ಕೇ ಕತ್ತರಿ? – ನವೆಂಬರ್ ತಿಂಗಳಿಂದಲೇ ಸಂಬಳ ಪಾವತಿ ಬಾಕಿ..!

ಬಿಸಿಯೂಟ ಮಾಡಿ ಬಡಿಸುವ ತಾಯಂದಿರ ಸಂಬಳಕ್ಕೇ ಕತ್ತರಿ? – ನವೆಂಬರ್ ತಿಂಗಳಿಂದಲೇ ಸಂಬಳ ಪಾವತಿ ಬಾಕಿ..!

ಗ್ಯಾರಂಟಿಗಳ ಮೇಲೆ ಗ್ಯಾರಂಟಿಗಳನ್ನ ಘೋಷಿಸಿ ಎಲ್ಲವನ್ನೂ ಜಾರಿಗೊಳಿಸಿ ನುಡಿದಂತೆ ನಡೆದಿದ್ದೇವೆ ಎಂದು ಕಾಂಗ್ರೆಸ್ ಸರ್ಕಾರ ಹೇಳಿಕೊಳ್ತಿದೆ. ಕೊಟ್ಟ ಮಾತನ್ನ ಈಡೇರಿಸಿದ್ದಾರೆ ಅನ್ನೋದನ್ನ ನಾವೂ ಒಪ್ಪಿಕೊಳ್ತೇವೆ. ಆದ್ರೆ ಬಡಾಯಿ ಕೊಚ್ಚಿಕೊಳ್ತಿರೋ ಸರ್ಕಾರ ಈಗ ನೌಕರರ ಹೊಟ್ಟೆ ಮೇಲೆ ಹೊಡೆಯೋ ಕೆಲಸ ಮಾಡ್ತಿದೆ. ಅದ್ರಲ್ಲೂ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಮಾಡಿ ಬಡಿಸುವ ತಾಯಂದಿರ ಸಂಬಳಕ್ಕೇ ಕತ್ತರಿ ಹಾಕಿದೆ. ಮೂರು ತಿಂಗಳಿಂದ ವೇತನ ಕೊಡದೆ ಸತಾಯಿಸುತ್ತಿದೆ. ಅಧಿಕಾರಿಗಳನ್ನ ಕೇಳಿದ್ರೆ ಇವತ್ತು ಬರುತ್ತೆ ನಾಳೆ ಬರುತ್ತೆ ಅಂತಾ ಸಬೂಬು ಹೇಳಿಕೊಂಡು ಹೋಗ್ತಿದ್ದಾರೆ.

ಇದನ್ನೂ ಓದಿ: ಬೇರೆ ಕ್ಷೇತ್ರದಿಂದ ಸ್ಪರ್ಧೆ ಮಾಡಲ್ಲ ಎಂದು ಬಿಜೆಪಿಗೆ ಸುಮಲತಾ ಎಚ್ಚರಿಕೆ- ಮಂಡ್ಯದಿಂದ ಕಣಕ್ಕಿಳಿಯುತ್ತಾರಾ ಕುಮಾರಸ್ವಾಮಿ?

ರಾಜ್ಯದ ಸುಮಾರು 47 ಸಾವಿರದಷ್ಟು ಸರ್ಕಾರಿ ಶಾಲೆಗಳೂ ಸೇರಿದಂತೆ ಅನುದಾನಿತ ಶಾಲೆಗಳ ಮಕ್ಕಳಿಗೆ ಬಿಸಿಯೂಟ ತಯಾರಿಸಲು ಅಡುಗೆ ಸಿಬ್ಬಂದಿ ನೇಮಕವಾಗಿ ದಶಕಗಳೇ ಕಳೆದಿವೆ. ಆದರೆ ಅವರಿಗೆ ಕನಿಷ್ಠ ವೇತನ ಇನ್ನೂ ಜಾರಿಯಾಗಿಲ್ಲ. ಇವತ್ತಲ್ಲ, ನಾಳೆಯಾದರೂ ವೇತನ ಏರಿಕೆಯಾಗುತ್ತದೆ ಎಂಬ ನಂಬಿಕೆಯಲ್ಲಿ ಬಿಸಿಯೂಟ ಸಿಬ್ಬಂದಿ ಕಾಯುತ್ತಾ ಇದ್ದಾರೆ. ಆದ್ರೆ ವಿಪರ್ಯಾಸ ನೋಡಿ ಕೊಡಬೇಕಾದ ಹಣವೇ ಇನ್ನೂ ಬಂದಿಲ್ಲ.  ಸರ್ಕಾರ  ನಿಗದಿಪಡಿಸಿದ ಸಮಯಕ್ಕಿಂತಲೂ ಹೆಚ್ಚಿನ ಹೊತ್ತು ಸಿಬ್ಬಂದಿ ಅಡುಗೆ ಕೋಣೆಯಲ್ಲಿ ಕಳೆಯುತ್ತಾರೆ. ಬೆಳಗ್ಗೆ ಶಾಲೆಗೆ ಆಗಮಿಸಿದರೆ, ಮಧ್ಯಾಹ್ನ ಎಲ್ಲ ಕೆಲಸ ಮುಗಿಸಿ, ಮನೆಗೆ ತೆರಳುವ ವೇಳೆಗೆ 3 ಗಂಟೆ ಕಳೆದಿರುತ್ತದೆ. ಹೀಗಿದ್ರೂ ಸಂಬಳ ಮಾತ್ರ ಸರಿಯಾಗಿ ಕೈಗೆ ಬರ್ತಿಲ್ಲ. ಇದಕ್ಕಾಗಿ ಅಡುಗೆ ನಿಲ್ಲಿಸಿ ಪ್ರತಿಭಟನೆಯನ್ನೂ ಮಾಡಿದ್ದಾಗಿದೆ. ಆದ್ರೆ  ಏನೂ ಪ್ರಯೋಜನ ಆಗಿಲ್ಲ. ಬಿಸಿಯೂಟ ಸಿಬಂದಿಗೆ ವೇತನ ನೀಡದೆ ಮೂರು ತಿಂಗಳುಗಳು ಕಳೆದಿವೆ. ಸುಮಾರು 1.2 ಲಕ್ಷಕ್ಕೂ ಅಧಿಕ ಅಡುಗೆ ಸಿಬ್ಬಂದಿಗೆ ನವೆಂಬರ್ ತಿಂಗಳಿಂದಲೇ ಸಂಬಳ ಪಾವತಿ ಬಾಕಿ ಇದೆ. ಬಿಸಿಯೂಟ ಸಿಬ್ಬಂದಿಗೆ ಕೊಡೋದೇ 3,700 ರೂಪಾಯಿ. ಅದನ್ನೂ ಸರಿಯಾಗಿ ಪಾವತಿ ಮಾಡ್ತಿಲ್ಲ.

ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಬಿಸಿಯೂಟ ಸಿಬ್ಬಂದಿಗೂ ಭರವಸೆ ನೀಡಿತ್ತು. ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಮಾಸಿಕ 1 ಸಾವಿರ ರೂಪಾಯಿ ಸೇರಿಸಿ ವೇತನ ಸರಿಯಾದ ಸಮಯಕ್ಕೆ ಪಾವತಿಸುವುದಾಗಿ ಘೋಷಿಸಿತ್ತು. ಆದ್ರೆ ಹೆಚ್ಚುವರಿ ಇರಲಿ ಇರೋ ಸಂಬಳವನ್ನೇ ಕೊಡ್ತಿಲ್ಲ. ಹಾಗಂತ ಈ ಸಿಬ್ಬಂದಿಗೆ ಸಂಬಳ ಏನು ಲಕ್ಷಗಟ್ಟಲೆ ಇಲ್ಲ.

ಮಧ್ಯಾಹ್ನದ ಉಪಾಹಾರ ಯೋಜನೆಯಡಿ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿದೆ. 1ರಿಂದ 8ನೇ ತರಗತಿಗೆ ಸಂಬಂಧಿಸಿದಂತೆ ಮಧ್ಯಾಹ್ನದ ಉಪಾಹಾರ ಯೋಜನೆಯ ವೆಚ್ಚಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೀಮದ 60:40 ರ ಅನುಪಾತದಲ್ಲಿ ಭರಿಸಲಾಗುತ್ತದೆ. 9ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಉಪಾಹಾರ ಯೋಜನೆಯನ್ನು ಸಂಪೂರ್ಣವಾಗಿ ರಾಜ್ಯ ಸರಕಾರದಿಂದಲೇ ಭರಿಸಲಾಗುತ್ತಿದೆ. ಸದ್ಯ  ಮುಖ್ಯ ಅಡುಗೆಯವರಿಗೆ ಮಾಸಿಕವಾಗಿ 3700 ರೂಪಾಯಿ ಮತ್ತು ಸಹಾಯಕ ಅಡುಗೆಯವರಿಗೆ 3600 ರೂಪಾಯಿ ಗೌರವ ಸಂಭಾವನೆ ನೀಡಲಾಗುತ್ತಿದೆ.

ಇನ್ನು ಬಿಸಿಯೂಟ ತಯಾರಕರು ಮಧ್ಯಾಹ್ನದವರೆಗೆ ಮಾತ್ರ ಕರ್ತವ್ಯ ಸಲ್ಲಿಸುತ್ತಾರೆ. ಇದೇ ಕಾರಣ ನೀಡಿ  ಕರ್ನಾಟಕ ಕನಿಷ್ಠ ವೇತನ ನಿಯಮಗಳು ನಿಗದಿಪಡಿಸಿದಂತೆ ಕೆಲಸ ನಿರ್ವಹಿಸುತ್ತಿಲ್ಲ ಎಂದು ಹೆಚ್ಚುವರಿ ವೇತನ ನೀಡ್ತಿಲ್ಲ. ಏನೇ ಹೇಳಿ ಬೆಳಗ್ಗೆಯೇ ಬಂದು ಮಕ್ಕಳಿಗೆ ಹಾಲು, ಊಟ ತಯಾರಿಸಿ ಕೊಡುವ ಸಿಬ್ಬಂದಿಗೇ ಸರ್ಕಾರ ವೇತನ ನೀಡಲು ಆಗ್ತಿಲ್ಲ. ಬಹುಶಃ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿದ ಉತ್ಸಾಹದಲ್ಲಿ ಬೇರೆ ಯೋಜನೆಗಳನ್ನ ಮರೆತು ಬಿಡ್ತಾ ಎಂಬ ಅನುಮಾನ ಮೂಡ್ತಿದೆ.

 

Sulekha