ಬನ್ಸ್, ಖೀರು, ಮುದ್ದೆ.. ಇಂದಿರಾ ಕ್ಯಾಂಟೀನ್ ಮೆನುನಲ್ಲಿ ಬದಲಾವಣೆ ಮಾಡಿದ ಸರ್ಕಾರ!
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್‌ಗಳನ್ನು ಹೊಸ ರೂಪ ನೀಡಲು ಮುಂದಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಇಂದಿರಾ ಕ್ಯಾಂಟೀನ್‌ಗಳ ದುರಸ್ತಿ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಅಷ್ಟೇ ಅಲ್ಲ, ಜ.16ರಿಂದ ಹೊಸ ಗುತ್ತಿಗೆದಾರರರಿಂದ ಹೊಸ ಮೆನು ಒದಗಿಸಲು ಬಿಬಿಎಂಪಿ ಯೋಜಿಸಿದೆ.
ಹೌದು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಇಂದಿರಾ ಕ್ಯಾಂಟೀನ್‌ನ ಮೆನುವಿನಲ್ಲಿ ಸಾಕಷ್ಟು ಬದಲಾವಣೆ ಮಾಡುತ್ತಿದೆ. ಇದೀಗ ಮತ್ತೆ ಇಂದಿರಾ ಕ್ಯಾಂಟೀನ್‌ನ ಆಹಾರದ ಮೆನುವಿನಲ್ಲಿ ಹಲವು ಹೊಸ ಹೊಸ ತಿನಿಸುಗಳನ್ನು ನಿಗದಿಪಡಿಸಿದೆ. ಕ್ಯಾಂಟೀನ್‌ನಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮುದ್ದೆ ಸೇರಿದಂತೆ ಕೆಲ ಖಾದ್ಯಗಳನ್ನು ಮೆನುವಿನಲ್ಲಿ ಸೇರಿಸಿದೆ.
ಇದನ್ನೂ ಓದಿ: ಕುಲದೇವತೆ ಅಂತಾ ರೈತರು ಪೂಜಿಸಿದ್ದು ಕಲ್ಲಲ್ಲ.. ಡೈನೋಸಾರ್ ಮೊಟ್ಟೆ!
ಹೊಸ ಮೆನುವಿನ ಪ್ರಕಾರ, ಬೆಳಗ್ಗೆ ಉಪಹಾರಕ್ಕೆ ಒಂದು ಪ್ಲೇಟ್ಗೆ 5 ರೂ ನಿಗದಿಪಡಿಸಲಾಗಿದ್ದು, ಇಡ್ಲಿ (3/150 ಗ್ರಾಂ), ಸಾಂಬಾರ್ (100 ಎಂ.ಎಲ್), ಚಟ್ನಿ (100 ಎಂ.ಎಲ್), ವೆಜ್ ಪುಲಾವ್ (150 ಗ್ರಾಂ), ರಾಯಿತಾ (100 ಎಂಎಲ್), ಬಿಸಿ ಬೇಳೆ ಬಾತ್ (225 ಗ್ರಾಂ), ಬೂಂದಿ (15 ಗ್ರಾಂ), ಖಾರಾಬಾತ್ (150 ಗ್ರಾಂ), ಕೇಸರಿಬಾತ್ (75 ಗ್ರಾಂ), ಬ್ರೆಡ್ ಜಾಮ್ (2 ಪೀಸ್), ಮಂಗಳೂರು ಬನ್ಸ್ (1 ಪೀಸ್/40-50 ಗ್ರಾಂ), ಬನ್ಸ್ (1 ಪೀಸ್/40-50 ಗ್ರಾಂ) ತಿನಿಸುಗಳು ಒಂದೊಂದು ದಿನ ಲಭ್ಯವಾಗಲಿದೆ. ಮಾವಿನ ಕಾಯಿ ದೊರೆಯಲಿರುವ ಕಾಲದಲ್ಲಿ ಯಾವುದಾದರೂ ಒಂದು ಉಪಾಹಾರದಲ್ಲಿ ಮಾವಿನ ಕಾಯಿ ಚಿತ್ರಾನ್ನ ನೀಡಲು ನಿರ್ಧರಿಸಲಾಗಿದೆ.
ಮಧ್ಯಾಹ್ನದ ಊಟಕ್ಕೆ ಒಂದು ಪ್ಲೇಟ್ಗೆ 10 ರೂ. ನಿಗದಿಪಡಿಸಲಾಗಿದ್ದು, ಅನ್ನ (300 ಗ್ರಾಂ), ತರಕಾರಿ ಸಂಬಾರು (150 ಗ್ರಾಂ), ಖೀರು (75 ಎಂ.ಎಲ್), ಮೊಸರನ್ನ (100 ಎಂಎಲ್), ರಾಗಿ ಮುದ್ದೆ (2/100 ಗ್ರಾಂ), ಸೊಪ್ಪಿನ ಸಾರು (75 ಎಂ.ಎಲ್), ಚಪಾತಿ (2/40 ಗ್ರಾಂ), ಸಾಗು, ಖೀರು (75 ಎಂಎಲ್) ಲಭ್ಯವಿದೆ. ರಾತ್ರಿ ಊಟಕ್ಕೆ ಪ್ಲೇಟ್ಗೆ 10 ರೂ. ನಿಗದಿಪಡಿಸಲಾಗಿದ್ದು, ಅನ್ನ, ತರಕಾರಿ ಸಾಂಬಾರು, ರಾಗಿ ಮುದ್ದೆ, ಚಪಾತಿ ಲಭ್ಯವಿದೆ.
ಗುತ್ತಿಗೆದಾರರಿಗೆ ಈ ಷರತ್ತುಗಳು ಅನ್ವಯ
ಇನ್ನು ಇಂದಿರಾ ಕ್ಯಾಂಟೀನ್ ಮೆನುವಿನ ಆಹಾರ ಪೂರೈಕೆ ಮಾಡುವ ಗುತ್ತಿಗೆದಾರರಿಗೆ ಕೆಲ ಷರತ್ತುಗಳನ್ನು ವಿಧಿಸಿದೆ. ಕಳೆದ 10 ವರ್ಷಗಳಲ್ಲಿ 5 ವರ್ಷ ಆಹಾರ ಪೂರೈಸಿ ಅನುಭವ ಹೊಂದಿರಬೇಕು. ವಿದ್ಯುತ್, ನೀರಿನ ಶುಲ್ಕವನ್ನು ಪಾವತಿಸಬೇಕು. ಗ್ರಾಹಕರಿಗೆ ಕುಡಿಯುವ ನೀರು ಒದಗಿಸಬೇಕು. ಸೋಡಾ, ಕೃತಕ ರಾಸಾಯನಿಕ ಬಣ್ಣ, ಅಜಿನೊಮೊಟೊ, ವನಸ್ಪತಿ ಅಥವಾ ಇತರೆ ಕಲುಷಿತ ಎಣ್ಣೆ ಬಳಸುವಂತಿಲ್ಲ. ಗುಣಮಟ್ಟದ ಅಕ್ಕಿ ಮತ್ತು ಎಣ್ಣೆ, ಹಿಟ್ಟು ಬಳಸಬೇಕು. ಎಂದು ಷರತ್ತು ವಿಧಿಸಿದೆ.