ಚಾಕೋಲೆಟ್ ಗೆ ದುಡ್ಡು ಕೊಡದೆ ಗದರಿದ ಅಪ್ಪ – ಸಿಟ್ಟಿನಲ್ಲಿ ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ಹೋದ ಬಾಲಕಿಯರು

ಚಾಕೋಲೆಟ್ ಗೆ ದುಡ್ಡು ಕೊಡದೆ ಗದರಿದ ಅಪ್ಪ – ಸಿಟ್ಟಿನಲ್ಲಿ ಫ್ರೀ ಬಸ್ ಹತ್ತಿ ಧರ್ಮಸ್ಥಳಕ್ಕೆ ಹೋದ ಬಾಲಕಿಯರು

ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಜಾರಿ ಬಳಿಕ ಮಹಿಳೆಯರ ಪ್ರಯಾಣ ಜಾಸ್ತಿಯಾಗಿದೆ. ಅದರಲ್ಲೂ ವಾರಾಂತ್ಯದಲ್ಲಿ ದೇಗುಲಗಳಲ್ಲಿ ಜನಸಾಗರವೇ ತುಂಬಿ ತುಳುಕುತ್ತಿದೆ. ಇದರ ನಡುವೆ ಶಾಲಾ ಬಾಲಕಿಯರಿಬ್ಬರು ಫ್ರೀ ಬಸ್ ಅಂತಾ ಎಡವಟ್ಟು ಮಾಡಿಕೊಂಡಿದ್ದಾರೆ. ಮನೆಯಲ್ಲಿ ಜಗಳ ಮಾಡಿಕೊಂಡು ಸೀದಾ ಬಸ್ ಹತ್ತಿ ಧರ್ಮಸ್ಥಳಕ್ಕೆ ಹೋಗಿದ್ದಾರೆ.

ಮಹಿಳೆಯರಿಗೆ ಫ್ರೀ ಬಸ್ ಪಾಸ್ ಜಾರಿಯಾದ ಮೇಲೆ ನಾರಿಮಣಿಯರ ಓಡಾಟ ಜಾಸ್ತಿಯಾಗಿದೆ. ಇದನ್ನೇ ಲಾಭವಾಗಿ ಮಾಡ್ಕೊಂಡು ಇಬ್ಬರು ಶಾಲಾ ಹುಡುಗಿಯರು ತನ್ನ ಅಪ್ಪನ ಜೊತೆ ಜಗಳ ಮಾಡ್ಕೊಂಡು ಹೇಳದೆ ಕೇಳದೆ ಧರ್ಮಸ್ಥಳ ಕ್ಷೇತ್ರಕ್ಕೆ ಹೋಗಿರುವ ಘಟನೆ ನಡೆದಿದೆ. 10ನೇ ತರಗತಿ ಮತ್ತು 9ನೇ ತರಗತಿಯ ಇಬ್ಬರು ಅಕ್ಕ ತಂಗಿಯರು ಬೆಂಗಳೂರಿನಿಂದ ಸೀದಾ ಧರ್ಮಸ್ಥಳ ಬಸ್‌ ಹತ್ತಿ ಮಂಜುನಾಥನ ಸನ್ನಿಧಾನಕ್ಕೆ ತೆರಳಿದ್ದಾರೆ.

ಇದನ್ನೂ ಓದಿ : ಶಕ್ತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್!‌ – 1 ವಾರದಲ್ಲಿ ಬರೋಬ್ಬರಿ 3,12,09,696 ಮಂದಿ ಮಹಿಳೆಯರು ಪ್ರಯಾಣ

ಎರಡು ದಿನದ ಹಿಂದೆ ಮನೆ ಪಕ್ಕದ ಅಂಗಡಿಗೆ ಬಂದಿದ್ದ 10ನೇ ತರಗತಿ ಓದುತ್ತಿದ್ದ ಅಕ್ಕ ಮತ್ತು 9ನೇ ತರಗತಿ ಓದುತ್ತಿರುವ ತಂಗಿ ಇಬ್ಬರು ಸೇರಿ ಚಾಕೋಲೆಟ್‌ ಖರೀದಿಸಿ ತಿಂದಿದ್ದಾರೆ. ಬಳಿಕ ತನ್ನ ಅಪ್ಪನಿಗೆ ಕರೆ ಮಾಡಿ ಚಾಕೋಲೆಟ್‌ ಖರೀದಿಸಿದ ದುಡ್ಡನ್ನು ಫೋನ್‌ ಪೇ ಮಾಡುವಂತೆ ಹೇಳಿದ್ದಾರೆ. ಆದರೆ ಅಪ್ಪ ಆ ಹುಡುಗಿಯರಿಗೆ ಗದರಿಸಿ ನಿಮ್ಮನ್ನು ಯಾರು ಅಂಗಡಿಗೆ ಹೋಗೋಕೆ ಹೇಳಿದ್ದು, ಆ ಚಾಕೋಲೆಟ್ ವಾಪಸ್ ಕೊಟ್ಟು ಸುಮ್ನೆ ಮನೆಗೆ ಹೋಗಿ ಎಂದು ಬೈದು ಕಾಲ್ ಕಟ್ ಮಾಡಿದ್ದಾರೆ. ಇಷ್ಟಕ್ಕೇ ಬೇಸರ ಮಾಡಿಕೊಂಡ ಹುಡುಗಿಯರು ತನ್ನ ಅಪ್ಪನ ಮೇಲಿನ ಸಿಟ್ಟಿಗೆ ಪಾಠ ಕಲಿಸ್ತೀವಿ ಅಂತೇಳಿ ಮನೆಗೆ ಬಂದು ಒಂದು ಬ್ಯಾಗ್‌ನಲ್ಲಿ ಒಂದೆರಡು ಬಟ್ಟೆ ಹಿಡಿದುಕೊಂಡು ನೇರವಾಗಿ ಸರ್ಕಾರಿ ಉಚಿತ ಬಸ್‌ನಲ್ಲಿ ಕುಳಿತು ಧರ್ಮಸ್ಥಳದತ್ತ ಪ್ರಯಾಣ ಬೆಳೆಸಿದ್ದಾರೆ.

ಇತ್ತ ಸಂಜೆ ಮನೆಗೆ ಬಂದಾಗ ಇಬ್ಬರೂ ಹೆಣ್ಣು ಮಕ್ಕಳು ಮನೆಯಲ್ಲಿ ಇಲ್ಲದೇ ಇರುವುದನ್ನು ಗಮನಿಸಿ ಆತಂಕಗೊಂಡ ಪೋಷಕರು ಎಲ್ಲಿ ಹುಡುಕಿದರೂ ಮಕ್ಕಳು ಕಂಡಿಲ್ಲ. ಅವರಿವರ ಮನೆಗೆ ಫೋನ್ ಮಾಡಿ ಬಂದಿದ್ದಾರಾ ಎಂದು ವಿಚಾರಿಸಿದಾಗ ಇಲ್ಲ ಅನ್ನುವ ಉತ್ತರ ಸಿಕ್ಕಿತ್ತು. ಬಳಿಕ ಆತಂಕಗೊಂಡು ಕೋಣನಕುಂಟೆ ಪೊಲೀಸ್ ಠಾಣೆಗೆ ಬಂದು ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದಾರೆ. ಕೋಣನಕುಂಟೆ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಲ್ಲಾ ಪೊಲೀಸ್ ಸ್ಟೇಷನ್‌ಗೆ ಮಾಹಿತಿ ರವಾನಿಸಿದ್ದಾರೆ. ನಂತರ 2 ದಿನದ ಬಳಿಕ ಇಬ್ಬರೂ ಕೂಡ ಧರ್ಮಸ್ಥಳದಲ್ಲಿ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಬಾಲಕಿಯರಿಗೆ ಬುದ್ಧಿ ಹೇಳಿ ಪೋಷಕರಿಗೆ ಹಸ್ತಾಂತರ ಮಾಡಲು ಪೊಲೀಸರು ಮುಂದಾಗಿದ್ದಾರೆ. ಪೋಷಕರು ಕೂಡ ಮಕ್ಕಳು ಸಿಕ್ಕರಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

suddiyaana