ರಾತ್ರಿ 3 ಗಂಟೆಗೆ 3 ಕಿ.ಮೀ ಒಂಟಿಯಾಗಿ ನಡೆದುಕೊಂಡು ಬಂದ ಮಗು – ಕೊರಗಜ್ಜನ ಪವಾಡದಿಂದ ಮತ್ತೆ ಮನೆ ಸೇರಿದ ಬಾಲಕಿ..!
ಅದು ದಟ್ಟ ರಾತ್ರಿ. ಸಮಯ ಸುಮಾರು 3 ಗಂಟೆ. ಮೈಮೇಲೆ ಚೂರೂ ಬಟ್ಟೆಯಿಲ್ಲ. ಪುಟ್ಟ ಕಂದಮ್ಮ ಅವಳು. ಮನೆಯಲ್ಲಿ ಅಮ್ಮನ ಮಡಿಲಿನಲ್ಲಿ ಮಲಗಿದ್ದವಳು ಇದ್ದಕ್ಕಿದ್ದಂತೆ ಮನೆಯಿಂದ ಹೊರಬಂದಿದ್ದಳು. ಹೀಗೆ ಬಂದವಳು ನಡೆದಿದ್ದು ಸ್ವಲ್ಪ ದೂರ ಅಲ್ಲ. ಮನೆಯಿಂದ ಮೂರು ಕಿಲೋಮೀಟರ್ ಬಂದಾಗಿತ್ತು. ಪಾಪದ ಮಗುವಿಗೆ ನಡೆದು ನಡೆದು ಸುಸ್ತಾದ ಮೇಲೆ ನಿದ್ದೆಯಿಂದ ಎಚ್ಚರವಾಗಿತ್ತು. ಸುತ್ತ ಮುತ್ತ ಯಾರೂ ಇಲ್ಲ. ಕಗ್ಗತ್ತಲ ರಾತ್ರಿ. ಭಯದಿಂದ ಅಳುತ್ತಿದ್ದಳು. ಆದರೆ, ಅವಳು ಬಂದು ನಿಂತ ಜಾಗದಲ್ಲಿಯೇ ಕೊರಗಜ್ಜನ ಗುಡಿಯಿತ್ತು. ನಂತರ ನಡೆದಿದ್ದು ನಿಜಕ್ಕೂ ಪವಾಡವೇ ಸರಿ.
ಇದನ್ನೂ ಓದಿ: ‘ಉಪವಾಸ ಮಾಡಿದರೆ ಯೇಸುವನ್ನ ಭೇಟಿ ಮಾಡಬಹುದು’ – ನಕಲಿ ಪಾದ್ರಿ ಮಾತು ನಂಬಿ 403 ಜನ ಸಾವು, 610 ಜನ ನಾಪತ್ತೆ
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಕೆದೂರಿನಲ್ಲಿ ಈ ವಿಚಿತ್ರ ಘಟನೆಯೊಂದು ನಡೆದಿದೆ. ಬುಧವಾರ ರಾತ್ರಿ 3 ಗಂಟೆ ಸುಮಾರಿಗೆ ಪುಟ್ಟ ಬಾಲಕಿ ಕೊರಗಜ್ಜನ ಗುಡಿಯ ಫಲಕದ ಕೆಳಗೆ ಒಂಟಿಯಾಗಿ ನಿಂತಿದ್ದಳು. ಒಮ್ಮೆಲೆ ಯಾರಾದರೂ ನೋಡಿದರೆ ನಿಜಕ್ಕೂ ಬೆಚ್ಚಿಬೀಳುವಂತಾ ದೃಶ್ಯವೇ. ಯಾಕೆಂದರೆ ಪುಟ್ಟ ಬಾಲೆಯ ಮೈಮೇಲೆ ಬಟ್ಟೆಯೂ ಇಲ್ಲ. ಒಬ್ಬಳೇ ನಿಂತು ಅಳುತ್ತಿದ್ದಳು. ಆಗ ಅದೇ ದಾರಿಯಲ್ಲಿ ಕೆಲಸ ಮುಗಿಸಿ ಬರುತ್ತಿದ್ದ ವಿಶ್ವ ಎನ್ನುವವರು ಮಗುವನ್ನು ನೋಡಿ ಕಾರು ನಿಲ್ಲಿಸಿದ್ದಾರೆ. ಬಳಿಕ ಮಗುವನ್ನು ಮಾತಾಡಿಸಿದಾಗ ನಿದ್ದೆ ಕಣ್ಣಿನಿಂದ ನಡೆದುಕೊಂಡು ಬಂದ ವಿಷಯ ಬೆಳಕಿಗೆ ಬಂದಿದೆ. ನಂತರ ವಿಶ್ವ ಅವರು ಮಗುವನ್ನು ಮನೆಗೆ ಬಿಟ್ಟು ಬಂದಿದ್ದಾರೆ. ಅವರಿಗೂ ಆಶ್ಚರ್ಯ. ಯಾಕೆಂದರೆ ಪುಟ್ಟ ಬಾಲೆ ನಡೆದುಕೊಂಡು ಬಂದಿದ್ದು ಬರೋಬ್ಬರಿ ಮೂರು ಕಿಲೋಮೀಟರ್. ಸದ್ಯ ಮಗು ಮರಳಿ ಮನೆ ಸೇರಿರುವುದು ಕೊರಗಜ್ಜನ ಪವಾಡದಿಂದಲೇ. ಕೊರಗಜ್ಜನೇ ಮಗುವನ್ನು ಕಾಪಾಡಿದ್ದು ಎಂದು ಜನ ಮಾತಾಡಿಕೊಳ್ಳುತ್ತಿದ್ದಾರೆ.
ಆದರೆ, ಈ ಬಗ್ಗೆ ಮಗುವಿನ ತಾಯಿ ಕೊಟ್ಟ ಹೇಳಿಕೆ ಗೊಂದಲಕ್ಕೀಡುಮಾಡಿದೆ. “ಯಾವುದಾದರೂ ವಿಷಯಕ್ಕೆ ಹೆದರಿದರೆ ಮಗು ನಿದ್ರೆಯಲ್ಲಿ ನಡೆಯುತ್ತದೆ. ಇದೇ ರೀತಿ ಮಗು ಮನೆಯಿಂದ ಪಕ್ಕದ ಮನೆಗೆ ನಿದ್ರೆಯಲ್ಲಿ ನಡೆದು ಹೋಗಿದೆ. ನಮ್ಮ ಮನೆಯಿಂದ ಯಾವತ್ತೂ ದೂರ ಹೋಗಿಲ್ಲ. ಆದರೆ ವೈರಲ್ ಮಾಡುವ ದೃಷ್ಟಿಯಿಂದ ಮಗುವಿನ ವಿಡಿಯೋ ವೈರಲ್ ಮಾಡಲಾಗುತ್ತಿದೆ. ಈ ಕುರಿತು ನಾವು ಪೊಲೀಸರಿಗೂ ಮಾಹಿತಿ ನೀಡಿದ್ದೇವೆ” ಎಂದು ಮಗುವಿನ ತಾಯಿ ತಿಳಿಸಿದ್ದಾರೆ.