ಪಶ್ಚಿಮ ಮತ್ತು ಪೂರ್ವ ಘಟ್ಟಗಳಿಗೂ ಕಾದಿದ್ಯಾ ಆಪತ್ತು! – ಭೂವಿಜ್ಞಾನಿಗಳು ಹೇಳಿದ್ದೇನು?

ಪಶ್ಚಿಮ ಮತ್ತು ಪೂರ್ವ ಘಟ್ಟಗಳಿಗೂ ಕಾದಿದ್ಯಾ ಆಪತ್ತು! – ಭೂವಿಜ್ಞಾನಿಗಳು ಹೇಳಿದ್ದೇನು?

ಬೆಂಗಳೂರು: ಅಭಿವೃದ್ಧಿ ಚಟುವಟಿಕೆಗಳನ್ನು ಇನ್ನೂ ಮುಂದುವರೆಸಿದರೆ ಉತ್ತರಾಖಂಡದ ಜೋಶಿಮಠದಲ್ಲಿ ಸಂಭವಿಸಿದ ದುರಂತವೇ, ಪಶ್ಚಿಮ ಮತ್ತು ಪೂರ್ವ ಘಟ್ಟಗಳಲ್ಲಿಯೂ ಸಂಭವಿಸಲಿದೆ ಅಂತ ತಜ್ಞರು ಹಾಗೂ ಭೂವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಕೆಲವು ವರ್ಷಗಳಿಂದ ರಾಜ್ಯದ ಹಲವೆಡೆ ಭೂಕಂಪ, ಭೂಕುಸಿತ ಪ್ರವಾಹಗಳು ಎದುರಾಗುತ್ತಿದೆ. ಇದು ಎಚ್ಚರಿಕೆಯ ಗಂಟೆಗಳನ್ನು ನೀಡುತ್ತಿದೆ. ಇದನ್ನು ಸರ್ಕಾರ ಮತ್ತು ಸ್ಥಳೀಯರು ನಿರ್ಲಕ್ಷಿಸುತ್ತಿದ್ದಾರೆ. ಹೀಗೆ ನಿರ್ಲಕ್ಷ್ಯತನ ಮುಂದುವರೆದರೆ ದೊಡ್ಡ ಅಪಾಯ ಕಟ್ಟಿಟ್ಟಬುಟ್ಟಿ ಅಂತ ಭೂವಿಜ್ಞಾನಿಗಳು ತಿಳಿಸಿದ್ದಾರೆ. .

ದುರ್ಬಲವಿರುವ ಪ್ರದೇಶಗಳ ಭೂ-ವೈಜ್ಞಾನಿಕ ಮ್ಯಾಪಿಂಗ್ ಅನ್ನು ಕೈಗೊಳ್ಳಬೇಕು ಮತ್ತು ರಸ್ತೆ ನಿರ್ಮಾಣ ಕಾಮಗಾರಿಗಳು, ರೆಸಾರ್ಟ್ ಗಳು ಮತ್ತು ಇತರ ಚಟುವಟಿಕೆಗಳಿಗಾಗಿ ದೊಡ್ಡ ದೊಡ್ಡ ಬಂಡೆಗಳನ್ನು ಸ್ಫೋಟಿಸುತ್ತಿದ್ದಾರೆ. ಇಂತಹ ಚಟುವಟಿಕೆಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ಭೂವಿಜ್ಞಾನಿಗಳು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಒಕ್ಕಲಿಗ ಹಾಗೂ ಲಿಂಗಾಯತ ಪಂಚಮಸಾಲಿ 2 ಸಿ, 2 ಡಿ ಮೀಸಲಾತಿಗೆ ಹೈಕೋರ್ಟ್ ತಡೆ

“ಸರ್ಕಾರವು ನದಿ ತಿರುವು ಮತ್ತು ಹೈಡಲ್ ಯೋಜನೆಗಳನ್ನು ಕೈಗೊಳ್ಳುವುದಾಗಿ ಘೋಷಿಸಿದಾಗ ಪ್ರದೇಶಗಳ ಸೂಕ್ಷ್ಮತೆಯ ಬಗ್ಗೆ ಮಾಹಿತಿ ನೀಡಲಾಗಿತ್ತು. ಆದರೆ, ಸರ್ಕಾರವು ಯಾವುದೇ ಜಲವಿಜ್ಞಾನ, ಭೂವೈಜ್ಞಾನಿಕ ಮತ್ತು ಪರಿಸರ ಪ್ರಭಾವದ ಮೌಲ್ಯಮಾಪನಗಳನ್ನು ಕೈಗೊಳ್ಳದೆ ಘೋಷಣೆಗಳನ್ನು ಮುಂದುವರೆಸಿದೆ. ಜೋಶಿಮಠದಲ್ಲಿ ಸೇನಾ ನೆಲೆಯೂ ಇರುವುದರಿಂದ ಒತ್ತುವರಿ ತೆರವು ಕಾರ್ಯ ಚುರುಕುಗೊಂಡಿದೆ. ಅಭಿವೃದ್ಧಿ ಕಾರ್ಯಗಳನ್ನು ಕೂಡಲೇ ನಿಲ್ಲಿಸದಿದ್ದರೆ, ಪಶ್ಚಿಮ ಮತ್ತು ಪೂರ್ವ ಘಟ್ಟಗಳಲ್ಲಿ ಇದೇ ರೀತಿ ಪರಿಸ್ಥಿತಿ ಎದುರಾಗಬಹುದು” ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಹಿರಿಯ ಭೂವಿಜ್ಞಾನಿಯೊಬ್ಬರು ಎಚ್ಚರಿಸಿದ್ದಾರೆ.

ಪಶ್ಚಿಮ ಘಟ್ಟಗಳಲ್ಲಿ, ನಗರೀಕರಣ ಮತ್ತು ಇತರ ಚಟುವಟಿಕೆಗಳಿಂದ ಈಗಾಗಲೇ ಸಣ್ಣ ಅವಘಡಗಳು ಆರಂಭವಾಗಿವೆ. ಸಮಸ್ಯೆ ಬಗೆಹರಿಸಲು ಸರ್ಕಾರದ ಪ್ರತಿಕ್ರಿಯೆ ಅಗತ್ಯವಿದೆ. ಯಾವುದೇ ಭೂವೈಜ್ಞಾನಿಕ ಅಥವಾ ಭೂ-ವೈಜ್ಞಾನಿಕ ಮ್ಯಾಪಿಂಗ್ ಇಲ್ಲದೆ ನಡೆಸುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಕೂಡಲೇ ನಿಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಬ್ರೇಕ್ಥ್ರೂ ಸೈನ್ಸ್ ಸೊಸೈಟಿಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕೋಲ್ಕತ್ತಾದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರಿಸರ್ಚ್ (IISER) ಪ್ರೊಫೆಸರ್ ಸೌಮಿತ್ರೋ ಬ್ಯಾನರ್ಜಿ ಅವರು ಮಾತನಾಡಿ, ಜೋಶಿಮಠ ಮತ್ತು ಹಿಮಾಲಯವು ಟೆಕ್ಟೋನಿಕ್ ಪ್ಲೇಟ್ ಗಳ ಮೇಲೆ ನೆಲೆಗೊಂಡಿದೆ. ಆದರೆ ಪಶ್ಚಿಮ ಘಟ್ಟಗಳು ನೈಸರ್ಗಿಕ ಭೂವಿಜ್ಞಾನವನ್ನು ಹೊಂದಿವೆ. ಆದರೂ, ಅಪಾಯ ಸಂಭವಿಸುವುದಕ್ಕೂ ಮುನ್ನ ಎಚ್ಚರಿಕೆ ಕ್ರಮಗಳ ಕೈಗೊಳ್ಳುವುದು ಅಗತ್ಯವಿದೆ. ಪ್ರದೇಶಗಳ ವಿವರವಾದ ವೈಜ್ಞಾನಿಕ ಮೌಲ್ಯಮಾಪನದ ಅಗತ್ಯವಿದೆ. ಜೋಶಿಮಠದಲ್ಲಿ ಸಂಭವಿಸಿದ ಪರಿಸ್ಥಿತಿ ಇಲ್ಲಿ ಎದುರಾಗುವುದಕ್ಕೂ ಮುನ್ನವೇ ಮುಂಜಾಗ್ರತಾ ಕ್ರಮಗಳ ಕೈಗೊಳ್ಳಲು ಇದು ಸಕಾಲವಾಗಿದೆ ಎಂದು ತಿಳಿಸಿದ್ದಾರೆ.

suddiyaana