ಕಾಲುವೆಗೆ ಬಿದ್ದ ಆನೆಮರಿಯನ್ನು ರಕ್ಷಿಸಿದ ಅರಣ್ಯ ಸಿಬ್ಬಂದಿ – ಸೊಂಡಿಲೆತ್ತಿ ನಮಸ್ಕರಿಸಿದ ತಾಯಿ ಆನೆ!

ಕಾಲುವೆಗೆ ಬಿದ್ದ ಆನೆಮರಿಯನ್ನು ರಕ್ಷಿಸಿದ ಅರಣ್ಯ ಸಿಬ್ಬಂದಿ – ಸೊಂಡಿಲೆತ್ತಿ ನಮಸ್ಕರಿಸಿದ ತಾಯಿ ಆನೆ!

ಅರಣ್ಯ ನಾಶದಿಂದಾಗಿ ಕಾಡು ಪ್ರಾಣಿಗಳು ನಾಡಿನತ್ತ ಮುಖ ಮಾಡಿವೆ. ಹಲವು ಕಡೆಗಳಲ್ಲಿ ಆನೆ ದಾಳಿ ವರದಿಯಾಗುತ್ತಲೇ ಇದೆ. ಇದೀಗ ಇಲ್ಲೊಂದು ಆನೆ ಹಾಗೂ ಅದರ ಮರಿ ಜನವಸತಿ ಪ್ರದೇಶಕ್ಕೆ ಆಗಮಿಸಿದ್ದು, ಆನೆ ಮರಿ ಕಾಲುವೆ ಬಿದ್ದಿದೆ. ಆನೆ ಮರಿಯನ್ನು ರಕ್ಷಿಸಿದ ಅರಣ್ಯ ಇಲಾಖೆ ಹಾಗೂ ನಾಗರಿಕರಿಗೆ ತಾಯಿ ಆನೆಯೊಂದು ಸೊಂಡಿಲೆತ್ತಿ ನಮಸ್ಕರಿಸಿದೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಇದನ್ನೂ ಓದಿ: ನೀನು ಇಲ್ಲಿ ಹೀರೋ ಆಗಬೇಕಂತಿಲ್ಲ – ಸರ್ಫರಾಜ್ ಖಾನ್‌ಗೆ ಕ್ಯಾಪ್ಟನ್ ರೋಹಿತ್ ಶರ್ಮಾ ಕ್ಲಾಸ್

ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಪೊಲ್ಲಾಚಿಯಲ್ಲಿ ಈ ಮನಮುಟ್ಟುವ ಘಟನೆ ನಡೆದಿದೆ. ತಾಯಿಯೊಂದಿಗೆ ಸುತ್ತಾಡುತ್ತಿದ್ದ ಪುಟಾಣಿ ಮರಿಯಾನೆಯೊಂದು  ಪೊಲ್ಲಾಚಿಯಲ್ಲಿರುವ ಕಾಲುವೆಗೆ ಬಿದ್ದಿದೆ.  ಕಾಲುವೆಗೆ ಬಿದ್ದ ಮರಿಯನ್ನು ರಕ್ಷಿಸಲು ತಾಯಿ ಇನ್ನಿಲ್ಲದ ಪ್ರಯತ್ನ ಮಾಡಿದೆ. ಆದರೆ ನೀರಿನ ಹರಿವು ಬಲವಾಗಿದ್ದ ಕಾರಣ ಪುಟಾಣಿ ಮರಿಗೆ ಏನು ಮಾಡಿದರೂ ಕಾಲುವೆಯಿಂದ ಮೇಲೆ ಬರುವುದಕ್ಕೆ ಸಾಧ್ಯವಾಗಿಲ್ಲ, ಈ ಹಿನ್ನೆಲೆಯಲ್ಲಿ ತಾಯಿ ದಿಕ್ಕು ತೋಚದೆ ಅಲೆದಾಡಿದೆ. ಇತ್ತ ಈ ವಿಚಾರ ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿದಿದ್ದು, ಕಾಲುವೆಯಿಂದ ಆನೆಮರಿಯನ್ನು ರಕ್ಷಿಸಲು ಸಿಬ್ಬಂದಿ ಸರ್ವಪ್ರಯತ್ನ ಮಾಡಿದ್ದು, ಅದರಲ್ಲಿ ಯಶಸ್ವಿಯೂ ಆಗಿದ್ದಾರೆ. ಕಾಲುವೆಗೆ ಇಳಿದ ಸಿಬ್ಬಂದಿ ಆನೆ ಮರಿಯನ್ನು ನಿಧನವಾಗಿ ಮೇಲೆತ್ತಿ ರಕ್ಷಣೆ ಮಾಡಿದ್ದಾರೆ. ಜೊತೆಗೆ ಮರಿಯನ್ನು ತಾಯಿಯೊಂದಿಗೆ ಒಟ್ಟು ಗೂಡಿಸಿದ್ದಾರೆ. ಇತ್ತ ಆ ಸ್ಥಳದಿಂದ ಮರಿಯೊಂದಿಗೆ ತೆರಳುವ ಮುನ್ನ ತಾಯಾನೆ ಕಾಲುವೆಯಿಂದ ತನ್ನ ಮರಿಯನ್ನು ರಕ್ಷಣೆ ಮಾಡಿದ ಅರಣ್ಯ ಇಲಾಖೆ ಸಿಬ್ಬಂದಿಗೆ ಸೊಂಡಿಲೆತ್ತಿ ನಮಸ್ಕರಿಸುವ ಮೂಲಕ ಕೃತಜ್ಞತೆ ಸಲ್ಲಿಸಿದೆ. ಇದರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಐಎಎಸ್ ಅಧಿಕಾರಿ ಹಾಗೂ ತಮಿಳುನಾಡಿನ ಪರಿಸರ ಹಾಗೂ ಹವಾಮಾನ ಬದಲಾವಣೆ ಹಾಗೂ ಅರಣ್ಯದ ಮುಖ್ಯ ಕಾರ್ಯದರ್ಶಿಯಾಗಿರುವ ಸುಪ್ರಿಯಾ ಸಾಹು ಅವರು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ʼತಾಯಿ ಆನೆ ತನ್ನ ತುಂಬಾ ಎಳೆಯ ಮರಿಯನ್ನು ರಕ್ಷಿಸಿ ತನ್ನೊಂದಿಗೆ ಮತ್ತೆ ಸೇರಿಸಿದ  ಅರಣ್ಯ ಇಲಾಖೆ ಸಿಬ್ಬಂದಿಯನ್ನು ನೋಡಿ ಸೊಂಡಿಲೆತ್ತಿ ಕೃತಜ್ಞತೆ ಸಲ್ಲಿಸಿದ ದೃಶ್ಯ ನೋಡಿ ನಮ್ಮ ಹೃದಯ ತುಂಬಿ ಬಂತು. ತಮಿಳುನಾಡಿನ ಕೊಯಂಬತ್ತೂರು ಜಿಲ್ಲೆಯ ಪೊಲ್ಲಾಚಿಯಲ್ಲಿರುವ ಕಾಲುವೆಗೆ ಆನೆ ಮರಿ ಕಾಲು ಜಾರಿ ಬಿದ್ದು ಬಿಟ್ಟಿತ್ತು. ಈ ವೇಳೆ ಮರಿಯನ್ನು ರಕ್ಷಿಸಲು ತಾಯಿ ತನ್ನೆಲ್ಲಾ ಪ್ರಯತ್ನ ಮಾಡಿತ್ತು, ಆದರೆ ನೀರಿನ ಹರಿವು ರಭಸವಾಗಿದ್ದರಿಂದ ತಾಯಿ ಆನೆಗೆ ತನ್ನ ಕಂದನನ್ನು ರಕ್ಷಿಸಲು ಸಾಧ್ಯವಾಗಲಿಲ್ಲ, ಆದರೆ ಈ ಆನೆ ಮರಿಯನ್ನು ರಕ್ಷಿಸುವ ಹಾಗೂ ತಾಯಿಯೊಂದಿಗೆ ಸೇರಿಸುವ ಕಾರ್ಯಾಚರಣೆಯು ಅಪಾಯಗಳಿಂದ ಕೂಡಿದ್ದರೂ ತಾಯಿ ಮರಿಯ ಯಶಸ್ವಿ ಪುನರ್ಮಿಲನಕ್ಕೆ ಕಾರಣವಾದ ಅವರ ಅಸಾಧಾರಣ ಪ್ರಯತ್ನಗಳಿಗೆ ತಂಡಕ್ಕೆ ಅಭಿನಂದನೆಗಳು. ಎಫ್‌ಡಿ ರಾಮಸುಬ್ರಮಣಿಯನ್ , ಡಿಡಿ ಬಿ.ತೇಜಾ, ಪುಗಲೆಂಥಿ ಎಫ್‌ಆರ್‌ಒ, ಫಾರೆಸ್ಟರ್‌ ತಿಲಕರ್, ಫಾರೆಸ್ಟ್ ಗಾರ್ಡ್ ಸರವಣನ್, ವೆಲ್ಲಿಗಿರಿ, ವಾಚರ್ ಮುರಳಿ, ರಾಸು, ಬಾಲು, ನಾಗರಾಜ್, ಮಹೇಶ್, ಚಿನ್ನಾಥನ್ ಮುಂತಾದವರಿಗೆ ತಮ್ಮ ಅದ್ಭುತ ಕಾರ್ಯಕ್ಕಾಗಿ ಧನ್ಯವಾದಗಳು ಎಂದು ಸುಪ್ರಿಯಾ ಸಾಹು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Shwetha M