ಚೀನಾದಿಂದ ಮೊದಲ ಚಾಲಕ ರಹಿತ ರೈಲು ರವಾನೆ – ಯಾವಾಗಿನಿಂದ ಮೆಟ್ರೋ ಸಂಚಾರ ಆರಂಭ?
ಸಿಲಿಕಾನ್ ಸಿಟಿ ಬೆಂಗಳೂರಿಗರ ಪಾಲಿಗೆ ‘ನಮ್ಮ ಮೆಟ್ರೋ’ ರೈಲು ಸಾರಿಗೆ ವ್ಯವಸ್ಥೆಯ ಜೀವನಾಡಿ ಎಂದೆನಿಸಿದೆ. ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತು, ಲಕ್ಷಾಂತರ ಜನರು ಮೆಟ್ರೋ ಮೂಲಕವೇ ಪ್ರಯಾಣಿಸ್ತಿದ್ದಾರೆ. ಬಿಎಂಆರ್ಸಿಎಲ್ ಕೂಡ ನಮ್ಮ ಮೆಟ್ರೋವನ್ನು ವಿಸ್ತರಿಸುತ್ತಲೇ ಇದೆ. ಇದೀಗ ಎಲೆಕ್ಟ್ರಾನಿಕ್ಸ್ ಸಿಟಿಗೆ ಸಂಪರ್ಕ ಕಲ್ಪಿಸುವ ನಮ್ಮ ಮೆಟ್ರೋದ ಆರ್.ವಿ.ರಸ್ತೆ-ಬೊಮ್ಮಸಂದ್ರ (18.82 ಕಿ.ಮೀ.) ಹಳದಿ ಮಾರ್ಗಕ್ಕೆ ಚಾಲಕ ರಹಿತ ರೈಲು ಫೆಬ್ರವರಿ ಮಧ್ಯಂತರ ಅಥವಾ ಅಂತ್ಯಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಮೂರು ದಿನ ಮೆಟ್ರೋ ಸಂಚಾರ ಸ್ಥಗಿತ – ಹಸಿರು ಮಾರ್ಗದ ಪ್ರಯಾಣದಲ್ಲಿ ವ್ಯತ್ಯಯ
ಹೌದು, ಬಿಎಂಆರ್ಸಿಎಲ್ ಅಧಿಕಾರಿಗಳ ತಂಡ ರೈಲಿನ ಪರೀಕ್ಷೆಗಳಿಗಾಗಿ ಇತ್ತೀಚೆಗೆ ಚೀನಾಕ್ಕೆ ಭೇಟಿ ನೀಡಿತ್ತು. ಕಳೆದ ಜ.20ರಂದು ಚೀನಾದಿಂದ ರೈಲನ್ನು ಕಳುಹಿಸಲಾಗಿದೆ. ಈ ರೈಲು ಫೆಬ್ರವರಿ ಮಧ್ಯಂತರ ಅಥವಾ ಅಂತ್ಯಕ್ಕೆ ಚೆನ್ನೈ ಬಂದರಿಗೆ ತಲುಪುವ ಸಾಧ್ಯತೆಯಿದ್ದು, ಅಲ್ಲಿಂದ ರಸ್ತೆ ಮೂಲಕ ಹೆಬ್ಬಗೋಡಿ ಡಿಪೋಗೆ ರಸ್ತೆ ಮೂಲಕ ಬರಲಿದೆ. ಈ ರೈಲು ಬೆಂಗಳೂರಿಗೆ ತಲುಪಿದ ಬಳಿಕ ಸುಮಾರು ಮೂರು ತಿಂಗಳು ಪ್ರಾಯೋಗಿಕ ಚಲನೆ ಮಾಡಲಾಗುವುದು. ಇನ್ನೊಂದು ರೈಲು ಕೂಡ ಶೀಘ್ರವೇ ಚೀನಾದಿಂದ ಬರಲಿದೆ ಎಂದು ಬಿಎಂಆರ್ಸಿಎಲ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಒಟ್ಟೂ 216 ಕೋಚ್ಗಳನ್ನು ಸಿಆರ್ಆರ್ಸಿ ನಿಂಜಾಂಗ್ ಪುಜ್ಹೆನ್ ಈ ರೈಲುಗಳನ್ನು ಪೂರೈಸಲು ಒಪ್ಪಂದವಾಗಿದ್ದು, ಮೂಲ ಮಾದರಿಯ ಎರಡು ರೈಲನ್ನು ಚೀನಾ ನಿರ್ಮಿಸಿಕೊಡಲಿದೆ. ಇದರ ಸಹ ಸಂಸ್ಥೆಯಾಗಿರುವ ಕೋಲ್ಕತ್ತಾದ ತೀತಾಘರ್ ರೈಲ್ ಫ್ಯಾಕ್ಟರಿ ಉಳಿದ ಕೋಚ್ಗಳನ್ನು ನಿರ್ಮಿಸಿಕೊಡಲಿದೆ. ಫೆಬ್ರವರಿಗೆ ಈ ರೈಲು ಬಂದರೂ ಸೆಪ್ಟೆಂಬರ್ನಿಂದ ಹಳದಿ ಮಾರ್ಗ ಜನಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆಯಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಚಾಲಕ ರಹಿತ ರೈಲಿನ ವಿಶೇಷತೆ?
ಚಾಲಕ ರಹಿತ ರೈಲು ಇದಾಗಿದ್ದು, ಈಗ ಸಂಚರಿಸುತ್ತಿರುವ ರೈಲಿನ ವಿನ್ಯಾಸಕ್ಕಿಂತ ಸಂಪೂರ್ಣ ಭಿನ್ನವಾಗಿರಲಿದೆ. ಕಮಾಂಡ್ ಆ್ಯಂಡ್ ಕಂಟ್ರೋಲ್ ರೂಮ್ ಮೂಲಕ ನಿರ್ವಹಿಸಲಾಗುತ್ತದೆ. ಚಾಲಕ ಇಲ್ಲದೇ ಈ ಮೆಟ್ರೋ ಗಂಟೆಗೆ 80 ಕಿಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರಲಿದೆ. ಇನ್ನುಳಿದಂತೆ ಎಲ್ಲ ಬೋಗಿಗಳಲ್ಲಿ ಸಿಸಿ ಕ್ಯಾಮೆರಾ ಬೋಗಿಗಳಲ್ಲಿ ಅಳವಡಿಸಲಾಗಿದೆ. ಆದರೆ, ಆರಂಭದಿಂದಲೇ ಚಾಲಕ ರಹಿತ ರೈಲು ಸಂಚರಿಸುವುದು ಅನುಮಾನ, ಎರಡು ವರ್ಷ ಚಾಲಕರು ಇದನ್ನು ಚಾಲನೆ ಮಾಡಲಿದ್ದು, ಬಳಿಕ ಚಾಲಕ ರಹಿತ ವ್ಯವಸ್ಥೆ ಅನುಷ್ಠಾನಗೊಳ್ಳುವ ಸಾಧ್ಯತೆಯಿದೆ.