ಮಗನ ಮದುವೆಗೆ ತಂದೆಯೇ ದುಷ್ಮನ್!‌ – ಗಡ್ಡ ಶೇವ್‌ ಮಾಡಿಲ್ಲವೆಂದು ಮದುವೆಯನ್ನೇ ಕ್ಯಾನ್ಸಲ್‌ ಮಾಡಿದ ಅಪ್ಪ!

ಮಗನ ಮದುವೆಗೆ ತಂದೆಯೇ ದುಷ್ಮನ್!‌ – ಗಡ್ಡ ಶೇವ್‌ ಮಾಡಿಲ್ಲವೆಂದು ಮದುವೆಯನ್ನೇ ಕ್ಯಾನ್ಸಲ್‌ ಮಾಡಿದ ಅಪ್ಪ!

ಮದುವೆ ಸಮಾರಂಭ ಅಂದಾಗ ಅಲ್ಲಿ ಸಣ್ಣಪುಟ್ಟ ಮನಸ್ತಾಪಗಳು ಇದ್ದೇ ಇರುತ್ತವೆ. ಊಟದಲ್ಲಿ ಉಪ್ಪಿಲ್ಲ.. ವಧು ಅಥವಾ ವರನ ಮನೆಯವರು ಗೌರವ ನೀಡುತ್ತಿಲ್ಲ.. ಅದು ಸರಿಯಾಗಿಲ್ಲ.. ಇದು ಸರಿಯಾಗಿಲ್ಲ ಅಂತಾ ಏನಾದರೂ ಸಣ್ಣ ಪುಟ್ಟ ವಿಚಾರಕ್ಕೆ ಮನಸ್ತಾಪಗಳು ಉಂಟಾಗುತ್ತವೆ. ಕೆಲವೊಂದು ಬಾರಿ ಸಣ್ಣ ಮನಸ್ತಾಪಗಳು ದೊಡ್ಡದಾಗಿ ಮದುವೆಯೇ ರದ್ದಾಗುತ್ತವೆ.  ಇದೀಗ ಇಲ್ಲೊಂದು ಕಡೆ ವರನ ಗಡ್ಡದ ವಿಚಾರವಾಗಿ ಮದುವೆಯೇ ರದ್ದಾಗಿದೆ. ಈ ಮದುವೆಗೆ ವರನ ತಂದೆಯೇ ದುಷ್ಮನ್‌!

ಈ ವಿಚಿತ್ರ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ. ಸೂಲೂರು ಪ್ರದೇಶದ ಕೈಗಾರಿಕೋದ್ಯಮಿಯೊಬ್ಬರು ತಮ್ಮ ಮಗನಿಗೆ ಮದುವೆ ಮಾಡಿಸಲು ಮುಂದಾಗಿದ್ದಾರೆ. ಸುಮಾರು ಮೂರು ತಿಂಗಳ ಹಿಂದೆ ಅವರ ಮಗನಿಗೆ ಪೊಲ್ಲಾಚಿಯ ಯುವತಿಯೊಂದಿಗೆ ನಿಶ್ಚಿತಾರ್ಥ ಮಾಡಿಸಲಾಗಿತ್ತು. ಎರಡೂ ಮನೆಯವರು ಮೂರು ತಿಂಗಳಿಂದ ಮದುವೆ ಕೆಲಸದಲ್ಲಿ ತೊಡಗಿದ್ದಾರೆ. ಬಂಧು ಮಿತ್ರರನ್ನು ಮದುವೆಗೆ ಆಹ್ವಾನಿಸಿದ್ದಾರೆ. ವರನೂ ಕೂಡ ಮದುವೆ ಕೆಲಸದ ಜತೆಗೆ ತನ್ನ ಭಾವಿ ಪತ್ನಿಯೊಂದಿಗೆ ಫೋನ್‌ನಲ್ಲಿ ಮಾತನಾಡುವುದರಲ್ಲಿ ನಿರತನಾಗಿದ್ದನು. ಕೊನೆಗೆ ಮದುವೆ ಸಮಯದಲ್ಲಿ ಗಡ್ಡ ತೆಗೆದು ನೀಟಾಗಿ ಶೇವ್ ಮಾಡುವಂತೆ ಮದುಮಗನಿಗೆ ತಂದೆ ಸಲಹೆ ನೀಡುತ್ತಿದ್ದರು.

ಇದನ್ನೂ ಓದಿ: ಬ್ಯಾಂಕಾಕ್‌ನಿಂದ ಬಂದವನ ಬ್ಯಾಗ್‌ನಲ್ಲಿತ್ತು ಮೊಸಳೆ, ಕಾಂಗರೂ ಸೇರಿ 234  ಅಪರೂಪದ ವನ್ಯಜೀವಿಗಳು!

ಮದುವೆಗೆ ಎಲ್ಲವೂ ತಯಾರಿ ನಡೆದಿತ್ತು. ತಂದೆ ಹೇಳಿದಂತೆ ವರ ಕೂಡ ವರ ಗಡ್ಡ ತೆಗೆಸಿ ಕ್ಲೀನ್ ಶೇವ್ ಮಾಡಿಕೊಳ್ಳಲು ಹೇರ್​ಕಟಿಂಗ್​​ ಶಾಪ್​ಗೆ ಹೋಗಿದ್ದಾರೆ. ಆದರೆ ಏನಾಯಿತೋ ಗೊತ್ತಿಲ್ಲ, ಗಡ್ಡ ಶೇವ್​ ಮಾಡಿಕೊಂಡು ಬರದೇ ಆತ ಟ್ರಿಮ್ ಮಾಡಿಕೊಂಡು ಮನೆಗೆ ಬಂದಿದ್ದಾನೆ. ಇದನ್ನು ಕಂಡ ತಂದೆಗೆ ಕೋಪ ನೆತ್ತಿಗೇರಿದೆ. ಯಾಕೆ ನೀಟಾಗಿ ಶೇವ್ ಮಾಡಿಲ್ಲ ಎಂದು ಕೇಳಿದ್ದಾರೆ. ಆಗ ಯುವಕ ಭಾವಿ ಪತ್ನಿ ಗಡ್ಡವನ್ನು ನೀಟಾಗಿ ಶೇವ್​ ಮಾಡದೇ ಸ್ವಲ್ಪ ಟ್ರಿಮ್ ಮಾಡುವಂತೆ ಸೂಚಿಸಿದ್ದಾಗಿ ತಂದೆಗೆ ತಿಳಿಸಿದ್ದಾನೆ.

ಈ ಉತ್ತರವನ್ನು ಕೇಳಿ ತಂದೆ ಗಾಬರಿಯಾಗಿದ್ದು, ಮದುವೆಗೂ ಮುನ್ನವೇ ಆತನ ಮಾತಿಗೆ ಬೆಲೆ ಇಲ್ಲವಾದರೆ ಹೇಗೆ ಎಂದು ಕೇಳಿದ್ದಾರೆ. ಅಲ್ಲದೇ, ಗಡ್ಡ ತೆಗೆದರೆ ಮಾತ್ರ ಮದುವೆ ಎಂದು ಖಡಾಖಂಡಿತವಾಗಿ ಅವರು ಹೇಳಿದಾಗ ವರನು ತನ್ನ ತಂದೆಗೆ ಮನವರಿಕೆ ಮಾಡಲು ಪ್ರಯತ್ನಿಸಿದ್ದಾನೆ. ಆದರೆ, ತಂದೆ ತಮ್ಮ ನಿರ್ಧಾರವನ್ನು ಬದಲಿಸದೇ ಪಟ್ಟು ಹಿಡಿದಿದ್ದಾರೆ. ಕೊನೆಗೆ ಮದುವೆ ಕ್ಯಾನ್ಸಲ್ ಆಗಿರುವುದಾಗಿ ಸಂಬಂಧಿಕರಿಗೆ ಹಾಗೂ ವಧುವಿನ ಕಡೆಯವರಿಗೆ ಸಂದೇಶ ರವಾನಿಸಿದ್ದಾರೆ ಎಂದು ವರದಿಯಾಗಿದೆ.

suddiyaana