ಗೃಹ ಇಲಾಖೆಯ ವೈಫಲ್ಯವೇ ಭ್ರೂಣ ಹತ್ಯೆಗೆ ಕಾರಣ – ಯತ್ನಾಳ್‌ ಕಿಡಿ

ಗೃಹ ಇಲಾಖೆಯ ವೈಫಲ್ಯವೇ ಭ್ರೂಣ ಹತ್ಯೆಗೆ ಕಾರಣ – ಯತ್ನಾಳ್‌ ಕಿಡಿ

ಬೆಂಗಳೂರು: ರಾಜ್ಯದಲ್ಲಿ ಭ್ರೂಣ ಹತ್ಯೆ ಹಾಗೂ ಮಕ್ಕಳ ಮಾರಾಟ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿದೆ. ಇದೀಗ ಮೈಸೂರು ಹಾಗೂ ಮಂಡ್ಯದಲ್ಲಿ ನಡೆದ ಹೆಣ್ಣು ಭ್ರೂಣ ಹತ್ಯೆ  ಪ್ರಕರಣದ ವಿಚಾರವಾಗಿ ಗೃಹ ಸಚಿವ ಪರಮೇಶ್ವರ್ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಬಿಜೆಪಿ ಮುಖಂಡ ಬಸವನಗೌಡ ಪಾಟೀಲ್ ಯತ್ನಾಳ್ ಕಿಡಿ ಕಾರಿದ್ದಾರೆ.

ಇದನ್ನೂ ಓದಿ: ಹಸುಗೂಸು ಮಾರಾಟ ದಂಧೆ‌ ಪ್ರಕರಣ – ಮಹಿಳಾ ಏಜೆಂಟ್‌ ಹಾಗೂ ನಕಲಿ ವೈದ್ಯ ಅರೆಸ್ಟ್!

ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಅವರು, ಭ್ರೂಣ ಹತ್ಯೆ ಪ್ರಕರಣದಲ್ಲಿ ರಾಜ್ಯದ ಒಬ್ಬ ಹಿರಿಯ ಐಪಿಎಸ್ ಅಧಿಕಾರಿ ಹಾಗೂ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಂದ ಅಸಹಾಯಕ ಮಾತುಗಳನ್ನು ನಿರೀಕ್ಷಿಸರಲಿಲ್ಲ. ಗೃಹ, ಪೊಲೀಸ್ ಹಾಗೂ ಬೇಹುಗಾರಿಕೆ ಇಲಾಖೆಯ ಸಾಮೂಹಿಕ ವೈಫಲ್ಯವೇ ಭ್ರೂಣ ಹತ್ಯೆಗೆ ಕಾರಣವಾಗಿದೆ. ಈ ಇಲಾಖೆಗಳು ಸರಿಯಾಗಿ ಕಾರ್ಯ ನಿರ್ವಹಿಸಿದ್ದರೆ ಭ್ರೂಣ ಹತ್ಯೆ ತಡೆಯಬಹುದಿತ್ತು ಎಂದು ಆಕ್ರೋಶ ಹೊರಹಾಕಿದ್ದಾರೆ.

ಸೊಪ್ಪು, ಹಣ್ಣು ಮಾರುವವರನ್ನು ಎತ್ತಂಗಡಿ ಮಾಡುವುದನ್ನು ಬಿಟ್ಟು, ಸಿವಿಲ್ ವ್ಯಾಜ್ಯಗಳಲ್ಲಿ ಮೂಗು ತೂರಿಸುವುದನ್ನು ಬಿಟ್ಟು, ಕೊಟ್ಟಿರುವ ಗಸ್ತು ವಾಹನದಲ್ಲಿ ವಸೂಲಿ, ಹಫ್ತಾ ತೆಗೆಯುವುದು ಬಿಟ್ಟು, ಕಟ್ಟು ನಿಟ್ಟಾಗಿ ಕೆಲಸ ಮಾಡಿದ್ದರೆ ಕಂದಮ್ಮಗಳ ಮಾರಣಹೋಮ ತಪ್ಪುತಿತ್ತು ಎಂದು ಅವರು ಕಿಡಿಕಾರಿದ್ದಾರೆ.

Shwetha M